Wednesday, April 28, 2010

ವಂಶವೃಕ್ಷ ಒಂದು ಸಿಂಹಾವಲೋಕನ -೧


ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವೇ ಅಲ್ಲದೆ ಭಾರತೀಯ ಸಾರಸ್ವತ ಲೋಕದಲ್ಲೇ ಅಗ್ರಗಣ್ಯರು ಜನಪ್ರಿಯರೂ ಆಗಿರುವ ಕಾದಂಬರಿಕಾರರು ಎಸ.ಎಲ್.ಭೈರಪ್ಪನವರು . ಅವರ ಅತ್ಯುತ್ತಮ ಕಾದಂಬರಿಗಳನ್ನು ಗಮನಿಸಿದಾಗ ತನ್ನದೇ ಆದ ವಿಶಿಷ್ಟ ಸ್ಥಾನ ಗಳಿಸಿರುವ ಕಾದಂಬರಿ ವಂಶವೃಕ್ಷ . ೧೯೬೫ ರಲ್ಲಿ ಪ್ರಕಟಣೆಗೊಂಡ ಇದು ೨೦೦೯ ರ ವರೆಗೂ ಸತತವಾಗಿ ಮರುಮುದ್ರಣ ಕಾಣುತ್ತಿರುವುದು , ಕಾದಂಬರಿಯ ಜನಪ್ರಿಯತೆಗೆ ಸಾಕ್ಷಿ .
ವಂಶವೃಕ್ಷದ ಬಗೆಗೆ ಗಮನಿಸುವುದಾದರೆ , ಮೊದಲಿಗೆ ಈ ಕಾದಂಬರಿಯ ಕಾಲ ದೇಶಗಳನ್ನೂ ಗಮನಿಸಬೇಕು . ಈ ಕಥೆಯು ನಡೆಯುವ ಕಾಲ ೧೯೪೦-೧೯೬೦ ರ ಹದಿನೈದು ಇಪ್ಪತ್ತು ವರ್ಷಗಳ ಅವಧಿ . ಇದರ ದೇಶವು ಬಹಳ ಸಂಕ್ಷಿಪ್ತವಾದ ಮೈಸೂರು ನಂಜನಗೂಡುಗಳ ನಡುವೆ . ಭೌಗೋಳಿಕವಾಗಿ ಕಥೆಯ ವಿಸ್ತಾರ ಬಹಳ ಕಡಿಮೆಯಾದರೂ ಭಾವನಾತ್ಮಕ ಪ್ರಪಂಚದಲ್ಲಿ ಅತಿ ಆಳವೂ ವಿಸ್ತಾರವೂ ಆಗಿದೆ . ಶ್ರೋತ್ರಿಯರಿಗೆ ಉಂಟಾಗುವ ಆತ್ಮ ಭರ್ತ್ಸನೆ , ಸಮಾಜದಲ್ಲಿ ನೆಲೆಯೂರಿರುವ ವಿಚಾರಗಳ ವಿರುದ್ಧ ಹೊರಟಾಗ ಕಾತ್ಯಾಯಿನಿಯಲ್ಲಿ ಉಂಟಾಗುವ ಒಳತೋಟಿ ಮುಂತಾದವುಗಳ ವಿವರಣೆ ಚಿತ್ರ ಸದೃಶವಾಗಿ ಕಣ್ಣಮುಂದೆ ನಡೆಯುವಂತಿವೆ. ಭೈರಪ್ಪನವರ ಇತರೆ ಕಾದಂಬರಿಯಂತೆ ಇಲ್ಲೂ ಯುಗ ಸಂಧಿ ಕಾಲದಲ್ಲಿ ಉಂಟಾಗುವ ಮೌಲ್ಯ ಸಂಘರ್ಷವನ್ನು ಚಿತ್ರಿಸಿ ಆ ಮೂಲಕ ಸತ್ಯಶೋಧನೆಯಲ್ಲಿ ಲೇಖಕರು ತೊಡಗುತ್ತಾರೆ . ಉಕ್ಕಿ ಬರುವ ಕಪಿಲೆಯ ಪ್ರವಾಹವನ್ನು ಮೌಲ್ಯ ಸಂಘರ್ಷದ ಭೌತಿಕ ಪ್ರತೀಕವಾಗಿ ಲೇಖಕರು ಉಪಯೋಗಿಸಿದ್ದಾರೆ .ಪ್ರವಾಹ ನಿಂತಮೇಲು ಅವಿಚ್ಚಿನ್ನವಾಗಿ ಸಾಗುವ ನದಿಯ ಚಲನೆಯು ಸತತವಾಗಿ ಸಾಗುವ ಧರ್ಮದ ಸ್ರೋತಕ್ಕೆ ದ್ಯೋತಕವಾಗಿದೆ. ಕಾದಂಬರಿಯಲ್ಲಿ ಮುಖ್ಯವಾಗಿ ಚರ್ಚಿತವಾಗುವ ಪ್ರಶ್ನೆ . ಒಂದು ಸಂತತಿಯ ನಿಜವಾದ ಬಾಧ್ಯಸ್ತರು ಯಾರು ಎಂಬುದು . ತಮ್ಮ ಜೀವನವನ್ನೇ ಸಂಶೋಧನೆ ಹಾಗು ಕೃತಿರಚನೆಗಾಗಿ ಮುಡುಪಾಗಿಟ್ಟ ಸದಾಶಿವರಾಯರ ಮಗ ಪ್ರುತ್ವಿಗೆ ಅವರ ಕೃತಿಗಳು ಯಾವ ಉಪಯೋಗಕ್ಕೂ ಬಾರದ ಪುಸ್ತಕಗಳಾಗುತ್ತವೆ. ಕರುಣಾರತ್ನೆ , ಲಂಕೆಗೆ ಹಿಂದಿರುಗುವಾಗ ನಿನ್ನ ತಂದೆಯ ಪುಸ್ತಕವನ್ನು ಓದು ಎಂದು ಪ್ರುತ್ವಿಗೆ ಹೇಳಿದಾಗ " ನಾನು ಸೈನ್ಸ್ ವಿದ್ಯಾರ್ಥಿ" ಎಂದು ಹೇಳಿ ಇಡೀ ಒಂದು ಪರಂಪರೆಗೆ ಬೆನ್ನು ಮಾಡುವ ರೀತಿ , ಕಾದಂಬರಿಯ ಎಲ್ಲ ಸಾರವನ್ನು ಹಿಡಿದಿಟ್ಟಿರುವ ಒಂದು ಮಾರ್ಮಿಕ ಘಟ್ಟ ಎಂದರೆ ತಪ್ಪಾಗಲಾರದು. ಅಲ್ಲಿ ಮೂಡುವ irony ಅತಿ ಉತ್ಕೃಷ್ಟವಾದ , ಮನಕಲಕುವಂತಹದ್ದು . ಆದರೆ ಭಾರತಕ್ಕೇ ಪರಕೀಯಳಾದ ಕರುಣಾರತ್ನೆ ,ರಾಯರ ಭಾರತೀಯ ಸಂಸ್ಕೃತಿಯ ಬಗೆಗಿನ ಸಂಶೋದನೆಯಲ್ಲಿ ಸಹಕರಿಸಿ , ಮೋಕ್ಷ ಪತ್ನಿಯಂತೆ ರಾಯರನ್ನು ಸೇವಿಸುವ ಬಗೆ , ಆಕೆಯನ್ನು ರಾಯರ ಪರಂಪರೆಯ ನಿಜವಾದ ಹಕ್ಕುದಾರಿಣಿಯನ್ನಾಗಿ ಮಾಡುತ್ತದೆ . ಅಂತೆಯೇ ತನ್ನ ಹುಟ್ಟಿನ ಬಗ್ಗೆ ಸತ್ಯವನ್ನರಿತ ಶ್ರೋತ್ರಿಯರಿಗೆ , ಅವರು ಅತಿ ಪಾವಿತ್ರ್ಯವೆಂದು ನಂಬಿದ್ದ ಅವರ ವಂಶಕ್ಕೆ ಅವರ ಸಂಬಂಧವೇ ಇಲ್ಲ ವೆಂದು ಅವರಿಗೆ ತಿಳಿದಾಗ , ಅವರಿಗಾಗುವ ಆಘಾತ ಎಂತದ್ದು ಎಂಬುದು ಊಹಿಸಲೂ ಅಸಾಧ್ಯವಾದುದು . ಆದರು ಅವರು ದೃತಿಗೆಡದೆ ತಮ್ಮ ಕರ್ತವ್ಯವನ್ನು ಪಾಲಿಸಿ , ನಿರ್ವಹಿಸುವ ರೀತಿ , ಸಾನತನ ಧರ್ಮದಿಂದ ಅವರಿಗೆ ಒದಗಿದ ಸಂಸ್ಕಾರಕ್ಕೆ ಸಾಕ್ಷಿ .
(ಮುಂದುವರೆಯುವುದು)
ಶಶಾಂಕ್ .ಮ.ಅ

Wednesday, April 21, 2010

ಸಂಗೀತ ರಸಾಸ್ವಾದನೆ-ಹೀಗೊಂದು ಚಿಂತನೆ

ಒಂದು ಕಲಾ ಪ್ರಕಾರದ ಸೌಂದರ್ಯವನ್ನು ಕಲೆಯ ಮಟ್ಟದಲ್ಲೇ ಆಸ್ವಾದಿಸುವುದು ಉತ್ತಮ ರಸಿಕನಾಗಬಯಸುವನ ಗಮ್ಯವಾಗಿರುತ್ತದೆ.ಕಲೆಯನ್ನು ಆಸ್ವಾದಿಸುವುದು ವಿಷಯ ಜ್ಞಾನ,ವಿಚಾರ ಶುದ್ಧಿ,ಭಾವ ಸಮೃದ್ಧಿ ಮೊದಲಾದ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಸಂಗೀತದ ಸೊಗಸನ್ನು ಆಸ್ವಾದಿಸುವ ವಿಷಯದಲ್ಲೂ ಮೇಲ್ಕಂಡ ವಿಚಾರಗಳನ್ನು ಅನ್ವಯ ಮಾಡಬಹುದು .


ಪ್ರಸ್ತುತ ಭಾರತೀಯ ಸಂಗೀತ ವಾಹಿನಿಯು ಕವಲೊಡೆದು ೨ ಮುಖ್ಯ ಹರಿವುಗಳಾಗಿರುವುದು ವೇದ್ಯವಾದ ವಿಚಾರವಷ್ಟೇ. ಮೂಲ ಸ್ವರೂಪವನ್ನು ಹೆಚ್ಚು ಮಾರ್ಪಾಡು ಮಾಡಗೊಡದೆ ಹಾಗೆಯೇ ಉಳಿಸಿಕೊಂಡು ಬಂದಿರುವ ಗರಿಮೆ ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ್ದು. ವಿವಿಧ ಸಂಗೀತ ಪ್ರಾಕಾರಗಳಿಗೆ ಹೋಲಿಸಿದರೆ ನಮ್ಮ ಸಂಗೀತದ ಸ್ವರೂಪ ಹೆಚ್ಚು ಸಂಕೀರ್ಣವಾದದ್ದು ಹಾಗೆಯೇ ಸೂಕ್ಷ್ಮವಾದದ್ದು.ನಮ್ಮ ರಾಗಗಳ ಕಲ್ಪನೆ,ತಾಳಗಳ ವೈವಿಧ್ಯತೆ ,ವಿಪುಲವಾದ ಗೇಯ ರಚನೆಗಳು ಅದರಲ್ಲಿನ ವಿಭಿನ್ನ ಪ್ರಾಕಾರಗಳು ಹೀಗೆ ಎಲ್ಲವೂ ನಿತ್ಯ ನೂತನವೂ ,ವಿಶಿಷ್ಟವೂ ಆಗಿವೆ. ನಮ್ಮ ಗಮಕದ ವಿಷಯವಂತೂ ಬಹಳ ಗಹನವಾದದ್ದು ಹಾಗೆಯೇ ಇತರ ಸಂಗೀತ ಪದ್ಧತಿಗಳಿಗಿಂತ ಸೂಕ್ಷ್ಮವಾದದ್ದು.ಇಂತಹ ಸಂಗೀತದ ಹಿರಿಮೆ ಗರಿಮೆಗಳನ್ನು ಮನಗಂಡು ಅದರ ಆಶಯಕ್ಕೆ ತಕ್ಕಂತೆ ಪ್ರಸ್ತುತಿಪಡಿಸುವದು ಮೇರು ಸಾಧನೆಯಾದರೆ ಅದನ್ನು ರಸದ ಮಟ್ಟದಲ್ಲಿ ಅನುಭವಿಸುವ ರಸಿಕ ಪ್ರಜ್ಞೆ ಪಡೆಯುವುದೂ ಸಹ ಕಷ್ಟ ಸಾಧ್ಯವೇ ಸರಿ.


ಒಬ್ಬ ರಸಿಕನಾಗಿ ನಾನು ಸಂಗೀತದಲ್ಲಿ ಅರಸುವುದು ಏನು ಎಂಬ ಪ್ರಶ್ನೆಯಿಂದ ಈ ರಸಾಸ್ವಾದನೆಯ ವಿಚಾರ ಮಂಥನ ಮೊದಲುಮಾಡುವುದು ಸೂಕ್ತವೆನಿಸುತ್ತದೆ.ಸಾಮಾನ್ಯವಾಗಿ ಸಂಗೀತದಲ್ಲಿ ನಮ್ಮನ್ನು ಆಕರ್ಷಿಸುವುದು ಶುದ್ಧ ನಾದ.ಶ್ರುತಿಯಲ್ಲೇ ಲೀನವಾಗಿ ಹೋಗುವ ನಾದ ಸೌಖ್ಯ ಯಾರಿಗೆ ಬೇಡ? ಹಾಗಾದರೆ ಕೇವಲ ನಾದ ಸೌಖ್ಯವಷ್ಟೇ ಸಂಗೀತದ ಗಮ್ಯವೇ ?ಅದನ್ನೂ ಸೇರಿದಂತೆ ಮತ್ತೇನು ಎಂದರಸಿದಾಗ ಲಯದ ನಿಗೂಢತೆ ,ಅಗಾಧತೆಯ ಅರಿವಾಗುತ್ತದೆ. ಲಯ ವಿಹೀನವಾದ ಸಂಗೀತವಿಲ್ಲವಷ್ಟೇ.ನಾದ ಲಯಗಳ ಪರಿಪಾಕವೇ ಸಂಗೀತವೇ? ಮನೋಧರ್ಮ ಪ್ರಧಾನವಾದ ,ಧಾತುವೇ ಮುಖ್ಯವಾದ ಶಾಸ್ತ್ರೀಯ ಸಂಗೀತದಲ್ಲಿ ಇದು ಬಹುಮಟ್ಟಿಗೆ ಸತ್ಯವೂ ಹೌದು. ಆದರೆ ನಮ್ಮ ಸಂಗೀತದಲ್ಲಿ ಸಾಹಿತ್ಯವೂ ಪೋಷಕವಾಗಿ ,ಕೆಲವೊಮ್ಮೆ ಸಂಗೀತದಿಂದ ಪೋಷಣೆಯನ್ನು ಪಡೆದು ತನ್ನ ಹಿರಿಮೆ ಗರಿಮೆಗಳನ್ನು ಹೆಚ್ಚಿಸಿಕೊಂಡಿದೆಯಷ್ಟೇ.ಹೀಗಾಗಿ ರಸಿಕನಾದವನಿಗೆ ನಾದ ಸೌಖ್ಯ,ಲಯ ಜ್ಞಾನ ,ಸಾಹಿತ್ಯಾರ್ಥ ಅದರಿಂದ ಹೊರಹೊಮ್ಮುವ ಭಾವದ ಅರಿವು ಇವುಗಳೆಲ್ಲವನ್ನೂ ಸಮಷ್ಟಿಯಲ್ಲಿ ಗ್ರಹಿಸುವ ಮನೋಪರಿಪಾಕ ಮುಖ್ಯವೆಂದನಿಸುತ್ತದೆ.


ಒಂದು ರಾಗಲಾಪನೆಯನ್ನು ಕೇಳುವಾಗ ಹಲವರಿಗೆ ಹಲವು ರೀತಿಯ ಅನುಭವಗಳಾಗಬಹುದು.ಒಬ್ಬೊಬ್ಬರಿಗೆ ಆಗುವ ಆನಂದ ವಿಭಿನ್ನ ರೀತಿಯದ್ದಾಗಿರಬಹುದು. ಸಾಮಾನ್ಯ ಶ್ರೋತೃ ಒಬ್ಬನಿಗೆ ಸಿಗುವ ಆನಂದ ನುರಿತ ಶ್ರೋತೃವಿಗೆ ದೊರೆಯದೆ ಹೋಗಬಹುದು.ನುರಿತ ಶ್ರೋತೃವಿಗೆ ಸಿಕ್ಕ ಆನಂದದ ಅನುಭವ ಬೇರೆಯದೇ ಆಗಿರಬಹುದು.ಸಂಗೀತದಿಂದ ಕೆಲವರಿಗೆ ಕೇವಲ ಭಾವ ವಿರೇಚನವಾದರೆ , ಕೆಲವರಿಗೆ ಅದು ಆತ್ಮೋನ್ನತಿಯಾಗಬಹುದು . ಮನಸ್ಸನ್ನು ಪರಿಶುದ್ಧಗೊಳಿಸುವ ಧ್ಯಾನವಾಗಬಹುದು. ಹೀಗಾಗಿ ರಸಾಸ್ವಾದನೆಯ ಆನಂದದಲ್ಲೂ ವಿಕಲ್ಪಗಳು ಉಂಟು ಎಂದು ತಿಳಿಯಬಹುದಷ್ಟೇ.ಈ ವಿಕಲ್ಪಗಳಿಗೆ ಕಾರಣಗಳೇನು ಎಂದರೆಸುತ್ತ ಹೋದಲ್ಲಿ ಶ್ರೋತೃವಿನ ಮನಸ್ಥಿತಿ ,ಸಂಗೀತ ಜ್ಞಾನ,ಭಾವ ಸಾಂದ್ರತೆ ಇಂತಹ ಅನೇಕ ಕಾರಣಗಳು ಗೋಚರವಾಗುತ್ತವೆ .ಉದಾ : ದು:ಖ ತಪ್ತನಾಗಿರುವ ಒಬ್ಬ ವ್ಯಕ್ತಿಗೆ ಒಮ್ಮೆ ಕೇಳಿದ ಸಂಗೀತ ಸಾಂತ್ವನದಂತಿರಬಹುದು ಅದೇ ಸಂಗೀತ ಮತ್ತೊಮ್ಮೆ ವಸ್ತುನಿಷ್ಟವಾಗಿ ಕೇಳಿದಾಗ ರುಚಿಸದೆ ಹೋಗಬಹುದು. ಹೀಗೆ ಬದಲಾಗುತ್ತಿರುವ ಮನಸ್ಥಿತಿಗೆ ತಕ್ಕಂತೆ ರಸಾಸ್ವಾದನೆಯೂ ಬದಲಾದಲ್ಲಿ ಅದು ಪಕ್ವವಾದ ಕೇಳ್ಮೆಯಲ್ಲ. ಇನ್ನು ಸಂಗೀತ ಜ್ಞಾನದ ವಿಚಾರಕ್ಕೆ ಬಂದರೆ ರಾಗಗಳ ಸೂಕ್ಷ್ಮ ವಿಚಾರಗಳು , ತಾಳ ವೈವಿಧ್ಯತೆಯ ನಿಗೂಢ ತತ್ವವನ್ನು ಅರಿತವನು ಅತಿ ವಿಸ್ತಾರವಾದ ಗಾಯನವಾದರೂ ,ಸುಮಧುರವಾಗಿದ್ದರೂ ಶಾಸ್ತ್ರೀಯ ಚೌಕಟ್ಟು ಮೀರಿದ್ದನ್ನು ಒಪ್ಪಲಾರ.ಇಷ್ಟೇ ಆದರೆ ಅದೂ ಕೂಡ ಪಕ್ವವಾದ ರಸಿಕನ ಲಕ್ಷಣವಲ್ಲವಷ್ಟೇ.ಹಾಗಾಗಿ ಭಾವ ಸಾಂದ್ರತೆಯೂ ಅಷ್ಟೇ ಮುಖ್ಯ. ಪ್ರಸ್ತುತಪಡಿಸಲ್ಪಟ್ಟ ಸಂಗೀತದಲ್ಲಿ ತನ್ನನ್ನೇ ತಾನು ಮರೆಯಬಲ್ಲ ಹೃದಯ ಸಂವೇದನೆಯೂ ಮುಖ್ಯವೆಂದನಿಸುತ್ತದೆ. ಹೀಗೆ ಮನೋವಿಕಲ್ಪಗಳನ್ನು ಮೀರಿ ,ಶಾಸ್ತ್ರೀಯತೆಯನ್ನು ಅರಿತು ಸಂಗೀತವನ್ನು ಆಸ್ವಾದಿಸಿದರೆ ಅದು ಪರಿಪೂರ್ಣವಾದ ಕೇಳ್ಮೆಯಾಗಬಲ್ಲದು ಎಂದನಿಸುತ್ತದೆ.


ಇಂತಹ ರಸಿಕನಾಗುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವೂ ಕ್ಲಿಷ್ಟವೇ ಸರಿ.ಅಪಾರವಾದ ಕೇಳ್ಮೆ ,ಲಕ್ಷಣದ ಅರಿವು ,ಸೂಕ್ಷ್ಮತೆಯೆಡೆಗೆ ನೆಟ್ಟ ದೃಷ್ಟಿ ,ಸೌಂದರ್ಯ ಪ್ರಜ್ಞೆ,ಸಾಹಿತ್ಯಾರ್ಥವನ್ನು ಅರ್ಥಮಾಡಿ ಕೊಳ್ಳುವುದು ,ವಾಗ್ಗೇಯಕಾರರ ಒಳ ಮನಸ್ಸನ್ನು ಅರಿಯುವ ಪ್ರಯತ್ನ ಇವುಗಳೆಲ್ಲದರ ಜೊತೆಗೆ ಬಹುಮುಖ್ಯವಾಗಿ ಸಂಗೀತದೊಡನೆ ನೇರ ಹೃದಯ ಸಂಭಾಷಣೆ ನಡೆಸುವಂತಹ ಸಂವೇದನಾಶೀಲ ಮನಸ್ಥಿತಿ ಇದ್ದಲ್ಲಿ ಉತ್ತಮ ರಸಿಕನಾಗುವುದು ಸಾಧ್ಯವಷ್ಟೆ.


ಸಂಗೀತಗಾರನು ಶಾಶ್ವತ ಸತ್ಯವನ್ನು ನಿರಂತರವಾಗಿ ಹುಡುಕುವ ಆಧ್ಯಾತ್ಮಿಕ ಸಾಧಕನಂತೆ. ರಸವೇ ಆತನ ಗಮ್ಯ.ಅದಕ್ಕಾಗಿ ಆತ ನಿರಂತರ ಶೋಧನೆಯಲ್ಲಿ ತೊಡಗಿರುತ್ತಾನೆ. ರಸಿಕನಾದರೋ ಸಾಧಕನ ನಿಷ್ಠೆಯಿಂದ ಸಂಗೀತಗಾರನ ಶೋಧನೆಯ ಮಾರ್ಗವನ್ನೇ ಕೇಳ್ಮೆಯಲ್ಲಿ ಅನುಸರಿಸಿದರೆ ರಸಿಕನೂ ನಾದೋಪಾಸಕನ ಗಮ್ಯವನ್ನೇ ಸೇರಬಲ್ಲನೆಂಬುದು ನನ್ನ ಬಲವಾದ ನಂಬಿಕೆ .


ಸಾಯಿ ಗಣೇಶ್ ಎನ್ ಪಿ

Wednesday, April 14, 2010

ಏಕ ವ್ಯಕ್ತಿಯ ವಿರಾಟ್ ಸ್ವರೂಪದ ಯಕ್ಷಗಾನ


ಯಕ್ಷಗಾನವೆಂದರೆ ರಾತ್ರಿಯಿಡಿ ನಡೆದು ಸೂರ್ಯೋದಯ ಕಾಲಕ್ಕೆ ಮಂಗಳ ಹಾಡುವ ಪರಿಪಾಠ ಸರ್ವೇ ಸಾಮಾನ್ಯ . ಆದರೆ ಮಂಟಪ್ ಪ್ರಭಾಕರ ಉಪಾಧ್ಯಾರ ಯಕ್ಷಗಾನವೆಂದರೆ , ಸರಿ ಸುಮಾರು ೭-೮ ಘಂಟೆಯ ಪ್ರಸಂಗವನ್ನು ಒಬ್ಬರೇ ವ್ಯಕ್ತಿ,ಪ್ರಸಂಗದ ನಾಟ್ಯ , ಪದ್ಯ ,ಅಭಿನಯ ಹೀಗೆ ಕಲೆಯ ಯಾವುದೇ ಅಂಗಕ್ಕೂ ಭಂಗ ಬಾರದಂತೆ ಕೇವಲ ಒಂದೂವರೆ ಘಂಟೆಯ ಅವಧಿಯಲ್ಲಿ ಅಭಿನಯಿಸುವ ವಿಶೇಷ.
ನಾನು ನೋಡಿದ ಅವರ "ಶೂರ್ಪನಖಿ" ಮತ್ತು "ಮಂಥರೆಯ ದುರ್ಮಂತ್ರ". ಎರಡೂ ಪ್ರಸಂಗಗಳಲ್ಲಿ ಮನಸೆಳೆಯುವ ಅಭಿನಯವನ್ನು ಮಂಟಪರು ನೀಡಿದರು. ಶೂರ್ಪನಖಿಯ ಪಾತ್ರದಲ್ಲಿ ಅವರ ಭಾವಾಭಿವ್ಯಕ್ತಿ , ಭಾಗವತಿಕೆಯವರೊಂದಿಗೆ ಸಮಯೋಚಿತವಾದ , ಹಾಗು ತಿಳಿ ಹಾಸ್ಯಭರಿತ ಪ್ರಶ್ನೋತ್ತರ ಸಂವಾದ ಹನಿ ಹನಿ ಮಳೆಯ ನಡುವೆಯೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು . ಸ್ತ್ರೀವೇಶ ಧರಿಸಿ ರಂಗಕ್ಕೆ ಪ್ರವೇಶಿಸುವ ಮಂಟಪರ ಭಾವಭಂಗಿ , ನೃತ್ಯದಲ್ಲಿ ಅವರ ನಯ , ಕಣ್ಣಿನ ಓರೆನೋಟ,ಸ್ತ್ರೀಯ ಪರಕಾಯ ಪ್ರವೇಶ ಮಾಡಿದಂತಹ ಅನುಭವ ನೀಡುತ್ತಿತ್ತು . ಸುಮಾರು ಒಂದೂಕಾಲು ಘಂಟೆ ನಡೆದ ಈ ಪ್ರಸಂಗದನಂತರ ಪ್ರಾರಂಭವಾದದ್ದು ಮಂಥರೆಯ ದುರ್ಮಂತ್ರ .
ಮಂಥರೆಯ ಪಾತ್ರವಹಿಸಿದ್ದ ಚಪ್ಪರದಮನೆ ಶ್ರೀಧರ್ ಹೆಗಡೆ . ಗೂನು ಬೆನ್ನಿನ ಸೊಟ್ಟ ಮೂತಿಯ ಮುದುಕಿಯ ವೇಷದಲ್ಲಿ ಪ್ರವೇಶಿಸಿ ತಮ್ಮ ನೃತ್ಯದಿಂದ ಎಲ್ಲರನ್ನು ನಗಿಸಿದರು . ಮುದುಕಿಯ ಪಾತ್ರಕ್ಕೆ ಈ ನೃತ್ಯ ಕೊಂಚ ಅಸಮಂಜವೆನಿಸಿದರೂ , ಮನರಂಜನೆಯೇ ಮುಖ್ಯವಾದ ಜಾನಪದ ಕಲೆಯಾದ ಯಕ್ಷಗಾನದಲ್ಲಿ ತಾರ್ಕಿಕ ಪ್ರಶ್ನೆಗಳು ಸಾಧುವಲ್ಲ . ಕೈಕೇಯಿಯ ಪಾತ್ರದಲ್ಲೂ ಮಂಟಪರು ಉತ್ತಮ ಅಭಿನಯ ನೀಡಿದರು . ತನ್ನ ಪಾತ್ರಕ್ಕೆ ತಕ್ಕಂತ ಭಾವಭಂಗಿ , ಧ್ವನಿಯಲ್ಲಿನ ಬದಲಾವಣೆಗಳಲ್ಲಿ ಮಂಥರೆಯ ಪಾತ್ರ ಅದ್ಭುವಾಗಿತ್ತು . ಹೆಗಡೆಯವರು ಕೈಕೇಯಿ ಗೆ ಸಮನಾಗಿ ಕೆಲವೊಮ್ಮೆ , ಕೈಕೆಯಿಯನ್ನೂ ಮೀರಿಸುವಂತ ಪ್ರೌಡಿಮೆ ತೋರಿದರು . ಭಾಗವತಿಕೆಯವರು ಭೈರವಿ,ತೋಡಿ , ಕಾಪಿ ಇಂತಹ ಶಾಸ್ತ್ರೀಯ ರಾಗಗಳನ್ನು ಅಳವಡಿಸಿ ಸುಶ್ರಾವ್ಯವಾಗಿ ಹಾಡಿದ ಪದ್ಯಗಳು ಕಲೆಗಟ್ಟಿದವು . ಮೃದಂಗ ಹಾಗು ಚಂಡೆ ಒಳ್ಳೆಯ ಲಯ ಸಹಕಾರ ನೀಡಿದವು . ಸಾಧಾರಣವಾಗಿ ಕುಣಿತ ಹಾಗು ಅಬ್ಬರದ ಮಾತುಗಳಿಂದ ತುಂಬಿರುವ ಯಕ್ಷಗಾನವನ್ನು ಮೃದುಗೊಳಿಸಿ ಪ್ರಸ್ತುತ ಪರಿಸ್ತಿತಿಗೆ ಹೊಂದಿಕೆಯಾಗುವಂತೆ ಕಡಿಮೆ ಸಮಯದಲ್ಲಿ , ಕಳೆಯ ಯಾವ ಅಂಗಕ್ಕೂ ದೋಷಬಾರದಂತೆ ಮಂಟಪರ ಪ್ರಯತ್ನ ಶ್ಲಾಘನೀಯ . ಅದನ್ನು ನಿರ್ದೇಶಿಸಿದ ಶತಾವಧಾನಿ ಗಣೇಶ್ ರ ಸಹಾಯ ಹಾಗು ಮಾರ್ಗದರ್ಶನ ಸ್ತುತ್ಯರ್ಹವಾದುದು . ಇಂತಹ ಕಲಾ ಪ್ರಕಾರವು ಹೆಚ್ಚು ಹೆಚ್ಚು ಜನರನ್ನು ತಲುಪಿ ಜನಮನ್ನಣೆ ಗಳಿಸುವ ಅಗತ್ಯ ಇಂದು ಕಾಣುತ್ತಿದೆ .

ಶಶಾಂಕ್ .. .

Thursday, April 8, 2010

ಕೆ ಎಸ್ ಗೋಪಾಲಕೃಷ್ಣ - ನಾದೋಪಾಸನೆಯ ತುರೀಯಾವಸ್ಥೆ


ಇವತ್ತು ನನ್ನ ಜನ್ಮ ಸಾಫಲ್ಯ ಕಂಡ ದಿನ ಅಂದ್ರೆ ಅತಿಶಯೋಕ್ತಿಯಲ್ಲ. ವೇಣು ಮಾಂತ್ರಿಕ ಗೋಪಾಲಕೃಷ್ಣ ಅವರ ಕಚೇರಿ ಕೇಳಬೇಕೆಂಬ ಉತ್ಕಟವಾದ ಆಸೆ ಅವರ ಭೈರವಿ ಬಾಲಗೋಪಾಲ,ಮೋಹನ ನನ್ನುಪಾಲಿಮ್ಪ, ರಂಜನಿ ಮಾಲಾ ಇವೆಲ್ಲ ಕೇಳಿದಾಗಿಂದ ಇತ್ತು.ಇವತ್ತು ನನ್ನ ಆಸೆ ನೆರವೇರಿತು. ನನ್ನ ಬೊಗಸೆ ಎಷ್ಟು ದೊಡ್ಡದೋ ನಾ ಕಾಣೆ ,ಆತ ಮಾತ್ರ ಮೊಗೆದು ಮೊಗೆದು ಕೊಟ್ಟರು ನಿಸ್ವಾರ್ಥದಿಂದ ,ನಿರ್ವಾಕರತೆಯಿಂದ ,ತಾಯಿಯ ಸಹಜ ಪ್ರೇಮದಂತೆ .ನಿಜವಾದ ವಾತ್ಸಲ್ಯವನ್ನು ಕಾಣದೆ ಕಂಗಾಲಾದ ಮಗುವಿನ ಹೃದಯ ವೇದನೆಯನ್ನು ಅರ್ಥ ಮಾಡಿಕೊಂಡು ದುಗುಡ ಶಮನ ಮಾಡಿದ ರೀತಿ ಅನನ್ಯ. . ಪ್ರಯತ್ನವಿಲ್ಲದೆ ಹರಿಯುವ ನಾದ ಸುಧಾರಸ , ಸುಲಭ ಅನ್ನಿಸುವ ಆದರೆ ಕೈಗೆಟುಕದ ಸ್ವರಪ್ರಸ್ತಾರ ಶೈಲಿ , ಬಿಗಿಯಾದ ತಾಳ ನಿರ್ವಹಣೆ, ಶಾಂತ ಮನೋಹರವಾದ ಮನೋಧರ್ಮ , ತನ್ನ ಶಾಂತ ನಿಶ್ಚಲ ಮನೋಭಾವದಿಂದ ಪಕವಾದ್ಯದವರನ್ನು ತನ್ನ ಮಟ್ಟಕ್ಕೆ ಏರಿಸಿ ತನ್ನಂತೆಯೇ ನಡೆಸುವ ಧೀರ ಉದಾತ್ತ ಶೈಲಿ ಅಪೂರ್ವ.

ತಮ್ಮ ಅನಂತ ಪದ್ಮನಾಭನ ವಿಗ್ರಹ ತೆಗೆದು ಮುಂದೆ ಇಟ್ಟುಕೊಂಡು ಧ್ಯಾನಸ್ಥಾಗಿ ಆತನನ್ನು ಬೇಡಿ ವಿನಮ್ರ,ಶಾಂತ ಚಿತ್ತದಿಂದ ಪ್ರಾರಂಭಿಸಿದರು .

ಮೊದಲಿಗೆ ಶ್ರೀ ರಾಗದ ಆಲಾಪನೆ. ಬೆಳಗಿನ ಜಾವದ ಮಂಗಳಕರವಾದ ವಾತಾವರಣ ಮೂಡಿದಂತ ಭಾವನೆ.ಸೂರ್ಯೋದಯ ಹಕ್ಕಿಗಳ ಚಿಲಿಪಿಲಿ ಇಂಥ ಭಾವನೆಗಳೇ ಮೂಡಿದವು ನನಗೆ.ಶ್ರೀ,ಮಣಿರಂಗು ಇಂಥ ರಾಗಗಳನ್ನ ಯಾಕೆ ಹೆಚ್ಚು ಹಾಡಲ್ವೋ ಗೊತ್ತಿಲ್ಲ ಇವತ್ತು ಇವರು ನುಡಿಸಿದ ಪುಟ್ಟ ಆಲಾಪನೆ ನನ್ನ ಮನದಲ್ಲಿದ್ದ ಕಷ್ಮಲವನ್ನು ಒಂದೇ ಸಾರಿಗೆ ತೊಳೆದು ಹಾಕಿತು ಅಂದರೆ ತಪ್ಪಾಗಲಾರದು. ದೇವಸ್ಥಾನಕ್ಕೆ ಕಾಲು ತೊಳೆದು ಒಳಗೆ ಹೋಗುತ್ತೆವಲ್ಲ ಹಾಗಾಯಿತು ಈ ಪುಟ್ಟ ಆಲಾಪನೆ! ವರ್ಣ ನಿಧಾನವಾಗಿ ನುಡಿಸಿದರು. ತುಂಬಾ ಚೆನ್ನಾಗಿತ್ತು , ಸ್ವರಕಲ್ಪನೆ ಅದ್ಭುತವಾಗಿತ್ತು. ವಿಶ್ರಾಂತಿಯಿಂದ ನುಡಿಸಿದರು. ಮ್ರಿದಂಗದ ನಾದ ಕೇಳಬೇಕೆನಿಸಿದರೆ ಹಾಗೇ ಸುಮ್ಮನೆ ಕಣ್ಣುಮುಚ್ಚಿ ಕುಳಿತು ಬಿಡುತ್ತಿದ್ದರು. ಮತ್ತೆ ಒಂದು ಅದ್ಭುತವಾದ ಸಂಚಾರ ನುಡಿಸಿ ಮುಗುಳುನಗುತ್ತಿದ್ದರು. ಅಯ್ಯೋ ಇದೇ ಅಲ್ವೇನೋ ಕಲೆ ಅಂತ ಮನಸ್ಸು ಕೇಳ್ತಿತ್ತು. ಹೌದು ಇದೇ! ಒಂದು ಕ್ಷಣವೂ ಬಿಡಬೇಡ ಎಂದು ಇನ್ನೊಂದು ಮೂಲೆಯಿಂದ ಕೂಗಿತು ಮನಸ್ಸು. ಕಲ್ಪನಸ್ವರವೂ ಸೇರಿದಂತೆ ಸುಮಾರು ೨೫ ನಿಮಿಷ ಶ್ರೀ ರಾಗ ತೆಗೆದುಕೊಂಡಿತು. ಕಚೇರಿಗೆ ಅತ್ಯಂತ ಶುಭಾಸ್ಕರವಾದ ಆರಂಭ.

ನಂತರ ನಾಟ ರಾಗದ ಆಲಾಪನೆ. ನಂಗೆ ನಾಟ ಅಂದ್ರೆ ಅಬ್ಬರ,ಜಮಾವಣೆ ಕೊಡುವ ರಾಗ ಅಂತಷ್ಟೇ ಇತ್ತು ಭಾವನೆ. ಇವ್ರು ಅದನ್ನ ಸುಳ್ಳು ಮಾಡಿದರು . ನಿಧಾನವಾಗಿ ಬೆಳೆಸಿದರು ರಾಗ. ಸಂಜೆಯ ಹೊತ್ತು ಕೆರೆ ದಂಡೆಯ ಮೇಲೆ ಏಕಾಂಗಿಯಾಗಿ ಆತ್ಮ ಸಂತೋಷಕ್ಕೆ ನುಡಿಸುವ ಗೋಪಾಲನಂತೆ ಕಂಡು ಬಂದಿತು ನಂಗೆ ಅವರ ಶೈಲಿ. ಕೆಲವೊಮೆ ಒಳ್ಳೇ ಸಂಚಾರ ಬಂದಾಗ ತುಟಿಯಂಚಲ್ಲೇ ಸಣ್ಣ ಕಿರುನಗೆ ಮತ್ತೆ ಅದನ್ನೇ ನುಡಿಸಿ ತೃಪ್ತಿ ಪಡುವ ರೀತಿ ಎಷ್ಟೇ ಹೊಸತನ್ನು ಕಂಡುಹಿಡಿದರೂ ಶಾಸ್ತ್ರೀಯ ಚೌಕಟ್ಟನ್ನು ಮೀರದ ಶಿಸ್ತು ಬಹಳ ಇಷ್ಟವಾಯಿತು. ವಿವಾದಿ ಸ್ವರ ಹಿಡಿಯುವಾಗ ಹೃದಯ ಕಲಕಿದಂತಹ ಭಾವನೆ ಆಗ್ತಿತ್ತು :) ಕೃತಿ ಯಾವ್ದು ಅಂತ ಗೊತ್ತಾಗಲಿಲ್ಲ. ಸ್ವರ ಪ್ರಸ್ತಾರ ಅಮೋಘವಾಗಿತ್ತು. ಇಲ್ಲಿ ಹೆಚ್ಚು ಮುಕ್ತಾಯಿಗಳಿಗೆ ಗಮನ ಕೊಟ್ಟರು. ಲಯದ ಮೇಲೆ ಒಳ್ಳೇ ಹಿಡಿತ. ಮ್ರಿದಂಗದ ನಡೆಗಳನ್ನ ನುಡಿಸುವಾಗ ಯಾವುದೇ ಆತುರವಿಲ್ಲದೆ ಸುಶ್ರಾವ್ಯವಾಗಿಯೇ ನುಡಿಸಿದರು . ಅದು ವಿಶೇಷ ಅನ್ನಿಸಿತು :)ಇವೆಲ್ಲ ಸೇರಿ ಮತ್ತೊಂದರ್ಧ ಘಂಟೆ ತೆಗೆದುಕೊಂಡರು .

ಮುಂದೆ ಮಾಯಾಮಾಳವಗೌಳ .ಎಷ್ಟು ದಿನ ಆಗಿತ್ತು ಈ ರಾಗ ಕೇಳಿ . ಮಂದ್ರದ ಗಂಭೀರ ಸಂಚಾರಗಳು ಆ ರಾಗದ ಸುಕೋಮಲ ಗಂಭೀರತೆ ,ಸ್ತ್ರೀತ್ವ ಉಳ್ಳ ಪೌರುಷ ಇವೆಲ್ಲದರ ಪ್ರತ್ಯಕ್ಷ ಅನುಭವ ಆಗ್ತಾ ಹೋಯ್ತು ರಾಗ ಬಿಡಿಸ್ತ ಇದ್ದ ಹಾಗೆ. ಪರಮಯೋಗಿ ಕೃಷ್ಣ ಯೋಗ ಮುದ್ರೆ ತಳೆದು ಎಲ್ಲರನ್ನೂ ಕೊಳಲಿನ ನಾದದ ಮೂಲಕ ತನ್ನ ದಿವ್ಯಲೋಕಕ್ಕೆ ಕರೆಯುತ್ತಿರುವಂತೆ ಭಾಸವಾಯಿತು . ಸಂತೋಷಮುಗ.....ಪೂಜಿಂಚು ಅಂತ ನಿಲ್ಲಿಸಿ ಸುಮ್ಮನಾದರು. ರಿಶಭದಲ್ಲಿ ಹಾಗೆ ನ್ಯಾಸ ಮಾಡಿ ತುಳಸೀದಳ ಶುರು ಮಾಡಿದರು . ಬಹಳ ಚೆನ್ನಾಗಿತ್ತು. (ಕ್ಲೀಷೆ ) ಸರಸೀರುಹ ಎಂಬಲ್ಲಿ ಮಾಡಿದ ನೆರವಲು ಮತ್ತು ಸ್ವರಕಲ್ಪನೆ ಕೂಡ ಸೊಗಸಾಗಿ ಮೂಡಿಬಂತು.

ಮುಂದೆ ಕಾನಡ ರಾಗದ ಮುದ್ದಾದ ಆಲಾಪನೆ. ಸೂಕ್ಷಮತೆಗಳನ್ನ ಎಳೆ ಎಳೆಯಾಗಿ ಬಿಡಿಸಿಟ್ಟರು. ವಯೊಲಿನ್ ಕೂಡ ಚೆನ್ನಾಗಿತ್ತು . ನಂತರ ರಾಮ ನಾಮ...ಸುಖಿ ಎವ್ವರೂ ಅಂತ ನಿಲ್ಲಿಸಿದಾಗ ವಿಚಿತ್ರವಾದ ಆನಂದ ಉಂಟಾಯಿತು. ಹಾಗೆ ಬೇರೆ ಬೇರೆ ಥರ ನುಡಿಸಿದರು. ಕೃತಿಯನ್ನ ತುಂಬಾ ನಿಧಾನವಾಗಿ ವಿಶ್ರಾಂತಿಯಲ್ಲಿ ನುಡಿಸಿದರು , ಸ್ವರಕಲ್ಪನೆ ಮಾಡಲಿಲ್ಲ. ಈ ವೇಳೆಗಾಗಲೇ ೯ ಘಂಟೆ ಹೊಡೆದಿತ್ತು, ಅವರಿಗೆ ಅದರ ಪರಿವೆ ಇರಲಿಲ್ಲ. ಸಮಯ ನೋಡಿ ಗಾಬರಿ ಆದರೂ ಜನ ಒಬ್ಬರೂ ಕದಲಿರಲಿಲ್ಲ.

ಕಲ್ಯಾಣಿ ಮೊದಲಾಯಿತು. ಈ ನಡುವೆ ಈ ರಾಗ ದೇವತೆ ನನ್ನ ಮೇಲೆ ಕೃಪೆ ಬೀರಿದ್ದಾಳೆ ಅನ್ಸತ್ತೆ. ಅದ್ಭುತವಾದ ಕಲ್ಯಾಣಿ ಕೇಳೋ ಸುಯೋಗ ಮೇಲಿಂದ ಮೇಲೆ ಒದಗಿ ಬರ್ತಾ ಇದೇ. ಇವತ್ತು ನನ್ನ ಸ್ನೇಹಿತ ಕೈ ಎತ್ತಿ ಮುಗಿದು ಬಿಟ್ಟ. ಕಲ್ಯಾಣಿ ತೆಗೆದುಕೊಂಡಾಗ. ನಿಧಾನವಾಗಿ ಬಿಡಿಸ್ತಾ ಹೋದರು. ಈರಾಗದ ಲಾಲಿತ್ಯ ,ಮುಗ್ಧತೆ ,ಬಳುಕು,ವಯ್ಯಾರ ,ನಿತ್ಯ ಶಾಂತತೆ ಬೇರೆ ರಾಗಗಳಿಗೆ ಪ್ರಯತ್ನ ಸಿದ್ಧವಾದರೂ ಕಲ್ಯಾಣಿಗೆ ಅದು ಸ್ವಭಾವ ವಿಶೇಷ ! ಒಂದು ಗಾಢವಾದ ಶಕ್ತಿಯ ಪರಿಣಾಮದಿಂದ ಎಲ್ಲರೂ ಆನಂದದಿಂದ ಪ್ರೇಮಾಶ್ರುಗಳನ್ನು ಸುರಿಸುತ್ತಿರುವ ಹಾಗೆ ಅನ್ನಿಸಿತು ನನಗೆ . ಅಂತ ಅತ್ಮಾನಂದಕರವಾದ ಆಲಾಪನೆ. ಷಡ್ಜದ ತನಕ ಬೆಳಸಿ ಪಿಟೀಲಿಗೆ ಬಿಟ್ಟರು. ಪಾಪ ಆತನಿಗೆ ನುಡಿಸುವುದಕ್ಕಿಂತ ಕೇಳುವುದರಲ್ಲೇ ಆಸಕ್ತಿಯೇನೋ ಬೇಗ ಷಡ್ಜ ತಲುಪಿ ಅವರಿಗೆ ಬಿಟ್ಟರು. ಮುಂದೆ ಶದ್ಜದಿಂದಾಚೆ ಬೆಳಸಿ ಮಂದ್ರಕ್ಕೆ ವಾಪಸ್ ಬಂದು ಷದ್ಜದಲ್ಲೀ ಲೀನವಾದರು. ಸುಮಾರು ಅರ್ಧಗಂಟೆಯ ನಿರಂತರ ಧಾರೆ . ಏತಾವುನರ ಕೃತಿ ತೆಗೆದುಕೊಂಡರು. ಅಲ್ಲ ಖುಷಿಗೂ ಒಂದು ಪರಿಮಿತಿ ಬೇಡವೇ.(ಈ ಕೃತಿ ಅಂದ್ರೆ ಪ್ರಾಣ ನನಗೆ) ವಿಳಂಬ ಮಧ್ಯಮ ಕಾಲದಲ್ಲಿ ನುಡಿಸಿದರು . ಶಿವ ಮಾಧವ ಬ್ರಹ್ಮ ಅನ್ನುವಲ್ಲಿ ಸ್ವರಕಲ್ಪನೆ ಬಹಳ ಚೆನ್ನಾಗಿತ್ತು.

ಅವರ ಸಂಗೀತದ ವಿಶೇಷ ಅಂದರೆ ಎಲ್ಲ ರಸಗಳಿಗೂ ಶಾಂತಿಯ ಒಂದು ಹಿಮ್ಮೇಳ ಇರತ್ತೆ. ಅದರ ಶ್ರುತಿಯಲ್ಲೇ ಮತ್ತೆಲ್ಲವೂ ಉದ್ಭವಿಸೋದು ಅಂತ. ಹಾಗೇ ಇತ್ತು. ದೇಶ ಕಾಲಗಳನ್ನು ಸ್ಥಬ್ಧಗೊಳಿಸುವ ಶಕ್ತಿ ಕಲೆಗಲ್ಲದೆ ಮತ್ತಾರಿಗಿದೆ. ನನಗಂತೂ ಇದು ದಿವ್ಯಾನುಭವ.

ಒಂದು ಸಂಗೀತ ಕಚೇರಿಯಾದ ಮೇಲೆ ಎಲ್ಲರ ಕಣ್ಣಲ್ಲೂ ಒಂದು ಹೊಳಪು,ಸಂತೃಪ್ತಿಯ ಭಾವ ಉಂಟಾಗಿರಬೇಕು . ಹೃದಯ ಕರಗಬೇಕು. ಅಯ್ಯೋ ಇಷ್ಟೇ ಜೀವನ ಇದಕ್ಕಿಂತ ಸುಖ ಮತ್ತಾವುದು ಎಂಬ ಕ್ಷಣಿಕವಾದ ಬ್ರಹ್ಮಾನಂದ ಉಂಟಾಗಬೇಕು. ಅದು ರಾಗವನ್ನು ಅದರ ವೈವಿಧ್ಯವನ್ನು ತಾಳದ ಕ್ಲಿಷ್ಟತೆಯನ್ನು ಮತ್ತಿತರ ಅಂಶಗಳನ್ನು ಗಮನಿಸುವ ವಿದ್ವಾಂಸನಿಗೂ ಹಾಗೇ ಇವಾವೂ ಗೊತ್ತಿಲ್ಲದ ಸಾಮಾನ್ಯ ರಸಿಕನಿಗೂ ಹೃದಯ ಕರಗಿಸಬೇಕು ,ಮನೋ ಸಂಸ್ಕಾರ ಸಾಧಿಸಬೇಕು ಆಗ ಅದು ಉನ್ನತವಾದ ಕಲೆ. ಆತ ಶ್ರೇಷ್ಠವಾದ ಕಲಾವಿದ. ನಾದೋಪಾಸಕ . KSG ಇವುಗಳ ದರ್ಶನ ಮಾಡಿಸಿದ್ದಾರೆ , ಇಷ್ಟೆಲ್ಲಾ ನನ್ನಿಂದ ಹೇಳಿಸಿದ್ದಾರೆ, ಹಾಗೆಯೇ ಭಾಷೆಯ ಪರಿಮಿತಿಯನ್ನು ಅರ್ಥ ಮಾಡಿಸಿದ್ದಾರೆ ಆದ್ದರಿಂದ ಹೇಳಲು ಸಾಧ್ಯವಾಗದೆ ಉಳಿದು ಹೋದ ಭಾವನೆಗಳನ್ನು ಹತ್ತಿಕ್ಕಿ ಮೌನಕ್ಕೆ ಶರಣಾಗುವುದು ಒಳಿತೆಂದು ಭಾವಿಸುತ್ತಿದ್ದೇನೆ .

ಸಾಯಿ ಗಣೇಶ್ ಎನ್ ಪಿ

ಹೀಗೊಂದು ಆಶಯ !

ಮನಸ್ಸಿನ ಭಾವನೆಗಳನ್ನು ಹೊರಹಾಕಲು ಉಪಯೋಗಿಸುವ ಮಾರ್ಗಗಳು ಒಬ್ಬಬ್ಬರಲ್ಲಿ ಒಂದೊಂದು ವಿಧ . ಕವಿ ತನ್ನ ಕಾವ್ಯದಿಂದ ,ಸಂಗೀತಗಾರ ನಾದ ಮಾಧುರ್ಯದಿಂದ ,ಶಿಲ್ಪಿ ತನ್ನ ಶಿಲ್ಪದಿಂದ , ಹೊರ ಪ್ರಪಂಚದೊಂದಿಗೆ ಬೆಸೆದುಕೊಳ್ಳುತ್ತಾನೆ . ಆ ಮೂಲಕ ಶಾಶ್ವತತೆಯನ್ನು ಗಳಿಸಲು ಪ್ರಯತ್ನಿಸುತಾನೆ . ನಾವು ಕಲೆ , ಲೋಕ ವ್ಯವಹಾರ ,ರಾಜಕೀಯ ಹೀಗೆ ಹತ್ತು ಹಲವು ವಿಷಯಗಳಲ್ಲಿ ನಮ್ಮ ಭಾವನೆ , ಅಭಿಪ್ರಾಯವನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಯೋಚನೆ ಮಾಡಿ ಈ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ . ಎಲ್ಲರ ಸ್ನೇಹ , ಸಹಕಾರ , ಸಲಹೆ ನಮ್ಮೊಂದಿಗೆ ಇದೆ ಎಂದು ಭಾವಿಸಿದ್ದೇವೆ . ನಮ್ಮ ಬ್ಲಾಗ್ ನಮ್ಮೆಲ್ಲರ ಬ್ಲಾಗ್ ಆಗಲಿ ಎಂಬುದು ನಮ್ಮ ಆಶಯ .

ಶಶಾಂಕ್ -ಗಣೇಶ್