Thursday, June 24, 2010

ಪ್ರವಾಸದ ನೆನಪುಗಳು . . . . .


'ಮಳೆ' ಎಂಬ ಪ್ರಕೃತಿ ವಿಲಾಸ ನನ್ನನ್ನು ಯಾವಾಗಲೂ ಮಂತ್ರಮುಗ್ಧನನ್ನಾಗಿಸುತ್ತೆ. ವಿಳಂಬದ ಗತ್ತು ,ಮಧ್ಯಮ ಕಾಲದ ಲಾಸ್ಯ, ದುರಿತ ಕಾಲದ ರಭಸ ಎಲ್ಲವೂ ರಸ ಸೃಷ್ಟಿಯ ವಿವಿಧ ಮಜಲುಗಳಷ್ಟೇ. ರಸವು ಸದಾ ಇದ್ದುದೇ ಆದರೆ ರಸಿಕನ (ಅಂದರೆ ಮಳೆಯನ್ನೂ ನೋಡಿ ಆನಂದಿಸುವವನ) ದೃಷ್ಟಿಯಲ್ಲಿ ಅದು ರಸ 'ಸೃಷ್ಟಿ'. ಜೀವಾತ್ಮನ ದೃಷ್ಟಿಯಲ್ಲಿ ಜ್ಞಾನ ಸಾಂತ ಅನ್ನುವಂತೆ! . ಈ ಬಾರಿ ಒಳ್ಳೇ ಮಳೆಯಾಗಲಿ ಎಂದು ಶಂಕರನಲ್ಲಿ ಬಲವಾದ ಬೇಡಿಕೆ ಸಲ್ಲಿಸಿದ್ದೆ. ಆತ ಶೀಘ್ರ ವರ ಪ್ರಸಾದಿ ಎಂಬ ಬಿರುದು ಹೊತ್ತವನಲ್ಲವೇ!. ಆ ಬಿರುದನ್ನಾದರೂ ಸಾರ್ಥಕ ಗೊಳಿಸಿಕೊಳ್ಳಬೇಕೆಂದು ಸಕಾಲಕ್ಕೆ ಮೇಘ ಸೇನೆಯನ್ನು ಕಳುಹಿಸಿ ಕರಾವಳಿಯಲ್ಲಿ ಸಂಚಲನ ಉಂಟು ಮಾಡುತ್ತಿದ್ದಾನೆಂದೂ, ಹಾಗೇ ತನ್ನ ಮೇಘ ಸೈನ್ಯವನ್ನು ಮಲೆನಾಡಿಗೂ ನುಗ್ಗಿಸುತ್ತಿದ್ದಾನೆಂದೂ ಮಾಧ್ಯಮಗಳ ಮೂಲಕ ತಿಳಿದ ನಮಗೆ ಪ್ರಕೃತಿಯು ಸೃಷ್ಟಿಗಾಗಿ ಪ್ರಾಣ ಶಕ್ತಿ ತುಂಬುವ ಈ ಪರ್ವ ಕಾಲದಲ್ಲಿ ಘಟ್ಟ ಪ್ರದೇಶವನ್ನ ಒಂದೆರಡು ದಿನವಾದರೂ ನೋಡಿ ಬಂದರೆ ಎಷ್ಟು ಸೊಗಸು ಎಂದೆನಿಸಿ ಕೆಲವು ಕ್ಷೇತ್ರಗಳಿಗೆ ಭೇಟಿ ಕೊಡುವುದು ಎಂದು ತೀರ್ಮಾನಿಸಿದೆವು . ನನಗೆ ಹೆಚ್ಚು ವಸ್ತ್ರ ಇತ್ಯಾದಿ ಪರಿಕರಗಳನ್ನು ತೆಗೆದುಕೊಂಡು ಹೋಗುವುದೆಂದರೆ ಇರುಸು ಮುರುಸು . ಇದನ್ನು ಆದಷ್ಟು ಕಮ್ಮಿ ಮಾಡುವುದೇ ನನ್ನ ಮೊದಲ ಆದ್ಯತೆ. (ಮಳೆಗಾಲದಲ್ಲಿ ಕೇವಲ ಒಂದು ಕೊಡೆಯಷ್ಟೇ ತೆಗೆದುಕೊಂಡು ಹೋಗ್ತೇನೆ ಬೇರೆ ಉಡುಪುಗಳು ತೆಗೆದು ಕೊಳ್ಳಲಾರೆ ಎಂದು ಹೇಳಿ ಅಪ್ಪನಿಂದ ಮಂಗಳಾರತಿ ಎತ್ತಿಸಿಕೊಂಡಿದ್ದಾಯಿತು ಆದರೂ ನನ್ನ ಮಾತಿಗೆ ನಾನು ಬದ್ಧನಾಗಿದ್ದೇ ;)), ಭೇಟಿ ಮಾಡುವ ಸ್ಥಳಗಳಲ್ಲಿ ದೇವಸ್ಥಾನಾದಿಗಳು ಇದ್ದರೆ ಒಳ್ಳೆಯದು ಇದು ನನ್ನ ಮತ್ತೊಂದು ಅನುಕೂಲಸಿಂಧು ಆಲೋಚನೆ. ಊಟಕ್ಕೆ ತೊಂದರೆ ಇರೋದಿಲ್ಲವಲ್ಲ!. ಮಠ ಇರತ್ತೆ. ಶುದ್ಧವಾದ ಆಹಾರ ಸಿಗತ್ತೆ. ಬ್ರಾಹ್ಮಣ ಪಂಕ್ತಿ ಅನ್ನೋ ಮೀಸಲಾತಿ ಬೇರೆ ! ಊಟದಲ್ಲಾದರೂ ದೊರೆಯುವ ಈ ಮೀಸಲಾತಿ ಬಿಡುವ ಮನಸ್ಸು ನನಗೆಂದೂ ಬಂದಿಲ್ಲವಷ್ಟೆ! ಬೇರೆ ಜಾತಿಯವರ ಜೊತೆ ತಿನ್ನಬಾರದೆಂಬ ಗೊಡ್ಡು ಮಡಿವಂತಿಕೆಯೂ ಇಲ್ಲ ಹಾಗೇ ಈ ಬ್ರಾಹ್ಮಣ ಪಂಕ್ತಿಯನ್ನು ಕಿತ್ತೊಗೆಯಬೇಕೆಂಬ ಬಂಡಾಯ ಪ್ರವೃತ್ತಿಯೂ ಬಲಿತಿಲ್ಲ.;) ಹೀಗೆಲ್ಲ ಏನೇನೋ ಯೋಚಿಸಿ ಕೊಲ್ಲೂರಿಂದ ಮೊದಲು ಮಾಡಿ ಶೃಂಗೇರಿಯ ತನಕ ಒಂದಷ್ಟು ಸ್ಥಳಗಳನ್ನ ಮಳೆಯೊಂದಿಗೆ ನೋಡುವ ಎಂದು ನಿರ್ಧರಿಸಿ ಹೊರಟೆವು .

ಕೊಲ್ಲೂರು ಮೂಕಾಂಬಿಕೆಯ ಪದತಲದಲ್ಲಿ

ಬುಧವಾರ ರಾತ್ರಿ ಸ್ನೇಹಿತನೊಡನೆ ಹೊರಟೆ. ಬಸ್ ಸರಿಯಾದ ಸಮಯಕ್ಕೆ ಹೊರಟಿತು. 'ರಾಜ ಹಂಸ' ಅದರ ಹೆಸರಿಗೆ ತಕ್ಕಂತೆ ಇರಲಿಲ್ಲ. ಹಂಸದ ಆಸನಗಳು ಬೆನ್ನು ಮೂಳೆಯ ಸ್ಥಿರತೆಗೆ ಸವಾಲಾಗಿದ್ದವು. ಆಸನಗಳ ಮೇಲ್ಪದರದ ಅಂಚುಗಳಲ್ಲಿ ನಮ್ಮ ಚರ್ಮಗಳನ್ನು ಕಿತ್ತು ತಿನ್ನುವ ರಕ್ತ ಪಿಪಾಸುಗಳಿದ್ದವು ಎಂಬುದು ನಮಗೆ ಬಹಳ ತಡವಾಗಿ ತಿಳಿಯಿತು. ಪರಿಣಾಮದ ನಂತರ ಕಾರಣ ತಿಳಿದಂತೆ . ಸಾರಿಗೆ ಸಂಸ್ಥೆಯವರಿಗೆ ,ಸಾರಿಗೆ ಸಚಿವನಿಗೆ ಮನಸ್ಸಿಗೆ ತೋಚಿದವರಿಗೆಲ್ಲರಿಗೂ ಹಿಡಿ ಶಾಪ ,ಕಿಡಿ ಶಾಪ ಎಲ್ಲವೂ ಹಾಕಿದ ಮೇಲೆಯೇ ಮೈಮೇಲೆ ಎದ್ದ ದದ್ದುಗಳು ಸ್ವಲ್ಪ ಕಡಿಮೆ ಯಾಗಿದ್ದು(ಆದಂತೆ ಭಾಸವಾಗಿದ್ದು ಎಂದರೆ ಹೆಚ್ಚು ಸೂಕ್ತವೇನೋ!). ದದ್ದುಗಳ ಉರಿ ಮಾತಿನ ಮೂಲಕ ಹೋಯಿತೇನೋ ! ದಾರಿ ಉದ್ದಕ್ಕೂ ಒಂದಿನಿತೂ ಮಳೆಯಿಲ್ಲ. ಅರೇ ! ಇದೇನು ಮಾಧ್ಯಮದವರೆಲ್ಲಾ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ ಮಳೆಯ ಬಗ್ಗೆ ,ಇಲ್ಲಿ ನೋಡಿದರೆ ಅದರ ಕುರುಹೇ ಇಲ್ಲ ಅನ್ನೋ ರೀತಿ ಇತ್ತು ವಾತಾವರಣ. ನೋಡು ಮನೆಯಲ್ಲಿ ಈ ಹಾಳು ಟಿವಿ ನೋಡಿ ನಮಗೆ ಉದ್ದುದ್ದ ಸಲಹೆ ಕೊಟ್ಟರು ಇಲ್ಲಿ ಮಳೆಯೇ ಇಲ್ಲ. ಅಪ್ಪ ಫೋನಿಸಿದರೆ ಚೆನ್ನಾಗಿ ಆಡಿಕೊಳ್ಳುತ್ತೇನೆ ಅಂತಿದ್ದ ಸ್ನೇಹಿತ. ಕೊಲ್ಲೂರು ಸೇರಿದಾಗ ಬೆಳಿಗ್ಗೆ ೬ ಘಂಟೆ .ಕಾಲು ಕೆಳಕ್ಕಿಟ್ಟ ತಕ್ಷಣ ಧೋ! ಅನ್ನೋ ಮಳೆ. ನಾವು ಒಬ್ಬರ ಮುಖ ಒಬ್ಬರು ನೋಡಿಕೊಂಡು ಕಿಸಕ್ಕನೆ ನಕ್ಕು ಸರಕ್ಕನೆ ಕೊಡೆಯ ರೆಕ್ಕೆಗಳನ್ನ ಬಿಚ್ಚಿದೆವು ಮೈಕೈ ಕುಗ್ಗಿಸಿಕೊಂಡು ಕೊಡೆಯ ಆಶ್ರಯದಲ್ಲಿ ದೈತ್ಯ ದೇಹಗಳನ್ನು ,ಲಗೇಜನ್ನು ಇರಿಕಿಸಿಕೊಂಡು ಮಳೆಯ ನೀರು ಪಾಂಟಿಗೆ ಸಿಡಿಯದಿರಲೆಂದು ಅದನ್ನೂ ಸ್ವಲ್ಪ ಎತ್ತಿ ಹಿಡಿ ಎಂದು ಬಾಗನ್ನು ಹಿಡಿದಿದ್ದ ಕೈ ಒಂದಕ್ಕೆ ಆಜ್ಞಾಪಿಸುತ್ತ ಬೇಗ ಬೇಗ ನಡೆದೆವು. ಈ ಅವಸ್ಥೆಯೇ ನನಗೊಂದು ಆನಂದ ಉಂಟು ಮಾಡಿತು. , ಒಂದು ರೂಮು ಬಾಡಿಗೆಗೆ ಹಿಡಿದು ಸ್ನಾನಾದಿ ಕಾರ್ಯಗಳನ್ನು ಮುಗಿಸಿ ಮೂಕಾಂಬಿಕೆಯ ದರ್ಶನಕ್ಕೆ ಹೊರಟೆವು. ಮಳೆ ಬರುತ್ತಲೇ ಇತ್ತು. ಮೂಕಾಂಬಿಕೆಯ ದರ್ಶನವಾಯಿತು . ಈ ಕೊಲ್ಲೂರಿಗೆ ನಾನು ಸುಮಾರು ೧೨-೧೩ ಸರ್ತಿ ಬಂದಿರಬಹುದು . ಈ ಕ್ಷೇತ್ರದ ಬಗ್ಗೆ ನನಗೆ ವಿಶೇಷ ಆಕರ್ಷಣೆ. ಇಲ್ಲಿನ ಕ್ಷೇತ್ರದ ಕಥೆ, ಮೂಕಾಂಬಿಕೆಯ ಹಿನ್ನಲೆ, ಶಂಕರರಂಥ ಮಹಾನುಭಾವರು ಸಂಚರಿಸಿದ ನೆಲ ಎಂಬ ಪೂಜ್ಯ ಭಾವನೆ,ಕೊಡಚಾದ್ರಿಯ ಸೌಂದರ್ಯ ಎಲ್ಲವೂ ನನ್ನನ್ನು ಪುಳಕಿತನನ್ನಾಗಿ ಮಾಡಿಸುತ್ತೆ. ಭಗವಾನ್ ಶಂಕರರು ಮಾತನಾಡಲು ಬರದ ಮಗುವಿಂದ ಮಾತಾಡಿಸಿದ್ದು (ಆಗ ಅಶರೀರ ವಾಣಿ ಹೇಳತ್ತಲ್ಲ ದುಖವನ್ನ ಪರಿಹರಿಸಲಾಗದವನ ದಯೆ ದುಖವೇ ಉಂಟು ಮಾಡತ್ತೆ ಅಂತ ),ಏನೂ ಮಾತಾಡಲು ಬರದ,ಮೂರ್ಖನಂತೆ ವರ್ತಿಸುತ್ತಿದ್ದ ಹುಡುಗನೊಬ್ಬನು ಬ್ರಹ್ಮಜ್ಞಾನಿ ಎಂದು ಲೋಕಕ್ಕೆ ಪ್ರಚುರ ಪಡಿಸಿ ಆತನನ್ನು ಶಿಷ್ಯನನ್ನಾಗಿ ಪರಿಗ್ರಹಿಸಿದ್ದು ಆತ 'ಹಸ್ತಾಮಲಕ' ಎಂಬ ಹೆಸರಲ್ಲಿ ಪ್ರಖ್ಯಾತವಾಗಿದ್ದು ಇವೆಲ್ಲ ಕ್ಷೇತ್ರದ ಬಗ್ಗೆ ಒಂದು ಪೂಜ್ಯ ಭಾವ ಮೂಡುವುದಕ್ಕೆ ಪೂರಕವಾಗಿದ್ದವು. ಯಾವುದೇ ದೃಶ್ಯವನ್ನ ಕಂಡಾಗ ಅಥವಾ ಸ್ಥಳವನ್ನು ನೋಡಿದಾಗ ಉಂಟಾಗುವ ಭಾವನೆ ನಾವು ಆರೋಪಿಸುವಂಥದ್ದೋ ಅಥವಾ ಅದಾಗದೆ ಮೂಡುವಂಥದ್ದೋ ಎಂಬ ಚಿಂತೆಯೂ ಕಾಡಿತು .ಮೂಕಾಂಬಿಕೆಯ ದರ್ಶನ ಪಡೆದು ಶಂಕರಾಶ್ರಮದ ಕಡೆಗೆ ಹೊರಟೆವು .ಅಲ್ಲಿ ಹಿರಿಯ ಸನ್ಯಾಸಿ ಗಳೊಬ್ಬರು ಇರುತ್ತಾರೆ ಪ್ರತಿ ಬಾರಿ ಅವರ ದರ್ಶನ ಪಡೆಯುತ್ತೇನೆ ನಾನು . ಈ ಬಾರಿ ಅವರ ದರ್ಶನ ಭಾಗ್ಯ ಸಿಗಲಿಲ್ಲ. ಒಳಗಿರುವ ಶಿವ ಲಿಂಗದ ದರ್ಶನ ಮಾಡಿ ಹೊರಬಂದೆವು. ಅಲ್ಲಿಂದ ಸೌಪರ್ಣಿಕ ನದೀ ಘಟ್ಟಕ್ಕೆ ಹೋಗೋವಾಗ ಮಳೆಯೋ ಮಳೆ. ಇದೇನು ಇದರ ರೀತಿ. ಒಂದು ಶಿಸ್ತಿಲ್ಲ. ಮನಸೋ ಇಚ್ಛೆ ವರ್ತಿಸುತ್ತಲ್ಲ. ಹರಯದ ಉತ್ಸಾಹ ,ಬಿಗುಮಾನ,ಸಂಕೋಚ,ದರ್ಪ ಎಲ್ಲವೂ ವ್ಯಕ್ತವಾದಂತೆ ಅನ್ನಿಸಿತು.ಜೊತೆಗೆ ಗುಡುಗು ಸಿಡಿಲುಗಳ ಮುನ್ಸೂಚನೆಯೂ ಇಲ್ಲ! ಮೋಡಗಳ ಮಧ್ಯೆಯೇ ಇರೋದರ ಪರಿನಾಮವೇನೋ! ಹಾಗೇ ಮಳೆಯಲ್ಲಿ ನೆನೆಯುತ್ತ ನದೀ ಘಟ್ಟಕ್ಕೆ ತಲುಪಿದೆವು . ನೀರು ಈಗಷ್ಟೇ ಬರುತ್ತಿತು . ಹೊಸ ನೀರು ,ಸ್ವಲ್ಪ ಅರಿಶಿನ ಮಿಶ್ರಿತ ಮಂದವಾದ ಶ್ರೀಗಂಧವು ಒಂದು ಪಾತ್ರದಲಿ ಹರಿದರೆ ಹೇಗಿರಬಹುದೋ ಹಾಗಿತ್ತು. ಇದು ಉಕ್ಕಿ ಹರಿಯುವುದನ್ನು ನೋಡುವ ತವಕ ವ್ಯಕ್ತ ಪಡಿಸಿತು ಮನಸ್ಸು. ಆ ಭಾಗ್ಯ ಇಲ್ಲ ನಿನಗೆ ಎಂದು ಬುದ್ಧಿ ಕಟಕಿಯಾಡಿತು. ಮನಸ್ಸು ನೊಂದು ಕೊಂಡಿತು,ಬುದ್ಧಿ ಈಗ ಕಾಣುತ್ತಿರುವುದನ್ನು ನೋಡಿ ಖುಷಿಸು ಸಿಗದಕ್ಕೆ ವ್ಯಥೆ ಪಟ್ಟರೇನು ಎಂದು ವಿವೇಕ ಹೇಳಿತು. ಭಾವುಕ ಮನಸ್ಸು ಕೇಳಬೇಕಲ್ಲ! ಅದರ ಹಠ ಅದಕ್ಕೆ. ಇವೆಲ್ಲವನ್ನೂ ಗಮನಿಸುವ ಸಾಕ್ಷಿಗೆ ಇದಾವುದರ ಬಾಧೆಯೇ ಇಲ್ಲವೇನೋ! ಅಲ್ಲಿಂದ ಒಂದು ಹೋಟೆಲ್ ಗೆ ಹೋಗಿ ತಿಂಡಿ ಶಾಸ್ತ್ರವನ್ನು ಮುಗಿಸಿದೇವು . ಆಗ ಸುಲತಾ ಭಗಿನಿಯ ಅವರ ಫೋನ್. . ಅವರ ಜೊತೆ ಮಾತಾಡಿ ಬಹಳ ಖುಷಿ ಆಯಿತು. ಸರಳತೆ,ಸಜ್ಜನಿಕೆ,ವಾತ್ಸಲ್ಯ ಇವೆಲ್ಲ ಮೇಳೈಸಿದಂತಿತ್ತು ಅವರ ಧ್ವನಿ. ಮನೆಗೆ ಬನ್ನಿ ಎಂದು ಪ್ರೀತಿಯಿಂದ ಆಹ್ವಾನಿಸಿದರು ನಾವು ಬೇರೆಡೆ ಹೋಗಬೇಕೆಂಬ ನಿಶ್ಚಯ ಮಾಡಿದ್ದೆವಾದ್ದರಿಂದ ಮಂಗಳೂರು ಕಡೆಗೆ ಹೋಗಲು ಸಾಧ್ಯವಾಗಲಿಲ್ಲ.ಅವರ ಭೇಟಿ ಆಗದೆ ಇದ್ದದ್ದು ನೋವುಂಟು ಮಾಡಿತಾದರೂ ಅವರ ಜೊತೆ ಮಾತಾಡಿದ ಖುಷಿ ಅದನ್ನು ಮರೆಸಿತು .

ಬನ್ಸ್ ಪುರಾಣ ;)

ಕೊಲ್ಲೂರಿಂದ ಸಿಗಂಧೂರಿನೆಡೆಗೆ ಪ್ರಯಾಣ ಬೆಳೆಸಿದೆವು . ಕೊಲ್ಲೂರಿಂದ ಸುಮಾರು ೫೪ ಕಿ.ಮಿ ದೂರ ಎಂದು ನೆನಪು. ಮೊದಲಿಗೆ ನಿಟ್ಟೂರಿಗೆ ಬಂದು ಅಲ್ಲಿಂದ ಮತ್ತೊಂದು ಬಸ್ ಹಿಡಿದು ಸಿಗಂಧುರು ತಲುಪುವುದು . ಅಲ್ಲಿಂದ ಸಾಗರದ ಕಡೆ ಪಯಣಿಸುವುದೆಂದು ನಿಶ್ಚಯಿಸಿಕೊಂಡೆವು. ಸುಮಾರು ೧೧.೪೫ ರ ಸುಮಾರಿಗೆ ನಿಟ್ಟೂರು ತಲುಪಿದೆವು. ಇಲ್ಲಿ ಮಳೆ ಇಲ್ಲ ಪರವಾಗಿಲ್ಲ ಎಂದುಕೊಳ್ಳುತ್ತಿರುವಂತೆ ಇದೋ ಬಂದೆ ಎಂದು ಸುರಿಯಲಾರಂಭಿಸಿತು. ಸಿಗಂಧೂರಿನ ಬಸ್ ಇದ್ದದ್ದು ೧೨.೪೫ಕ್ಕೆ . ಮಳೆ ನೋಡುತ್ತಾ ಬಸ್ಸಿನ ಬರುವಿಕೆಯನ್ನು ನಿರೀಕ್ಷಿಸುತ್ತಾ ನಿಂತೆವು . ಎಷ್ಟು ಹೊತ್ತು ಮಳೆ ಸುಮ್ಮನೆ ನೋಡೋದು ಒಂದು ಕಾಫಿ ಹೀರುತ್ತಾ ಹಾಗೇ ಬಜ್ಜಿ ಮೆಲ್ಲುತ್ತ ನೋಡಿದರೆ ಮತ್ತೂ ಚಂದ ಎಂದು ಅಲ್ಲೇ ಇದ್ದ ಒಂದು ಹೋಟಲ್ ಹೊಕ್ಕಿದೆವು. ಮೊದಲಿಗೆ ಕಾಫಿ ಸೇವನೆ ಆಯಿತು .ನಂತರ ಒಂದೆರಡು ಫೋಟೋ ಕ್ಲಿಕ್ಕಿಸಿದೆವು . ಹೊತ್ತು ಹೋಗದೆ ಕದಲೀಫಲ ನಿವೇದನವೂ ಆಯಿತು .೧೨ ಗಂಟೆಗೊಂದು ಬಸ್ಗೆ ಬಂದ ಜನವೆಲ್ಲ ಹೋಟೆಲ್ಗೆ ನುಗ್ಗಿದರು. ಬನ್ಸ್ ಬನ್ಸ್ ಬನ್ಸ್ ಎಂದು ಆರ್ಡರ್ ಮಾಡಲಾರಂಭಿಸಿದರು. ಇಡ್ಲಿ ವಡೆ ಏನೇ ತಿಂದರೂ ಜೊತೆಗೊಂದು ಬನ್ ಅಲ್ಲಲ್ಲ ಬನ್ಸ್ (ಏಕವಚನ ಬಹುವಚನ ಅನ್ವಯಿಸುವುದಿಲ್ಲವೇನೋ!).ಶಶಾಂಕನಿ
ಗೆ ಕುತೂಹಲ ಇದೇನೋ ವಿಶೇಷ ಇರಬಹುದು ಎಂದು. ನಾನು ಒಮ್ಮೆ ಉಡುಪಿಯಲ್ಲಿ ತಿಂದು ಅನುಭವಿಸಿದ್ದೆ. ದೊಡ್ಡ ಹೋಟೆಲ್ ಒಂದಕ್ಕೆ ಹೋಗಿ ತಿಂಡಿ ಏನಿದೆ ಅಂದ್ರೆ ಅವಲಕ್ಕಿ ಮತ್ತು ಬನ್ಸ್ ಅಂದಿದ್ದರು. ನಂಗೆ ಆಶ್ಚರ್ಯ ನಮ್ಮಲ್ಲಿ ಪುಟ್ಟ ಹೋಟೆಲ್ ಒಂದರಲ್ಲಿ ಹತ್ತು ಹಲವು ತಿಂಡಿಗಳು ಹೇಳ್ತಾರೆ ಇಲ್ಲಿ ೪೦ ಟೇಬಲ್ಗಳಿವೆ ಇವೆ ೪ ತಿಂಡಿ ಇಲ್ವಲ್ಲಪ್ಪ ಅಂತ. ಆ ಅನುಭವ ಸ್ನೇಹಿತನಿಗೆ ಹೇಳಿದೆ. ಬೇಡ ಅದೇನೂ ಅಂಥ ಒಳ್ಳೇ ತಿನಿಸಲ್ಲ. ಹೋಟೆಲ್ನಲ್ಲಿ ಮಾಡೋದು ಅಷ್ಟೇನೂ ಹಿತವಾಗಿರೋಲ್ಲ ಅಂತ. ಜನಗಳ ಬನ್ಸ್ ಬನ್ಸ್ ಬನ್ಸ್ ಅನ್ನೋ ಬೇಡಿಕೆಯ ಕೊರಲು ಹೆಚ್ಚುತ್ತಲೇ ಹೋಯಿತು. ಸ್ನೇಹಿತನ ಕುತೂಹಲವೂ ಕೂಡ. ಪಕ್ಕದಲ್ಲಿದ್ದ ಒಬ್ಬರನ್ನು ಕೇಳಿದ. ಏನಿದು ಬನ್ಸ್ ಅಂದ್ರೆ ಸಿಹಿಯೋ ಖಾರವೋ ಅಂತ. ಆತ ಸಿಹಿ ಅಂದ. ಮತ್ತೆ ಚಟ್ನಿ ಜೊತೆ ತಿನ್ತೀರಾ! ಅಂದ . "ಹ್ಞೂ ಹಾಗೇ ಇದು.ಯಾಕೆ ಯಾವತ್ತೂ ತಿನ್ದಿಲ್ವ. ಒಮ್ಮೆ ತಿಂದು ನೋಡಿ" ಎಂಬ ಸಲಹೆ ಕೊಟ್ಟ. ಇವನು ನನ್ನ ಮುಖ ನೋಡಿದ . ಆಯಿತಪ್ಪ ತೊಗೋ ಅಂದೆ. ಅಂತೂ ಬನ್ಸ್ ಸೇವನೆಯಾಯಿತು. "ಇದನ್ನ ಎನ್ ತಿಂತಾರೆ ಜನ. ಅದೇನು ಖಾದ್ಯವೋ! ಇಲ್ಲಿ ಮಾಡಿರೋ ಒಂದೆರಡು ಬನ್ಸ ತಿಂದರೆ ನಮ್ಮ ರಸ ಗ್ರಂಥಿಗಳು ಮುಚ್ಚಿ ಹೋಗೋದರಲ್ಲಿ ಯಾವುದೇ ಅನುಮಾನ ಇಲ್ಲ ಅಂದ. ಆಮೇಲೆ ಇವರು ನಮ್ಮ ಬೆಂಗಳೂರಿನ ಹೋಟಲಿಗೆ ಬಂದು ರುಚಿ ನೋಡಿದರೆ ರುಚಿಗೇ ಮೋಕ್ಷ ಪಡೀತಾರೆ ಎಂದು ಹೆಮ್ಮೆಯ ಮಾತಾಡಿದ,ಹೊಟ್ಟೆ ತುಂಬಾ ನಕ್ಕೆವು ಅಷ್ಟರಲ್ಲಿ ಬಸ್ ಬಂತು .

ಸೌಂದರ್ಯದ ಸಂಕೀರ್ಣ ಸ್ವರೂಪ - ಸಿಗಂಧೂರು

ಸುಮಾರು ಒಂದು ವರೆ ಗಂಟೆಯ ಪ್ರಯಾಣದ ನಂತರ ಸಿಗಂಧೂರು ತಲುಪಿದೆವು. ಸಿಗಂಧೂರು ಚೌಡೇಶ್ವರಿಯ ದರ್ಶನ ಮಾಡಿ ಸಾಗರದ ಬಸ್ಸಿಗೆ ಕಾಯುತ್ತ ಕುಳಿತೆವು. ಸಾಗರದ ಬಸ್ ಶರಾವತಿಯ(ಹಿನ್ನೀರಿನ)ಮೇಲೆ ಲಾಂಚ್ ಮೂಲಕ ಹೋಗುವುದೆಂದು ತಿಳಿದಿದ್ದರಿಂದ ಈ ದಾರಿಯನ್ನು ಹಿಡಿದಿದ್ದೆವು. ಬಸ್ ನದೀ ತೀರ ತಲುಪಿಯಾದ ನಂತರ ಪ್ರಯಾಣಿಕರೆಲ್ಲರಿಗೂ ದೋಣಿ ಏರಲು ತಿಳಿಸಲಾಯಿತು. ನಾವು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನಮ್ಮಲ್ಲೇ ಅಂತರ್ಗತ ಗೊಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾ ನಿಧಾನವಾಗಿ ದೋಣಿ ಏರಿದೆವು. ತಿಳಿಯಾದ ನೀರು. ಕಪ್ಪು,ಬೂದು,ನೀಲಿ ಬಣ್ಣದ ಮೋಡಗಳ ಛಾವಣಿ, ಮಳೆ ಹನಿಗಳ ಸಿಂಚನ ಒಂದು ಊಹಾತೀತವಾದ ರಸ ಸನ್ನಿವೇಶವನ್ನು ನಿರ್ಮಾಣ ಮಾಡಿತ್ತು .ಈ ಕಲಾ ಸೃಷ್ಟಿಯಲ್ಲಿ ಸೂರ್ಯನೂ ಭಾಗವಹಿಸದಿದ್ದರೆ ಹೇಗೆ . ಆತ ತನ್ನ ಎಳೆಯ ಕಿರಣಗಳನ್ನು ಕಳುಹಿದ . ಎಳೆಯ ಬಿಸಿಲ ಕಿರಣಗಳು ನೀರ ಮೇಲೆ ಬಿದ್ದು ಅವುಗಳ ಪ್ರತಿಫಲನ ಸೌಂದರ್ಯದ ಮತ್ತೊಂದು ಮಜಲನ್ನು ತೆರೆದಿಟ್ಟಿತು. ಮೋಡದ ಹಿನ್ನಲೆಯಲ್ಲಿ ಕಾಣುತ್ತಿದ್ದ ಒಂದು ಸಣ್ಣ ಗುಡ್ಡ ಗಂಭೀರತೆಯ ಪ್ರತೀಕದಂತೆ ಕಂಡರೆ ಎಳೆಯ ಬಿಸಿಲಿಗೆ ಮೈ ಒಡ್ಡಿದ್ದ ಮತ್ತೊಂದು ಹಸಿರು ಗುಡ್ಡ ಶೃಂಗಾರದ ಪ್ರತೀಕದಂತೆ ಕಂಡಿತು . ಒಂದು ಪಾರ್ಶ್ವದಲ್ಲಿ ಮೋಡಗಳು ಮಳೆಯ ವಾತಾವರಣವನ್ನು ಸೃಷ್ಟಿಸಿದ್ದರೆ ಮತ್ತೊಂದು ಪಾರ್ಶ್ವದಲ್ಲಿ ನೀಲಿ ಮೋಡದ ಹಿನ್ನೆಲೆಯಿಂದ ರವಿಯ ಕಿರಣಗಳು ಹಸಿರನ ಮೇಲೆ ಬಿದ್ದು ಮತ್ತೊಂದು ಪಾರ್ಶ್ವದ ಮಳೆಯ ವಾತಾವರಣದ ಗಂಭೀರ ಸೌಂದರ್ಯಕ್ಕೆ ಸವಾಲು ಹಾಕಿದ್ದವು.. ಸದಾ ಮಳೆಯ ಸೊಬಗಿಗೆ ಮನಸೋಲುವ ನಾನು ಈ ಬಾರಿ ರವಿಯ ಕಿರಣಗಳು ಹೂಡಿದ ಆಟಕ್ಕೆ ಮನ ಸೋತೆ. ಪ್ರಕೃತಿಯ ಸೌಂದರ್ಯದ ಗುಟ್ಟೇನು ಎಂದು ಚಿಂತಿಸಲಾರಂಭಿಸಿತು ಮನಸ್ಸು . ಏಕೋ ಏನೋ ಬಣ್ಣಗಳೇ ನಿಜವಾದ ಸೌಂದರ್ಯ ಕೀಲಕಗಳು ಎಂದೆನಿಸಿತು . ಇಡೀ ಜಗತ್ತೇ ವರ್ಣ ರಹಿತವಾಗಿದ್ದರೆ ಹೇಗಿರುತ್ತಿತ್ತು?!. ಇಲ್ಲಿ ನಾನು ಕಂಡ ದೃಶ್ಯ ನನಗೆ ಅಷ್ಟು ಹಿತವಾಗಿ ಕಾಣಲು ಕಾರಣವೇನು?. ಮೋಡಗಳ ವಿವಿಧ ಬಣ್ಣಗಳು,ಗುಡ್ಡದ ಎಲೆ ಹಸಿರು. ಅದು ಕಪ್ಪು,ಕಂದು ಬಂಡೆಯ ಹಿನ್ನಲೆಯಲ್ಲಿ ಕಂಡ ತಿಳಿ ಹಸಿರು,ಪುಟ್ಟ ಪುಟ್ಟ ಮರಗಳು ,ಅದರ ಮೇಲೆ ಬಿದ್ದ ಹೊಂಗಿರಣಗಳು ಇವೆಲ್ಲವನ್ನೂ ಒಟ್ಟಿಗೆ ಸಮಷ್ಟಿಯಲ್ಲಿ ಕಂಡಾಗ ಅದೇನು ಅನಿರ್ವಚನೀಯ ಆನಂದ . ಈ ಬಣ್ಣಗಳು ಎಲ್ಲವೂ ಬೇರೆ ಬೇರೆಯಾಗಿ ಕಂಡಾಗ ಈ ರೀತಿಯ ಸುಖವಾಗದು, ಅದೇ ಅವೆಲ್ಲವೂ ಸೂತ್ರಕಾರನ ಆದೇಶಕ್ಕೆ ತಕ್ಕಂತೆ ನಿರ್ಧಿಷ್ಟ ರೂಪ ಪಡೆದಾಗ ಸೌಂದರ್ಯ ಸೃಷ್ಟಿಯಾಗುವುದು ,ಸಂಗೀತದ ಸ್ವರಗಳಂತೆ! ಅನಾಹತ ನಾದಗಳ ಮನೋಹರ ರೂಪವೇ ನಾದ ಸೌಂದರ್ಯದ ಪರಾಕಾಷ್ಟೆ ಹಾಗೇ ಬಣ್ಣಗಳೂ ಎಂಬಂತೆ ಭಾಸವಾಯಿತು. ಮತ್ತೆ ಇದಷ್ಟೇ ಅಲ್ಲದೆ ಮತ್ತೇನೋ ರಹಸ್ಯವೊಂದು ಮನಸ್ಸಿನ ಗ್ರಹಿಕೆಗೆ ಸಿಗುತ್ತಿಲ್ಲವೆಂಬುದೂ ಬೋಧವಾಯಿತು.. ಇಷ್ಟನ್ನಾದರೂ ಕಾಣುವ ಅಂತ:ದೃಷ್ಟಿಯನ್ನು ದಯಪಾಲಿಸಿದ ಚಿತ್ರಕಾರನಿಗೆ ನಮೋ ಅನ್ನುವಷ್ಟರಲ್ಲಿ ದಡ ಸೇರಿದೆವು ಅಲ್ಲಿಂದ ಮುಂದೆ ಪ್ರಯಾಣ ಬೆಳಸಿ ಸಾಗರ ತಲುಪಿದೆವು :)

ಸಾಗರದ ಸುತ್ತ ಮುತ್ತ :

ಸಾಗರ ತಲುಪಿದ ಮೇಲೆ ಅಲ್ಲೊಂದು ಹೋಟೆಲ್ನಲ್ಲಿ ದೋಸೆ ತಿಂದು ಆಟೋ ಹಿಡಿದು ವರದಪುರಕ್ಕೆ ಹೊರಟೆವು. ಶ್ರೀಧರ ಸ್ವಾಮಿಗಳು ತಪಸ್ಸು ಗೈದು ಪಾಮರರನ್ನು ಉದ್ಧರಿಸಿದ ಸ್ಥಳವನ್ನು ದರ್ಶಿಸುವುದೂ ಸ್ಪರ್ಶಿಸುವುದೂ ಯೋಗವಷ್ಟೇ. ಸಾಗರದಿಂದ ಸುಮಾರು ೬ ಕಿ.ಮೀ ದೂರ. ಆಶ್ರಮದ ಒಂದು ಕೊನೆಯಲ್ಲಿ ಉಳಿದುಕೊಂಡೆವು.ಸ್ವಲ್ಪ ಹೊತ್ತು ಸುಧಾರಿಸಿಕೊಂಡು ದೇಹಾಯಾಸ ಕಳೆದ ಮೇಲೆ ಸಂಜೆ ೭ ಘಂಟೆ ಸುಮಾರಿಗೆ ಸಣ್ಣ ಗುಡ್ದವೇರಿ ಆಶ್ರಮ ತಲುಪಿದೆವು . ಆಗಷ್ಟೇ ಪೂಜಾ ಕೈಂಕರ್ಯಗಳು ಆರಂಭವಾಗಿದ್ದವು .ಶ್ರೀಧರ ಸ್ವಾಮಿಗಳು ಸಮಾಧಿಸ್ತರಾದ ಜಾಗದಲ್ಲಿ ಆತ್ಮ ವಿದ್ಯಾ ಬೋಧನ ಸ್ವರೂಪವಾದ ಶಿವ ಲಿಂಗದ ಪ್ರತಿಷ್ಟಾಪನೆಯಾಗಿತ್ತು . ಇಡೀ ವಾತಾವರಣವೇ ಮನಸ್ಸನ್ನು ಧ್ಯಾನಕ್ಕೆ ಪ್ರೇರೇಪಿಸುತ್ತಿತ್ತು. ಕಣ್ಮುಚ್ಚಿ ಧ್ಯಾನಸ್ಥನಾದೆ . ಲೋಕದ ಪರಿವೆ ಇಲ್ಲದೆ ಒಂದಷ್ಟು ಹೊತ್ತು ಕೂರುವುದೇ ಅಲೌಕಿಕ ಅನುಭವ ಅನ್ನುವುದಾದರೆ ಅಂಥದ್ದರ ಅನುಭವ ನನಗಯಿತೆಂದು ಊಹಿಸಬಹುದೇನೋ. ಮನಸ್ಸು ನಿಶ್ಚಲ ಸ್ಥಿತಿ ತಲುಪಿತು. ಗುರುಕುಳದಲ್ಲಿನ ವಿದ್ಯಾರ್ಥಿಗಳು ಮಂತ್ರ ಪಾರಾಯಣ ಮಾಡಿದರು. ಕಡೆಗೆ ಗುರುವಂದನೆ ಸಲ್ಲಿಸುವ ಶ್ಲೋಕಗಳು ಆತ್ಮಾನಂದಕರವಾಗಿದ್ದವು . ಪ್ರತಿಯೊಂದು ಶ್ಲೋಕ ವಾಚಿಸಿದಾಗಲೂ ಮೈ ನವಿರೆಳುತ್ತಿತ್ತು ಅದರಲ್ಲಿನ ದಿವ್ಯ ಭಾವದಿಂದ . ಮಹಾ ಮಂಗಳಾರತಿ ಆದ ಮೇಲೆ ಆಶ್ರಮದಲ್ಲೇ ರುಚಿಕಟ್ಟಾದ ಭೋಜನ ಸವಿದೆವು. ಮಾರನೆಯ ದಿನ ಬೇಗ ಎದ್ದು ಶ್ರೀಧರ ತೀರ್ಥದಲ್ಲಿ ಸ್ನಾನ ಮಾಡಿ ನಂತರ ಗುಡ್ಡವನ್ನೇರಿ ಸಮಾಧಿಗೆ ನಮಸ್ಕರಿಸಿ ಅಲ್ಲಿಂದ ಮೇಲೆ ಭಗವಾನರು ತಪ ಗೈದ ಸ್ಥಳಕೆ ಹೋದೆವು. ಕಲ್ಲು ಮುಳ್ಳಿನ ದಾರಿ . ಧರ್ಮದ ಹಾದಿಯೂ ಇಷ್ಟೇ ಅನ್ನಿಸಿತು. ಎಡರು ತೊಡರುಗಳು ಇದ್ದದ್ದೇ. ಆದರೆ ಅವನ್ನು ಅನುಭವಿಸಬೇಕು ಆಗ ಮನಸ್ಸು ಪಾಕವಾಗುತ್ತೆ, ಕಷ್ಟಗಳಿಗೆ ನಮ್ಮನ್ನು ತೆರೆದುಕೊಳ್ಳಬೇಕು ಧೈರ್ಯದಿಂದ ಎಂದೆನಿಸಿತು. ಅಲ್ಲಿಗೆ ಪಾದ ರಕ್ಷೆಗಳನ್ನು ಹಾಕಿಕೊಂಡು ಹೋಗಬಾರದು ಎಂಬ ನಿಯಮ ಉಂಟು . ಅದೂ ಕೂಡ ಈ ದೃಷ್ಟಿಯಲ್ಲಿ ಸಮಂಜಸವಾದದ್ದು ಎಂದೆನಿಸಿತು . ಅಲ್ಲಿಂದ ಕೆಳಗಿಳಿದು ನಮ್ಮ ಸಾಮಾನು ಸರಂಜಾಮು ತೆಗೆದುಕೊಂಡು ಪುನಃ ಸಾಗರದ ಕಡೆಗೆ ಹೊರಟೆವು. ಅಲ್ಲಿ ಒಂದು ಆಟೋ ರಿಕ್ಷ ಮಾತಾಡಿ ಕೆಳದಿ ಮತ್ತು ಇಕ್ಕೇರಿ ಇವೆರಡೂ ಸ್ಥಳಗಳನ್ನ ನೋಡಿ ಬರುವುದು ಎಂದು ನಿಶ್ಚಯಿಸಿದೆವು .

ಕೆಳದಿ ಸಂಸ್ಥಾನ ಸಾಗರದಿಂದ ಸೊರಬಕ್ಕೆ ಹೋಗೋ ಹಾದಿಯಲ್ಲಿ ಸುಮಾರು ೭ ಕಿ ಮೀ ದೂರದಲ್ಲಿದೆ. ವೀರಭದ್ರ ಸ್ವಾಮಿಯ ದೇವಸ್ಥಾನವಿದೆ. ಸುಮಾರು ೧೬ನೆ ಶತಮಾನದಲ್ಲಿ ವಿಜಯನಗರದ ಅರಸನು ಶಿವಪ್ಪ ನಾಯಕ ಅನ್ನುವ ಅಧಿಕಾರಿಗೆ ಈ ಸಂಸ್ಥಾನದ ಜವಾಬ್ದಾರಿಯನ್ನ ವಹಿಸಿದಾಗ ಆತ ಕಟ್ಟಿಸಿದ ದೇವಸ್ಥಾನ ಇದು ಎಂದು ಇತಿಹಾಸ ಹೇಳುತ್ತದೆ. ಈ ದೇವಸ್ಥಾನದ ಶಿಲ್ಪವನ್ನ ನೋಡಿದರೆ ಜೈನರ ಪ್ರಭಾವವು ಹೆಚ್ಚಿತ್ತೆಂದು ಭಾಸವಾಯಿತು. ಅಥವಾ ಈ ದೇವಾಲಯ ಜೈನರದ್ದೇ ಆಗಿದ್ದು ನಂತರ ಶೈವರ ವಶಕ್ಕೆ ಬಂತಾ ಅನ್ನುವ ಕುತೂಹಲವೂ ಉಂಟಾಯಿತು. ಅಲ್ಲಿದ್ದ ಗಣಪತಿ ವಿಗ್ರಹ,ಆಡಿನ ತಲೆಯುಳ್ಳ ವಿಗ್ರಹ ಎಲ್ಲವೂ ನಮ್ಮ ಸಂಪ್ರದಾಯದ ವಿಗ್ರಹಗಳಂತೆ ಕಂಡುಬರಲಿಲ್ಲ. ದೇವಸ್ಥಾನ ಬಹಳ ಪ್ರಶಾಂತವಾಗಿತ್ತು. ಜನ ಜಂಗುಲಿಯಿಲ್ಲ. ತುಂತುರು ಮಳೆಯೂ ಹಿತಕರವಾಗಿತ್ತು. ದೇವರ ದರ್ಶನ ಮಾಡಿ ಇಕ್ಕೇರಿಯ ಕಡೆ ಹೊರಟೆವು. ಅಘೋರೆಶ್ವರನ ದೇವಸ್ಥಾನ ಹಿಂದೊಮ್ಮೆ ನೋಡಿದ್ದೆ. ಮತ್ತೆ ನೋಡಬೇಕೆಂಬ ಬಯಕೆ. ನಮ್ಮ ಜೊತೆ ಮಳೆಯಂತೂ ಇದ್ದೇ ಇತ್ತು . ದೇವಸ್ಥಾನವು ವಿಶಾಲವಾಗಿಯೂ ,ಉತ್ತಮ ಶಿಲ್ಪಿ ಕಲಾ ಕುಸುರಿಗಳನ್ನೊಳಗೊಂಡಿದೆ, ಶಿಲ್ಪದ ವಿಷಯ ನನಗೆ ಅಷ್ಟೇನೂ ಗೊತ್ತಿಲ್ಲವಾದರೂ ಇದು ನಮ್ಮ ಹೊಯ್ಸಳ ಶಿಲ್ಪಿಅಥವಾ ಚಾಲುಕ್ಯ ಇದ್ಯಾವುದನ್ನು ಹೋಲದೆ ಒಂದು ವಿಭಿನ್ನ ಶೈಲಿಯಲ್ಲಿ ಕಟ್ಟಿದ್ದಾರೆ ಎಂದೆನಿಸಿತು. ಬೃಹತ್ ಶಿವಲಿಂಗ ಒಮ್ಮೆಲೇ ಭಕ್ತಿ ಮೂಡಿಸುವಂತಿತ್ತು. ಇಲ್ಲಿ ಅರ್ಚಕರು ಪೂಜೆ ಮಾಡುತ್ತಿದ್ದ ರೀತಿ ಬಹಳ ಹಿಡಿಸಿತು. ಅಲ್ಲಿ ಭಕ್ತಾದಿಗಳು ಬರುವುದೇ ಕಮ್ಮಿ. ಅಂಥದ್ದರಲ್ಲಿ ಯಾರಾದರೂ ಬಂದರೆ ಅವರಿಗೆ ವಿಶೇಷ ಆತಿಥ್ಯ ಕೊಡುವುದು ,ಉಪಚಾರದ ಮಾತಾಡುವುದು ಇವೆಲ್ಲ ಸಾಮಾನ್ಯವಷ್ಟೇ. ಇವರು ನಮ್ಮ ಕಡೆ ತಿರುಗಿಯೂ ನೋಡದೆ ಅಭಿಷೇಕ ಮಾಡಿ ಲಿಂಗವನ್ನು ಅಚ್ಚುಕಟ್ಟಾಗಿ ಒರೆಸಿ ನಂತರ ಶುಭ್ರವಾದ ವಸ್ತ್ರಗಳನ್ನು ಉಡಿಸಿ , ನಿಧಾನವಾಗಿ ಬಿಳಿ,ಕೆಂಪು ದಾಸವಾಳ ಹೂಗಳಿಂದ ಶಂಕರನಿಗೆ ಸರಳವಾದ ಅಲಂಕಾರ ಮಾಡಿ ,ಲಕ್ಷಣವಾಗಿ ವಿಭೂತಿ ಇಟ್ಟು ನಂತರ ಮಂಗಳಾರತಿ ಮಾಡಿಯಾದ ಮೇಲೆಯೇ ನಮ್ಮ ಕಡೆ ಲಕ್ಷ್ಯ ವಹಿಸಿದ್ದು.ಹೀಗಿರಬೇಕು ಮಗ್ನತೆ ಅನ್ನಿಸಿತು. ಶಂಕರ ಪಾರ್ವತಿಯರಿಬ್ಬರಿಗೂ ನಮನಗಳನ್ನು ಸಲ್ಲಿಸಿ ಸುಮಾರು ಹೊತ್ತು ಧ್ಯಾನಿಸಿ ,ಸ್ವಲ್ಪ ಸುತ್ತಾಡಿ ಸಾಗರಕ್ಕೆ ವಾಪಸಾದೆವು.

ಶಾರದೆಯ ಕೃಪೆಯನ್ನರಸಿ...

ಸಾಗರದಿಂದ ತೀರ್ಥ ಹಳ್ಳಿಯ ಬಸ್ ಹಿಡಿದು ಅಲ್ಲಿಂದ ಶೃಂಗೇರಿ ತಲುಪಿದೆವು ಸಂಜೀಯ ಸುಮಾರಿಗೆ .ಶೃಂಗೇರಿ ನನ್ನ ಮನಸ್ಸಿಗೆ ಅಪ್ಯಾಯಮಾನವಾದ ಸ್ಥಳಗಳಲ್ಲೊಂದು . ನನ್ನ ಬಂಧು ವರ್ಗ ಇದ್ದ (ಈಗಲೂ ಇರುವ) ಮೋಹ ಒಂದು ಲೌಕಿಕ ಕಾರಣವಾದರೆ,ಅಲ್ಲಿನ ಪ್ರಕೃತಿ ಸೌಂದರ್ಯ,ತುಂಗೆಯ ತಟ,ನೃಸಿಂಹ ವನ ,ದೇವಾಲಯ ಇವೆಲ್ಲ ಭೌಗೋಳಿಕ ಆಕರ್ಷಣೆಗಳು ಇದೆಲ್ಲಕ್ಕಿಂತ ಮಿಗಿಲಾಗಿ ಋಷ್ಯ ಶೃಂಗನಂಥಹ ಮಹಾ ತಪಸ್ವಿ ಇದ್ದ ಸ್ಥಳ , ಆಚಾರ್ಯ ಶಂಕರರ ಕಾರ್ಯ ಕ್ಷೇತ್ರ ,ತಮ್ಮ ಮೊದಲ ಆಮ್ನಾಯ ಮಠವನ್ನ ಸ್ಥಾಪಿಸಿದ ಸ್ಥಳ ,ವೇದಾಂತ ತತ್ವವನ್ನು ಜಗತ್ತಿಗೆ ಸಾರಿ ಹೇಳಲು ದೀಕ್ಷೆ ವಹಿಸಿದ ಸ್ಥಳ ಅನ್ನುವ ವಿಚಾರಗಳು ನನ್ನಲ್ಲಿ ಈ ಕ್ಷೇತ್ರದ ಬಗ್ಗೆ ಪೂಜ್ಯಭಾವವನ್ನುಂಟು ಮಾಡುತ್ತದೆ. ಬಂಧುಗಳ ಮನೆಯೊಂದರಲ್ಲಿ ಇಳಿದುಕೊಳ್ಳಬೇಕು ಎಂಬ ಉದ್ದೇಶ ಇದ್ದರೂ ಕಡೆಯ ಘಳಿಗೆಯಲ್ಲಿ ಬದಲಾಯಿಸಿ ಹ್ಸಾರದ ಪೀಠದ ಅತಿಥಿ ಗೃಹದಲ್ಲೇ ಉಳಿದುಕೊಂಡೆವು . ಸ್ವಲ್ಪ ದಣಿವಾರಿಸಿಕೊಂಡು ದೇವಸ್ಥಾನಕ್ಕೆ ಹೊರಟೆವು. ಶಾರದೆ ವೀಣಾ ಪಾಣಿಯಾಗಿ ನಾದಾನುಸಂಧಾನದಲ್ಲಿ ಮುಳುಗಿಹೋಗಿದ್ದಳು. ಸ್ವಲ್ಪ ಹೊತ್ತು ಕೂತು ಧ್ಯಾನಿಸಿದೆ. ಅಲ್ಲಿಂದ ಚಂದ್ರಮೌಳೆಶ್ವರನ ದರ್ಶನ ಮಾಡಿ ತುಂಗೆಯ ನದಿ ತಟದಲ್ಲಿ ಸ್ವಲ್ಪ ಕುಳಿತು ನಂತರ ಸೇತುವೆಯ ಮಾರ್ಗದಲ್ಲಿ ನೃಸಿಂಹವನವನ್ನು ತಲುಪಿದೆವು ಗುರುಗಳ ದರ್ಶನಾರ್ಥಿಗಳಾಗಿ. ಗುರುಗಳು ಪ್ರವಾಸದ ನಿಮಿತ್ತ ಅನ್ಯ ಕ್ಷೇತ್ರಗಳಿಗೆ ಸಂಚಾರ ಹೋಗಿದ್ದರು,. ನಮಗೆ ಅವರ ದರ್ಶನ ಪ್ರಾಪ್ತವಾಗಲಿಲ್ಲ. ಅಲ್ಲಿಂದ ಸ್ವಲ್ಪ ಮುಂದೆ ನಡೆದು ವೇದ ವ್ಯಾಸ ಮಂದಿರದ ಬಳಿ ಕುಳಿತೆವು. ವೇದ ವ್ಯಾಸ ಮಂದಿರದ ಮುಂದೆ ಮೆಟ್ಟಿಲುಗಳಿವೆ ನದಿಗೆ . ಅಲ್ಲಿಂದ ಶಾರದೆಯ ದೇವಳ ಕಾಣತ್ತೆ. ಎರಡು ದೇವಳಗಳ ನಡುವೆ ತುಂಗೆ ಹರಿಯುತ್ತಾಳೆ. ಈ ದೃಶ್ಯ ನೋಡಿ ಕೃಷ್ಣ ದ್ವೈಪಾಯನರ ಹುಟ್ಟು ಅವರ ಜನ್ಮ ವೃತ್ತಾಂತ ಅವರು ಮಾಡಿದ ಮಹತಕಾರ್ಯಗಳು ಎಲ್ಲವೂ ಸ್ಮೃತಿ ಪಟಲದಲ್ಲಿ ಮೂಡಿದವು. ಹೀಗೆ ಯೋಚಿಸುತ್ತ ಕುಳಿತಿದ್ದಾಗ ವೇದ ವ್ಯಾಸರು ಅದೆಷ್ಟು ದೊಡ್ದವರಲ್ವ ಅಂದ ಸ್ನೇಹಿತ. ಆಗ ವೇದ ವಿಭಾಗ ಆಗಿದ್ದು ಅದಕ್ಕೆ ಅವರು ಪಟ್ಟಿರಬಹುದಾದಂಥ ಶ್ರಮ ಇವುಗಳ ಬಗ್ಗೆ ಸ್ವಲ್ಪ ಮಾತಾಡಿದೆವು. ನಂತರ ಮಾತು ವೇದಾಂತಕ್ಕೆ ತಿರುಗಿ ಶ್ರೀ ವಿದ್ಯೆಗೂ ವೇದಾಂತ ಪ್ರತಿ ಪಾದಿಸುವ ಅದ್ವೈತಕ್ಕು ಏನು ಸಂಬಂಧ. ಔಪಾಸನೆ ಶ್ರೀವಿದ್ಯೇಲಿ ಇದೆ. ವೇದಾಂತದಲ್ಲಿ ಔಪಾಸನೆ ಇಲ್ಲ. (ನಮಗೆ ತಿಳಿದಂತೆ) ಕೇವಲ ತಪಸ್ಸು ಅಂತ ಹೇಳ್ತಾರೆ. ಏನು ತಪಸ್ಸಂದ್ರೆ ಅದಕ್ಕೊಂದು ಮಾರ್ಗ ಕ್ರಮ ಬೇಕಲ್ಲವೋ . ಸರಿ ತಪಸ್ಸು ಕರ್ಮವಾದರೆ ಆ ಕರ್ಮವನ್ನೂ ಮೀರೋದು ಹೇಗೆ ಅಂತೆಲ್ಲ ವಿಚಾರ ಮಾಡಿದೆವು. ಕೇವಲ ಜಿಜ್ನಾಸೆಯಿಂದಲೇ ಬ್ರಹ್ಮನನ ಅರಿಯಲು ಸಾಧ್ಯವಿಲ್ಲ. ಯಾಕಂದ್ರೆ ಜಿಜ್ಞಾಸೆ ಮಾಡುವ ಬುದ್ಧಿಯೂ ಆತ್ಮನ ಉಪಾಧಿಯೇ. ಅದರಾಚಿನದ್ದು ಅಂದರೆ ಏನು ? ಅದನ್ನಂತೂ ಯಾವ ಲೌಕಿಕಾನುಭವವು ತಿಳಿಸಲಾರದು .ಅದಕ್ಕೇ ಏನೋ ಶಂಕರರು ನೇತಿ ನೇತಿ ಮಾರ್ಗ ಅನುಸರಿಸಬೇಕು ಅಂತ ಹೇಳಿದ್ದು ಅಂತೆಲ್ಲ ಮಾತಾಡಿಕೊಂಡು ಮಠದ ಕಡೆ ಹೆಜ್ಜೆ ಹಾಕಿದೆವು.ಊಟ ಮಾಡಿ ನಿದ್ರಿಸಿದ್ದಷ್ಟೇ ನೆನಪು .

ಬೆಳಿಗ್ಗೆ ಬೇಗ ಎದ್ದು ಆಗುಂಬೆಗೆ ಹೊರಟೆವು. ಘಟ್ಟವನ್ನು ಹತ್ತಿರದಿಂದ ನೋಡುವುದು ,ದೂರದಿಂದ ನೋಡುವುದು ಎರಡೂ ರೀತಿಯ ವೀಕ್ಷಣೆ ಆಗಿತ್ತಷ್ಟೆ. ಇನ್ನು ಇದೇ ಘಟ್ಟದ ಸೌಂದರ್ಯವನ್ನ ಸಮಷ್ಟಿಯಲ್ಲಿ ಗ್ರಹಿಸಬೇಕೆಂದರೆ ಒಂದು ಸಾಕ್ಷಿ ಪ್ರಜ್ಞೆಯಲ್ಲಿ ವೀಕ್ಷಿಸಬೇಕು. ಎತ್ತರದಿಂದ ನೋಡಬೇಕು! ಆಗುಂಬೆಗೆ ಹೊರಟಿದ್ದು ಈ ದೃಷ್ಟಿಯಿಂದ. ೯.೩೦ ಸುಮಾರಿಗೆ ತಲುಪಿದೇವು. ಸೂರ್ಯಾಸ್ತ ವೀಕ್ಷಿಸುವ ತಾಣಕ್ಕೆ ೨ ಕಿ ಮೀ ಎಂಬ ಫಲಕ ಕಾಣಿಸಿತು . ನಡೆದು ಹೋದೆವು. ಸುಮಾರು ೩-೪ ಕಿ ಮೀ ನಡೆದಂತೆ ಭಾಸವಾಯಿತು, ಆದರೆ ನಡೆದದ್ದೇ ಗೊತ್ತಾಗಲಿಲ್ಲ. ಸುತ್ತ ಮುಟ್ಟ ದಟ್ಟವಾದ ಕಾನನ. ಆಗೊಮ್ಮೆ ಈಗೊಮ್ಮೆ ಸಂಚರಿಸುವ ವಾಹನಗಳು ಮಿಕ್ಕಂತೆ ಬಹಳ ಪ್ರಶಾಂತ ವಾತಾವರಣ. ಸ್ವಲ್ಪವೇ ದೂರದಲ್ಲಿ ಒನಕೆ ಅಬ್ಬಿ ಜಲಪಾತ ಇದೆ ಎಂಬ ಫಲ ಕಂಡಿತು. ಅದಕ್ಕೇ ಕಾಡಿನೊಳಗೆ ಹೋಗಬೇಕು ಯಾರಾದರೂ ಸ್ಥಳೀಯರು ಜೊತೇಲಿ ಇರಬೇಕು ಎಂದು ಅಲ್ಲಿದ್ದವರೊಬ್ಬರು ಹೇಳಿದರು. ನಾವು ಅಲ್ಲಿಗೆ ಹೋಗಲಿಲ್ಲ. ಮುಂದೆ ನಡೆದು ಸೂರ್ಯಾಸ್ತ ನೋಡುವ ಸ್ಥಳಕ್ಕೆ ಬಂದೆವು. ದೀರ್ಘವಾದ ಉಸಿರೆಳೆದು ನೋಡುವಂತಾಯಿತು. ವಿಶಾಲ ಭೂ ಪ್ರದೇಶದ ಮೇಲೆ ಹರಡಿರುವ ಸಸ್ಯ ಸಂಕುಲ. ಅದೆಷ್ಟು ವಿಧಗಳಿವೆಯೋ ಅದೆಷ್ಟು ಜೀವ ವೈವಿಧ್ಯಗಳಿವೆಯೋ ಬ್ರಹ್ಮನಿಗೂ ಅದರ ಲೆಖ್ಹ ಇರಲಾರದೇನೋ ! ದೃಷ್ಟಿ ಚಾಚಿದಷ್ಟು ದೂರ ಸಸ್ಯ ಸಂಪತ್ತು .ಅಚಲವಾಗಿದ್ದರೂ ಅದೆಷ್ಟು ಕ್ರಿಯಾ ಶೀಲವಾಗಿದೆ ಅನ್ನಿಸಿತು. ಸುಮಾರು ಹೊತ್ತು ವೀಕ್ಷಿಸಿ ಬೊಮ್ಮನ ಕಲಾ ಕುಶಲದ ಬಗ್ಗೆ ಮೆಚ್ಚುಗೆಯ ಮಾತಾಡಿಕೊಂಡು ಶೃಂಗೇರಿಗೆ ವಾಪಸ್ಸಾಗಿ ಭೋಜನ ವಿಧಿ ಮುಗಿಸಿದೆವು.

ಭುಕ್ತಾಯಾಸವನ್ನ ನೀಗಿಸಿಕೊಂಡು ಋಷ್ಯ ಶೃಂಗ ಮುನಿ ತಪಸ್ಸು ಮಾಡಿದ ಸ್ಥಳವಾದ ಕಿಗ್ಗ ದ ಕಡೆಗೆ ಪ್ರಯಾಣ ಬಳಸಿದೆವು . ಕಿಗ್ಗ ಶೃಂಗೇರಿಯಿಂದ ಸುಮಾರು ೧೦ ಕಿ ಮೀ ದೂರದಲ್ಲಿದೆ. ಋಷ್ಯಶೃಂಗೇಶ್ವರನ ದರ್ಶನ ಮಾಡಿಕೊಂಡು ಒಂದು ಆಟೋ ರಿಕ್ಷ ಹಿಡಿದು ಅಲ್ಲಿಂದ ೬ ಕಿ ಮೀ ದೂರದಲ್ಲಿರುವ ಸಿರಿ ಮನೆ ಜಲಪಾತಕ್ಕೆ ಹೊರಟೆವು. ಒಳ್ಳೇ ಮಳೆ ಶುರುವಾಯಿತು. ಒಂದು ಸಣ್ಣ ತೋಟದಲ್ಲಿ ೭೦-೮೦ ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲ ಧಾರೆ. ಚೆನ್ನಾಗಿತ್ತು . ಅದನ್ನೂ ನೋಡಿ ಮತ್ತೆ ಕಿಗ್ಗಕ್ಕೆ ವಾಪಸು ಬಂದು ಶೃಂಗೇರಿಗೆ ಮರಳಿದೆವು.

ಸಂಜೆ ಯಥಾ ಪ್ರಕಾರ ನದೀ ತೀರಕ್ಕೆ ಹೋಗಿ ಕುಳಿತೆವು. ನೃಸಿಂಹವನಕ್ಕೆ ಕಾಗೆಗಳ ಗಂಡ ಬಂದಿದೆ ಎಂದು ಕಾಣುತ್ತೆ ;). ಸಾವಿರಾರು ಕಾಗೆಗಳು ಬಂದು ದಾಂಗುಡಿ ಇಟ್ಟಿದ್ದವು. ಅವನ್ನ ಓಡಿಸಲಿಕ್ಕೆ ಹರ ಸಾಹಸ ಮಾಡುತ್ತಿದ್ದರು. ಕತ್ತಲಾಯಿತು. ವರ್ಷ ಧಾರೆ ಮೊದಲಾಯಿತು . ಇಬ್ಬರೂ ಕೊಡೆ ಹಿಡಿದು ಸುಮ್ಮನೆ ನದೀ ತೀರವನ್ನ,ತಣ್ಣನೆಯ ವರ್ಷ ಧಾರೆಗೆ ಮೆಲ್ಲಗೆ ಕಂಪಿಸುವ ನದೀ ಪಾತ್ರವನ್ನ ಸುತ್ತಲಿನ ಕಪ್ಪು ವಾತಾವರಣವನ್ನ ನೋಡುತ್ತಾ ಕುಳಿತಿದ್ದಾಗ ಮನಸ್ಸು ಅಂತರ್ಮುಖವಾಗದೆ ಏನಾದೀತಿತು. ಈ ಸರ್ತಿ ನೋಡಿದ ಸ್ಥಳಗಳೆಲ್ಲವೂ 'ಪೂರ್ಣ' ಅನ್ನುವಂಥ ಅನುಭವವನ್ನೇ ನೀಡಿವೆ. ಎಂಬ ತೃಪ್ತಿ ತುಂಬಿದಂಥ ಭಾವ. ಆಗ ಅದೇಕೋ ಹೀಗೆ ಅನ್ನಿಸಿತು .ಸಂಗೀತದಲ್ಲಿ ರಾಗವನ್ನ ಗುರುತಿಸುವಾಗ ,ಸ್ವರಗಳನ್ನು ಗುರುತಿಸಿ ಕೇಳುವಾಗ ಆಗುವ ರಸಾನುಭವ ಅದಿಲ್ಲದೆ ಕೇಳುವಾಗ ಆಗುವ ಅನುಭವಕ್ಕಿಂತ ಭಿನ್ನ ಮತ್ತು ಹೆಚ್ಚು ಸೂಕ್ಷ್ಮವೂ ಹೌದು. ಹಾಗೆಯೇ ಪ್ರಕೃತಿಯಲ್ಲಿ ಏನೇ ಸುಂದರವಾದ್ದು(ಪ್ರಕೃತಿಯಲ್ಲಿ ಎಲ್ಲವೂ ಸುಂದರವೇ ನೋಡುವ ಕಣ್ಣುಗಳು ಬೇಕೇನೋ! ) ಕಂಡರೂ ಮನಸ್ಸಿಗೆ ಒಂದು ಬಗೆಯ ಹಿತವಾದ ಭಾವ ಉಂಟಾಗುತ್ತದೆ. ಒಂದು ಹೂವು,ಒಂದು ಲತೆ,ಒಂದು ಗಿಡ ಇವೆಲ್ಲ ಮುದ ನೀಡುತ್ತವೆ.ಆದರೆ ಅವುಗಳ ಬಗ್ಗೆ ತಿಳಿದಾಗ ಅವುಗಳ ಸ್ವರೂಪವನ್ನು ಅರಿತು ಅವುಗಳ ವಿಶೇಷತೆಯನ್ನು ಅರಿತು ಅಸ್ವಾದಿಸಿದಾಗ ಬೇರೆಯೇ ಮಟ್ಟದ ಖುಷಿ ಆಗಬಹುದೇನೋ. ಇಲ್ಲೂ ಸಂತೋಷದಲ್ಲಿ ವಿವಿಧ ಸ್ತರಗಳು ಇವೆಯೇನೋ ! ನಾವು ಈಗ ಸ್ಥೂಲವಾಗಿ ಸೌಂದರ್ಯದ ಮೇಲ್ಪದರವನ್ನು ಅಷ್ಟೋ ಇಷ್ಟೋ ಕಂಡು ಸಂತೋಷಿಸಿದ್ದೇವೆ ಅವುಗಳ ಅಂತ:ಸತ್ವವನ್ನು ಅರಿತರೆ ಇನ್ನೆಷ್ಟು ಸಂತೋಷ ಆಗಬಹುದು.ರಸ ಪ್ರಜ್ಞೆಯೇ ಉನ್ನತ ಮಟ್ಟಕ್ಕೆರಬಹುದೆಂಬ ಭಾವ ಮೂಡಿತು. ಹೀಗದಾಗಷ್ಟೇ ನಾವು ಪ್ರಕೃತಿಗೆ ಹತ್ತಿರವಾಗುತ್ತೇವೆ. ಸಾಧ್ಯವಾದರೆ ಈ ಜೀವಿತಾವಧಿಯಲ್ಲೇ ಪ್ರಕೃತಿಯಲ್ಲಿ ಲೀನವಾಗುವ ಯೋಗವನ್ನು ಪಡೆಯುತ್ತೇವೆ. ಎಲ್ಲದಕ್ಕೂ ಸೂಕ್ಷ್ಮವನ್ನರಸುವ ದೃಷ್ಟಿ,ಬಾಲ ಸಹಜ ಕುತೂಹಲವೇ ಸಾಧನ ಎಂದನಿಸಿ ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರೆಯಬೇಕೆಂದೆನಿಸಿತು. ಇಷ್ಟು ಯೋಚಿಸಿ ಏಳುವಷ್ಟರಲ್ಲಿ ಜಿಗಣೆಯೊಂದು 'ಅಖಂಡ ರಸಾಸ್ವಾದನೆ 'ಮಾಡಿ ಮತ್ತಿನಿಂದ ಕೆಳಗುದುರಿತ್ತು. ಮೀನಖಂಡ ಭಾಗದಲ್ಲಿ ರಕ್ತ ಸೋರಿ ಹೆಪ್ಪುಗಟ್ಟಿತ್ತು .ಇದು ತಿಳಿದಿದ್ದು ಸ್ನೇಹಿತ ಗಮನಿಸಿ ಹೇಳಿದ ಮೇಲಷ್ಟೇ ;))

ಅವಧೂತ ದರ್ಶನ !

ಮಾರನೆಯ ದಿನ ಬೆಳಿಗ್ಗೆ ಬೇಗ ಎದ್ದು ಸುಮಾರು ೭.೩೦ ಹೊತ್ತಿಗೆ ಚಿಕ್ಕಮಗಳೂರು ಬಸ್ ಹಿಡಿದೆವು. ಸುಂದರವಾದ ಕಾಫಿ ತೋಟಗಳ ಮಾರ್ಗದಲ್ಲಿ ಸಾಗಿದ ಪ್ರಯಾಣ ಮನೋಹರವಾಗಿತ್ತು. ಕೆಲವೆಡೆ ಟೀ ತೋಟಗಳು ಸಹ ಮುದ ನೀಡಿದವು. ಟೀ ತೋಟಗಳು ಮಾನವ ಕೃತ ಅನ್ನುವಂತೆ ಭಾಸವಾಯಿತು. ಅವು ಸಹಜವಾಗಿಯೇ ಕೃತಕ ಅನ್ನುವಂತೆ. ಕಾಫಿ ತೋಟಗಳು ಹೆಚ್ಚು ನೈಸರ್ಗಿಕ ಅನ್ನಿಸಿತು. ಆಯಾ ಗಿಡಗಳ ಸ್ವರೂಪ ಇದಕ್ಕೆ ಕಾರಣ ಅನ್ನಿಸುತ್ತೆ. ಕಾಫಿ ತೋಟಗಳು ನನಗೆ ಹಿಡಿಸುವುದಕ್ಕೆ ಅದರ ಮೇಲಿರೋ ವ್ಯಾಮೋಹವೂ ಕಾರಣವಿರಬಹುದೇನೋ! ಸುಮಾರು ೧೦.೧೫ ಕ್ಕೆ ಚಿಕ್ಕಮಗಳೂರು ತಲುಪಿದೆವು . ಅಲ್ಲಿಂದ ಕಡೂರಿನ ಬಸ್ ಹಿಡಿದು ಸಖರಾಯ ಪಟ್ಟಣ ತಲುಪಿದೆವು .ಇಲ್ಲಿ ಒಬ್ಬ ಅವಧೂತರ ದರ್ಶನ ಮಾಡಬೇಕೆಂಬ ಆಸೆ ನಮ್ಮದಾಗಿತ್ತು . ವೆಂಕಟಾಚಲ ಸ್ವಾಮಿಗಳು ಎಂದು ಹೆಸರು. ಸ್ವಾಮಿ ಅಂತ ಜನ ಗೌರವಿಸುತ್ತಾರೆ. ಅವರ ಬಗ್ಗೆ ನಾವು ಕೇಳಿದ್ದೆವು. ಒಮ್ಮೆ ಹಿಂದೆ ನೋಡಿದ್ದೆ ಕೂಡ. ಬಸ್ ನಿಲ್ದಾಣದಲ್ಲಿ ಇಲ್ಲಿ ಗುರುಗಳ ಮನೆ ಯಾವುದು ಎಂದು ಕೇಳಿ ವಿಳಾಸ ತಿಳಿದುಕೊಂಡು ಅವರ ಮನೆ ತಲುಪಿದೆವು . ಮನೆಯನ್ನ ಚಂದ್ರಶೇಖರ ಭಾರತಿ ಸಂಸ್ಥಾನಕ್ಕೆ ಸೇರಿದ್ದು ಎಂದು ಬರೆಸಿದ್ದಾರೆ .ಅಲ್ಲಿ ವೇದ ಪರಾಯಣ ನಡೀತಿತ್ತು. ರುದ್ರ ಪಾರಾಯಣ ಹಿತಕರವಾಗಿತ್ತು. ಅಲ್ಲಿದ್ದ ಕೆಲವರನ್ನು ವಿಚಾರಿಸಿದೆವು. ಸ್ವಾಮಿಗಳು ಇದ್ದಾರ ಅಂತ. ಒಬ್ಬರು ಇಲ್ಲ ಅವರು ಚಿಕ್ಕಮಗಳೂರಿಗೆ ಹೋಗಿದ್ದಾರೆ ಅಂದರು,ಮತ್ತೊಬ್ಬರು ಇಲ್ಲ ಶೃಂಗೇರಿಯಲ್ಲಿ ಇದ್ದಾರೆ ಅಂದರು,ಮತ್ತೊಬ್ಬರು ಅವರಿಗೆ ಹುಷಾರಿಲ್ಲ ಹಾಸಿಗೆ ಹಿಡಿದಿದ್ದಾರೆ ಈಗ ಯಾರನ್ನು ನೋಡೋಲ್ಲ ಎಂದರು. ಯಾವುದು ಸತ್ಯ ಎಂಬುದು ತಿಳಿಯಲಿಲ್ಲ . ಏನು ಮಾಡೋದು? . ಅಲ್ಲೊಂದು ಅಂಗಡಿಯಲ್ಲಿ ಬಾಳೆ ಹಣ್ಣು ತಿನ್ನುತ್ತ ಕುಳಿತೆವು . ಅಂಗಡಿಯಾಕೆ 'ಯಾಕೆ? ಗುರುಗಳು ಸಿಕ್ಕಿಲ್ವ ಬುದ್ದಿ?' ಅಂದಳು. "ಇಲ್ಲಮ್ಮ ಅವರು ಊರಲ್ಲಿ ಇಲ್ಲವಂತೆ" ಅಂದ್ವಿ ಬೇಸರದಿಂದ . ಆಕೆ ಸೀದಾ ಅವರ ಮನೆಗೆ ನುಗ್ಗಿ ನೋಡಿಕೊಂಡು ಬಂದು 'ಸ್ವಾಮಿಯೋರು ಮನೇಲೆ ಅವ್ರೆ, ಅಲ್ಲೇ ಕುಂತಿರಿ ಕರೀಲೂ ಬೋದು ,ದೂರದಿಂದ ಬಂದೀರ ಯಾಕೆ ನೋಡದಂಗೆ ವೋಯ್ತಿರ "ಅಂದಳು. ಅದು ನಿಜವೇ ಎಂದು ಅವರ ಮನೆ ಬಳಿ ಕುಳಿತೆವು. ಸ್ನೇಹಿತ ಹೇಳಿದ. ಭಕ್ತಿಯಲ್ಲಿ ನಾವು ಭೀಮನ್ನ ಆಶ್ರಯಿಸಬೇಕು. ಧೀರತೆ ಇರಬೇಕು. ಈ ಬಾರಿ ಬಂದಿದ್ದೇವೆ. ದರ್ಶನವಾದರೆ ಈಗಲೇ ಆಗ್ಬೇಕು ಮತ್ತೆ ಬರೋಲ್ಲ ಎಂದು ನಿರ್ಧರಿಸಿ ಕುಳಿತೆವು.ಒಬ್ಬರು ಮನೆಯಿಂದ ಹೊರಬಂದು ಗುರುಗಳು ಕರೀತಿದ್ದಾರೆ ಅಂದರು . ನಾವು ಧಡ ಧಡ ಎದ್ದು ಒಳಗೆ ಹೋದೆವು. ಕುರ್ಚಿಯ ಮೇಲೆ ಒಂದು ಪುಟ್ಟ ದಟ್ಟಿ ಸುತ್ತುಕೊಂಡು ಕುಳಿತಿದ್ದರು. ನೋಡಲಿಕ್ಕೆ ಭವ್ಯವಾದ ಆಕೃತಿ. ೮೫ ವರ್ಷ ವಯಸ್ಸಾಗಿದೆ ಎಂದೆನಿಸಲಿಲ್ಲ . ತಲೆತುಂಬ ಕೆದರಿದ ಬಿಳಿ ಕೂದಲು ,ಕೆದರಿದ ಗಡ್ಡ ತೇಜಸ್ವಿ ಮುಖಲಕ್ಷಣ. ಸ್ನೇಹಿತ ಹೋಗುತ್ತಲೇ ಅಡ್ಡ ಬಿದ್ದ ,ತಕ್ಷಣ "ಈ ಗಿಲೀಟು ಎಲ್ಲಾ ಬಿಟ್ಟು ಬಿಡು . ನಮಸ್ಕಾರ ಏನ್ ಮಾಡೋದು ನೀನು! ಬೀದೀಲಿ ಕಸ ಗುಡಿಸು ,ಆಗತ್ತಾ? ಅದು ಮಾಡು ಮೊದಲು. ಈ ಗಿಲೀಟೆಲ್ಲ ಬಿಟ್ಟು ಬಿಡು !"ಎಂದು ಗದರಿದರು ಅವನು ಅವಕ್ಕಾಗಿ ನಿಂತ. ನಮಸ್ಕರಿಸಲು ಸಿದ್ಧನಾಗಿದ್ದ ನಾನು ಹಿಂಜರಿದೆ. ಸೇವೆ ಮಾಡು ಎಂಬ ಆದೇಶ ಸಿಕ್ತೆಂಬ ಖುಷಿ ಆಯಿತು. ಸರಿ ಸರಿ ಏನು ಸುಮ್ನೆ ನಿಂತಿದ್ದೀರ. ಮೊದ್ಲುಊಟ ಮಾಡಿ ಹೋಗಿ ಹೋಗಿ ಎಂದು ಕಳುಹಿಸಿದರು. ನಮ್ಮ ಹಿಂದೆ ಬಂದ ಅನೇಕರಿಗೆ ಸ್ವಸ್ತಿ ವಾಚನ ನಡೀತಾ ಇತ್ತು. ಊಟ ಅದ್ಭುತವಾಗಿತ್ತು. ಪಾಯಸ,ಸಾರು,ಮಜ್ಜಿಗೆ ಹುಳಿ,ಪಲ್ಯಗಳು,ಬಿಸಿ ಶಾಲ್ಯನ್ನ,ಸಕ್ಕರೆ ಹೋಳಿಗೆ ,ಹಲಸಿನ ಹಣ್ಣು .ಮಾವಿನ ಹಣ್ಣಿನ ಸೀಕರಣೆ ಇತ್ಯಾದಿ . ಊಟ ಮಾಡುವಾಗ ನಮೆಗೆಲ್ಲ ಆರತಿ ಮಾಡಿದರು. ಗುರು ಸಂಬಂಧಿ ಭಜನೆಗಳು ಶ್ರಾವ್ಯವಾಗಿ ಕೇಳುತ್ತಿದ್ದವು. ಎಂಜಲು ಎಲೆಯನ್ನೂ ಅವರೇ ಎತ್ತಿದರು ,ಕೈ ತೊಳೆಯಲಿಕ್ಕೂ ಕೂತಲ್ಲೇ ವ್ಯವಸ್ಥೆ. ಇದೇನಪ್ಪ ಸತ್ಕಾರ ಎಂದು ನಮಗೆ ಆಶ್ಚರ್ಯ. ನಂತರ ತಾಂಬೂಲ,ವಸ್ತ್ರ ಎಲ್ಲಾ ಕೊಟ್ಟರು. ಜಾತಿ ಮತ ಭೇದ ಇಲ್ಲವೇ ಇಲ್ಲ. ಎಲ್ಲರೂ ಒಂದೇ ಎಂಬ ಅದ್ವೈತ ಭಾವ. ನಾವು ಅದ್ವೈತವನ್ನ ಬಡಬಡಿಸುತ್ತಿದ್ದರೆ ಅವರು ಅದ್ವೈತವನ್ನ ಆಚರಿಸುತ್ತಿದ್ದರು. ಅವಧೂತರ ನಡಾವಳಿಗಳು ಎಷ್ಟು ವಿಚಿತ್ರ ಎಂಬುದರ ಪ್ರತ್ಯಕ್ಷ ದರ್ಶನ ವಾಯಿತು.ಅವರ ಮನಸ್ಥಿತಿಯನ್ನ (ಮನಸು ಎಂಬುದೊಂದಿದ್ದರೆ) ನಮ್ಮದರ ಜೊತೆ ತಾಳೆ ಹಾಕಿ ನೋಡಿದಾಗ ಅದು ವಿಚಿತ್ರ ಎನ್ನಿಸುವುದು ಸಹಜವಷ್ಟೇ. ಊಟಿಸಿ ಹೊರಡುವ ಮುಂಚೆ ಅವರ ದರ್ಶನ ಮಾಡಿದೆವು. ಏನು ? ಎಂದು ಪ್ರಶ್ನಾರ್ಥಕವಾಗಿ ನೋಡಿದರು ಕೇಳಲೇನು ಇಲ್ಲ ನಿಮ್ಮನ್ನ ನೋಡಲಿಕ್ಕೆ ಮಾತ್ರ ಬಂದವರು ಅನ್ನೋ ಭಾವದಿಂದ ನಮಸ್ಕರಿಸಿ ಹೊರಟೆವು .ಪ್ರಯಾಣ ನಿಜಾರ್ಥದಲ್ಲಿ 'ಪೂರ್ಣ'ವಾಯಿತು .:)

ಕಡೂರಿಗೆ ಬಂದು ಕಡೂರಿಂದ ಬೆಂಗಳೂರಿನ ಬಸ್ ಹಿಡಿದೆವು . ಅರಸೀಕೆರೆ ,ತಿಪಟೂರು ಹೀಗೆ ನಮ್ಮ ಪ್ರದೇಶಕ್ಕೆ ಹತ್ತಿರವಾದಂತೆ ಪ್ರಕೃತಿಯಿಂದ ಹೆಚ್ಚು ದೂರ ಆಗ್ತಾ ಇದೀವಿ ಅನ್ನೋ ನೋವು ಕಾಡತೊಡಗಿತು. ಅಲ್ಲಿನ ಪ್ರಶಾಂತತೆ , ಸ್ನೇಹಪರತೆ ಇಲ್ಲಿ ಕಾಣುತ್ತಿರಲಿಲ್ಲ. ಅಲ್ಲಿಯ ಬಸ್ ಗಳು ತುಂಬಿ ತುಳುಕಿದ್ದರೂ ಹೆಚ್ಚು ಮಾತಿಲ್ಲ ಆದರೆ ಬಿಗುಮಾನವೂ ಇಲ್ಲ . ಎಲ್ಲರೂ ಅಲ್ಲಿನ ಪರಿಸರದಂತೆಯೇ ಇದ್ದರು. ಇಲ್ಲಿಯೂ ಅಷ್ಟೇ ಇಲ್ಲಿಯ ಪರಿಸರದಂತೆ ಜನ ಗಿಜಿ ಬಿಜಿ ,ಗಲಾಟೆ ಮಾಡ್ತಾ ಇದ್ದರು. ಇವೆಲ್ಲವನ್ನೂ ನೋಡ್ತಾ ಮನಸ್ಸು ಮತ್ತೆ ಒಳಸರಿಯಿತು . ನಾಗರೀಕತೆ ಅನ್ನುವ ರೋಗ ಹೆಚ್ಚಿದಂತೆಲ್ಲ ನಾವು ಪ್ರಕೃತಿ ಮಾತೆಯ ಮಡಿಲಿಂದ ಜಾರಿ ಬಿದ್ದು ತಬ್ಬಲಿಗಳಾಗುತ್ತಿದ್ದೇವೆ ಅನ್ನೋ ಭಾವ ಮೂಡಿ ಮನಸ್ಸು ಮತ್ತೆ ವ್ಯಸ್ತವಾಯಿತು. ಗಲಿಬಿಲಿಗೊಂಡಿತು ,ಗೋಜಲಾಯಿತು . ಬೆಂಗಳೂರಿನ ಪರಿಸರಕ್ಕೆ ಸಂವಾದಿಯಾಗಿ :)

ಸಾಯಿ ಗಣೇಶ್ ಎನ್ ಪಿ

5 comments:

 1. ಸುಂದರ ಬರಹ, ಆದರೆ ನಿಮ್ಮಲ್ಲೆ ಯಾರು ಬರೆದದ್ದೆಂದು ಗೊತ್ತಾಗಲಿಲ್ಲ. ಯಾರೇ ಇರಲಿ, ಸುಂದರ ಬರಹಕ್ಕಾಗಿ ಥಾಂಕ್ಸ್. ನಿಮ್ಮ ಸ್ವಾತಂತ್ರ ನೋಡಿ ತುಸು ಹೊಟ್ಟೆಕಿಚ್ಚಾಗಿದ್ದಂತೂ ನಿಜ.

  ಚಿತ್ರಗಳು ಚೆನ್ನಾಗಿವೆ. "ನಾವು ಪ್ರಕೃತಿ ಮಾತೆಯ ಮಡಿಲಿಂದ ಜಾರಿ ಬಿದ್ದು ತಬ್ಬಲಿಗಳಾಗುತ್ತಿದ್ದೇವೆ ಅನ್ನೋ ಭಾವ" ಸತ್ಯವಾದ ಮಾತು

  ReplyDelete
 2. ಧನ್ಯವಾದಗಳು,

  ನಿಮ್ಮ ಪ್ರೋತ್ಸಾಹ ಹೀಗೆ ಇರಲಿ :)
  ಹೆಸರು ಹಾಕಿದೆ ಈಗ. ಬೇರೆ ಫೋಟೋಸ್ ಎಲ್ಲಾ ಕಾಣೆಯಾದವು! ತಂತ್ರಜ್ಞಾನದ ವಿವಿಧ ಮಜಲುಗಳು ತಿಳಿಯುವುದು ಕಷ್ಟವೇನೋ!

  ReplyDelete
 3. ಪ್ರಕೃತಿಗೂ ಸಂಗೀತಕ್ಕೂ ನಡುವಣ ಸಂವಾದಿತ್ವವನ್ನು ಸೂಕ್ಷ್ಮವಾಗಿ ಹೆಣೆದ ಬರಹ,ತಿಳಿಹಾಸ್ಯದಿಂದ ಕೂಡಿದ್ದು,ಖುಷಿ ಕೊಡುತ್ತದೆ,ಅವಧೂತದರ್ಶನದ ಬಗ್ಗೆ ಓದುವಾಗ ನನ್ನ ಕಣ್ಣಂಚು ತೇವವಾಯ್ತು.ಸಂಗೀತದ ಗುಣ ಇರುವಂಥಹ ಶೈಲಿ ಆನಂದ ಕೊಡುತ್ತದೆ,ಕಡೆಯ ಸಾಲುಗಳು ಮಾರ್ಮಿಕವಾಗಿವೆ.

  ReplyDelete
 4. ನಾನಾತ್ವವೇ ಪ್ರಕೃತಿಯ ಸೌಂದರ್ಯದ ಗುಟ್ಟು ಎಂದೆನಿಸುತ್ತೆ. ಕಲೆಗಳಲ್ಲೂ ಅದೇ ತಾನೇ (ಸಂಗೀತವೂ ಸೇರಿದಂತೆ) ಆದರಿಂದ ಒಂದಕ್ಕೊಂದು ಸಂವಾದಿಯಗಿರೋದು ಸಹಜವೇ ಅನ್ನಿಸುತ್ತೆ :)

  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು :)

  ReplyDelete
 5. ಗುರು ದರ್ಶನ ಆಯ್ತಲ್ಲ ನೀವು ಪುಣ್ಯವಂತರು.........
  ಅವರ ಮಾತುಗಳನ್ನು ರವಷ್ಟು ಕೇಳಬೇಕಿತ್ತು...
  ಹಿಂದೆ ನಾನು ಬೇಡವೆಂದರೂ ನನಗೆ ಅವರು ನೋಡಲು ಸಿಗುತ್ತಿದ್ದರು....
  ಯಾವಾಗ ನೋಡಬೇಕೆಂದು ಹಂಬಲಿಸಿದೆನೋ ಆಮೇಲೆ ದರ್ಶನ ಆಗಲೇ ಇಲ್ಲ.
  ಆ ಪುಣ್ಯ ಜೀವ ಶಿವನಲ್ಲಿ ಸೇರಿತು ಅಂತ 2-3 ತಿಂಗಳ ಹಿಂದೆ ಸುದ್ದಿ ಬಂತು..
  ಅವರ ಆಶೀರ್ವಾದ ನಮ್ಮಜೊತೆಲ್ಲಿರುತ್ತೆ ಬಿಡಿ.
  ಉಳಿದಂತೆ ಲೇಖನ ಫಸ್ಟ್ ಕ್ಲಾಸ್........

  ReplyDelete