Thursday, June 24, 2010

ಪ್ರವಾಸದ ನೆನಪುಗಳು . . . . .


'ಮಳೆ' ಎಂಬ ಪ್ರಕೃತಿ ವಿಲಾಸ ನನ್ನನ್ನು ಯಾವಾಗಲೂ ಮಂತ್ರಮುಗ್ಧನನ್ನಾಗಿಸುತ್ತೆ. ವಿಳಂಬದ ಗತ್ತು ,ಮಧ್ಯಮ ಕಾಲದ ಲಾಸ್ಯ, ದುರಿತ ಕಾಲದ ರಭಸ ಎಲ್ಲವೂ ರಸ ಸೃಷ್ಟಿಯ ವಿವಿಧ ಮಜಲುಗಳಷ್ಟೇ. ರಸವು ಸದಾ ಇದ್ದುದೇ ಆದರೆ ರಸಿಕನ (ಅಂದರೆ ಮಳೆಯನ್ನೂ ನೋಡಿ ಆನಂದಿಸುವವನ) ದೃಷ್ಟಿಯಲ್ಲಿ ಅದು ರಸ 'ಸೃಷ್ಟಿ'. ಜೀವಾತ್ಮನ ದೃಷ್ಟಿಯಲ್ಲಿ ಜ್ಞಾನ ಸಾಂತ ಅನ್ನುವಂತೆ! . ಈ ಬಾರಿ ಒಳ್ಳೇ ಮಳೆಯಾಗಲಿ ಎಂದು ಶಂಕರನಲ್ಲಿ ಬಲವಾದ ಬೇಡಿಕೆ ಸಲ್ಲಿಸಿದ್ದೆ. ಆತ ಶೀಘ್ರ ವರ ಪ್ರಸಾದಿ ಎಂಬ ಬಿರುದು ಹೊತ್ತವನಲ್ಲವೇ!. ಆ ಬಿರುದನ್ನಾದರೂ ಸಾರ್ಥಕ ಗೊಳಿಸಿಕೊಳ್ಳಬೇಕೆಂದು ಸಕಾಲಕ್ಕೆ ಮೇಘ ಸೇನೆಯನ್ನು ಕಳುಹಿಸಿ ಕರಾವಳಿಯಲ್ಲಿ ಸಂಚಲನ ಉಂಟು ಮಾಡುತ್ತಿದ್ದಾನೆಂದೂ, ಹಾಗೇ ತನ್ನ ಮೇಘ ಸೈನ್ಯವನ್ನು ಮಲೆನಾಡಿಗೂ ನುಗ್ಗಿಸುತ್ತಿದ್ದಾನೆಂದೂ ಮಾಧ್ಯಮಗಳ ಮೂಲಕ ತಿಳಿದ ನಮಗೆ ಪ್ರಕೃತಿಯು ಸೃಷ್ಟಿಗಾಗಿ ಪ್ರಾಣ ಶಕ್ತಿ ತುಂಬುವ ಈ ಪರ್ವ ಕಾಲದಲ್ಲಿ ಘಟ್ಟ ಪ್ರದೇಶವನ್ನ ಒಂದೆರಡು ದಿನವಾದರೂ ನೋಡಿ ಬಂದರೆ ಎಷ್ಟು ಸೊಗಸು ಎಂದೆನಿಸಿ ಕೆಲವು ಕ್ಷೇತ್ರಗಳಿಗೆ ಭೇಟಿ ಕೊಡುವುದು ಎಂದು ತೀರ್ಮಾನಿಸಿದೆವು . ನನಗೆ ಹೆಚ್ಚು ವಸ್ತ್ರ ಇತ್ಯಾದಿ ಪರಿಕರಗಳನ್ನು ತೆಗೆದುಕೊಂಡು ಹೋಗುವುದೆಂದರೆ ಇರುಸು ಮುರುಸು . ಇದನ್ನು ಆದಷ್ಟು ಕಮ್ಮಿ ಮಾಡುವುದೇ ನನ್ನ ಮೊದಲ ಆದ್ಯತೆ. (ಮಳೆಗಾಲದಲ್ಲಿ ಕೇವಲ ಒಂದು ಕೊಡೆಯಷ್ಟೇ ತೆಗೆದುಕೊಂಡು ಹೋಗ್ತೇನೆ ಬೇರೆ ಉಡುಪುಗಳು ತೆಗೆದು ಕೊಳ್ಳಲಾರೆ ಎಂದು ಹೇಳಿ ಅಪ್ಪನಿಂದ ಮಂಗಳಾರತಿ ಎತ್ತಿಸಿಕೊಂಡಿದ್ದಾಯಿತು ಆದರೂ ನನ್ನ ಮಾತಿಗೆ ನಾನು ಬದ್ಧನಾಗಿದ್ದೇ ;)), ಭೇಟಿ ಮಾಡುವ ಸ್ಥಳಗಳಲ್ಲಿ ದೇವಸ್ಥಾನಾದಿಗಳು ಇದ್ದರೆ ಒಳ್ಳೆಯದು ಇದು ನನ್ನ ಮತ್ತೊಂದು ಅನುಕೂಲಸಿಂಧು ಆಲೋಚನೆ. ಊಟಕ್ಕೆ ತೊಂದರೆ ಇರೋದಿಲ್ಲವಲ್ಲ!. ಮಠ ಇರತ್ತೆ. ಶುದ್ಧವಾದ ಆಹಾರ ಸಿಗತ್ತೆ. ಬ್ರಾಹ್ಮಣ ಪಂಕ್ತಿ ಅನ್ನೋ ಮೀಸಲಾತಿ ಬೇರೆ ! ಊಟದಲ್ಲಾದರೂ ದೊರೆಯುವ ಈ ಮೀಸಲಾತಿ ಬಿಡುವ ಮನಸ್ಸು ನನಗೆಂದೂ ಬಂದಿಲ್ಲವಷ್ಟೆ! ಬೇರೆ ಜಾತಿಯವರ ಜೊತೆ ತಿನ್ನಬಾರದೆಂಬ ಗೊಡ್ಡು ಮಡಿವಂತಿಕೆಯೂ ಇಲ್ಲ ಹಾಗೇ ಈ ಬ್ರಾಹ್ಮಣ ಪಂಕ್ತಿಯನ್ನು ಕಿತ್ತೊಗೆಯಬೇಕೆಂಬ ಬಂಡಾಯ ಪ್ರವೃತ್ತಿಯೂ ಬಲಿತಿಲ್ಲ.;) ಹೀಗೆಲ್ಲ ಏನೇನೋ ಯೋಚಿಸಿ ಕೊಲ್ಲೂರಿಂದ ಮೊದಲು ಮಾಡಿ ಶೃಂಗೇರಿಯ ತನಕ ಒಂದಷ್ಟು ಸ್ಥಳಗಳನ್ನ ಮಳೆಯೊಂದಿಗೆ ನೋಡುವ ಎಂದು ನಿರ್ಧರಿಸಿ ಹೊರಟೆವು .

ಕೊಲ್ಲೂರು ಮೂಕಾಂಬಿಕೆಯ ಪದತಲದಲ್ಲಿ

ಬುಧವಾರ ರಾತ್ರಿ ಸ್ನೇಹಿತನೊಡನೆ ಹೊರಟೆ. ಬಸ್ ಸರಿಯಾದ ಸಮಯಕ್ಕೆ ಹೊರಟಿತು. 'ರಾಜ ಹಂಸ' ಅದರ ಹೆಸರಿಗೆ ತಕ್ಕಂತೆ ಇರಲಿಲ್ಲ. ಹಂಸದ ಆಸನಗಳು ಬೆನ್ನು ಮೂಳೆಯ ಸ್ಥಿರತೆಗೆ ಸವಾಲಾಗಿದ್ದವು. ಆಸನಗಳ ಮೇಲ್ಪದರದ ಅಂಚುಗಳಲ್ಲಿ ನಮ್ಮ ಚರ್ಮಗಳನ್ನು ಕಿತ್ತು ತಿನ್ನುವ ರಕ್ತ ಪಿಪಾಸುಗಳಿದ್ದವು ಎಂಬುದು ನಮಗೆ ಬಹಳ ತಡವಾಗಿ ತಿಳಿಯಿತು. ಪರಿಣಾಮದ ನಂತರ ಕಾರಣ ತಿಳಿದಂತೆ . ಸಾರಿಗೆ ಸಂಸ್ಥೆಯವರಿಗೆ ,ಸಾರಿಗೆ ಸಚಿವನಿಗೆ ಮನಸ್ಸಿಗೆ ತೋಚಿದವರಿಗೆಲ್ಲರಿಗೂ ಹಿಡಿ ಶಾಪ ,ಕಿಡಿ ಶಾಪ ಎಲ್ಲವೂ ಹಾಕಿದ ಮೇಲೆಯೇ ಮೈಮೇಲೆ ಎದ್ದ ದದ್ದುಗಳು ಸ್ವಲ್ಪ ಕಡಿಮೆ ಯಾಗಿದ್ದು(ಆದಂತೆ ಭಾಸವಾಗಿದ್ದು ಎಂದರೆ ಹೆಚ್ಚು ಸೂಕ್ತವೇನೋ!). ದದ್ದುಗಳ ಉರಿ ಮಾತಿನ ಮೂಲಕ ಹೋಯಿತೇನೋ ! ದಾರಿ ಉದ್ದಕ್ಕೂ ಒಂದಿನಿತೂ ಮಳೆಯಿಲ್ಲ. ಅರೇ ! ಇದೇನು ಮಾಧ್ಯಮದವರೆಲ್ಲಾ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ ಮಳೆಯ ಬಗ್ಗೆ ,ಇಲ್ಲಿ ನೋಡಿದರೆ ಅದರ ಕುರುಹೇ ಇಲ್ಲ ಅನ್ನೋ ರೀತಿ ಇತ್ತು ವಾತಾವರಣ. ನೋಡು ಮನೆಯಲ್ಲಿ ಈ ಹಾಳು ಟಿವಿ ನೋಡಿ ನಮಗೆ ಉದ್ದುದ್ದ ಸಲಹೆ ಕೊಟ್ಟರು ಇಲ್ಲಿ ಮಳೆಯೇ ಇಲ್ಲ. ಅಪ್ಪ ಫೋನಿಸಿದರೆ ಚೆನ್ನಾಗಿ ಆಡಿಕೊಳ್ಳುತ್ತೇನೆ ಅಂತಿದ್ದ ಸ್ನೇಹಿತ. ಕೊಲ್ಲೂರು ಸೇರಿದಾಗ ಬೆಳಿಗ್ಗೆ ೬ ಘಂಟೆ .ಕಾಲು ಕೆಳಕ್ಕಿಟ್ಟ ತಕ್ಷಣ ಧೋ! ಅನ್ನೋ ಮಳೆ. ನಾವು ಒಬ್ಬರ ಮುಖ ಒಬ್ಬರು ನೋಡಿಕೊಂಡು ಕಿಸಕ್ಕನೆ ನಕ್ಕು ಸರಕ್ಕನೆ ಕೊಡೆಯ ರೆಕ್ಕೆಗಳನ್ನ ಬಿಚ್ಚಿದೆವು ಮೈಕೈ ಕುಗ್ಗಿಸಿಕೊಂಡು ಕೊಡೆಯ ಆಶ್ರಯದಲ್ಲಿ ದೈತ್ಯ ದೇಹಗಳನ್ನು ,ಲಗೇಜನ್ನು ಇರಿಕಿಸಿಕೊಂಡು ಮಳೆಯ ನೀರು ಪಾಂಟಿಗೆ ಸಿಡಿಯದಿರಲೆಂದು ಅದನ್ನೂ ಸ್ವಲ್ಪ ಎತ್ತಿ ಹಿಡಿ ಎಂದು ಬಾಗನ್ನು ಹಿಡಿದಿದ್ದ ಕೈ ಒಂದಕ್ಕೆ ಆಜ್ಞಾಪಿಸುತ್ತ ಬೇಗ ಬೇಗ ನಡೆದೆವು. ಈ ಅವಸ್ಥೆಯೇ ನನಗೊಂದು ಆನಂದ ಉಂಟು ಮಾಡಿತು. , ಒಂದು ರೂಮು ಬಾಡಿಗೆಗೆ ಹಿಡಿದು ಸ್ನಾನಾದಿ ಕಾರ್ಯಗಳನ್ನು ಮುಗಿಸಿ ಮೂಕಾಂಬಿಕೆಯ ದರ್ಶನಕ್ಕೆ ಹೊರಟೆವು. ಮಳೆ ಬರುತ್ತಲೇ ಇತ್ತು. ಮೂಕಾಂಬಿಕೆಯ ದರ್ಶನವಾಯಿತು . ಈ ಕೊಲ್ಲೂರಿಗೆ ನಾನು ಸುಮಾರು ೧೨-೧೩ ಸರ್ತಿ ಬಂದಿರಬಹುದು . ಈ ಕ್ಷೇತ್ರದ ಬಗ್ಗೆ ನನಗೆ ವಿಶೇಷ ಆಕರ್ಷಣೆ. ಇಲ್ಲಿನ ಕ್ಷೇತ್ರದ ಕಥೆ, ಮೂಕಾಂಬಿಕೆಯ ಹಿನ್ನಲೆ, ಶಂಕರರಂಥ ಮಹಾನುಭಾವರು ಸಂಚರಿಸಿದ ನೆಲ ಎಂಬ ಪೂಜ್ಯ ಭಾವನೆ,ಕೊಡಚಾದ್ರಿಯ ಸೌಂದರ್ಯ ಎಲ್ಲವೂ ನನ್ನನ್ನು ಪುಳಕಿತನನ್ನಾಗಿ ಮಾಡಿಸುತ್ತೆ. ಭಗವಾನ್ ಶಂಕರರು ಮಾತನಾಡಲು ಬರದ ಮಗುವಿಂದ ಮಾತಾಡಿಸಿದ್ದು (ಆಗ ಅಶರೀರ ವಾಣಿ ಹೇಳತ್ತಲ್ಲ ದುಖವನ್ನ ಪರಿಹರಿಸಲಾಗದವನ ದಯೆ ದುಖವೇ ಉಂಟು ಮಾಡತ್ತೆ ಅಂತ ),ಏನೂ ಮಾತಾಡಲು ಬರದ,ಮೂರ್ಖನಂತೆ ವರ್ತಿಸುತ್ತಿದ್ದ ಹುಡುಗನೊಬ್ಬನು ಬ್ರಹ್ಮಜ್ಞಾನಿ ಎಂದು ಲೋಕಕ್ಕೆ ಪ್ರಚುರ ಪಡಿಸಿ ಆತನನ್ನು ಶಿಷ್ಯನನ್ನಾಗಿ ಪರಿಗ್ರಹಿಸಿದ್ದು ಆತ 'ಹಸ್ತಾಮಲಕ' ಎಂಬ ಹೆಸರಲ್ಲಿ ಪ್ರಖ್ಯಾತವಾಗಿದ್ದು ಇವೆಲ್ಲ ಕ್ಷೇತ್ರದ ಬಗ್ಗೆ ಒಂದು ಪೂಜ್ಯ ಭಾವ ಮೂಡುವುದಕ್ಕೆ ಪೂರಕವಾಗಿದ್ದವು. ಯಾವುದೇ ದೃಶ್ಯವನ್ನ ಕಂಡಾಗ ಅಥವಾ ಸ್ಥಳವನ್ನು ನೋಡಿದಾಗ ಉಂಟಾಗುವ ಭಾವನೆ ನಾವು ಆರೋಪಿಸುವಂಥದ್ದೋ ಅಥವಾ ಅದಾಗದೆ ಮೂಡುವಂಥದ್ದೋ ಎಂಬ ಚಿಂತೆಯೂ ಕಾಡಿತು .ಮೂಕಾಂಬಿಕೆಯ ದರ್ಶನ ಪಡೆದು ಶಂಕರಾಶ್ರಮದ ಕಡೆಗೆ ಹೊರಟೆವು .ಅಲ್ಲಿ ಹಿರಿಯ ಸನ್ಯಾಸಿ ಗಳೊಬ್ಬರು ಇರುತ್ತಾರೆ ಪ್ರತಿ ಬಾರಿ ಅವರ ದರ್ಶನ ಪಡೆಯುತ್ತೇನೆ ನಾನು . ಈ ಬಾರಿ ಅವರ ದರ್ಶನ ಭಾಗ್ಯ ಸಿಗಲಿಲ್ಲ. ಒಳಗಿರುವ ಶಿವ ಲಿಂಗದ ದರ್ಶನ ಮಾಡಿ ಹೊರಬಂದೆವು. ಅಲ್ಲಿಂದ ಸೌಪರ್ಣಿಕ ನದೀ ಘಟ್ಟಕ್ಕೆ ಹೋಗೋವಾಗ ಮಳೆಯೋ ಮಳೆ. ಇದೇನು ಇದರ ರೀತಿ. ಒಂದು ಶಿಸ್ತಿಲ್ಲ. ಮನಸೋ ಇಚ್ಛೆ ವರ್ತಿಸುತ್ತಲ್ಲ. ಹರಯದ ಉತ್ಸಾಹ ,ಬಿಗುಮಾನ,ಸಂಕೋಚ,ದರ್ಪ ಎಲ್ಲವೂ ವ್ಯಕ್ತವಾದಂತೆ ಅನ್ನಿಸಿತು.ಜೊತೆಗೆ ಗುಡುಗು ಸಿಡಿಲುಗಳ ಮುನ್ಸೂಚನೆಯೂ ಇಲ್ಲ! ಮೋಡಗಳ ಮಧ್ಯೆಯೇ ಇರೋದರ ಪರಿನಾಮವೇನೋ! ಹಾಗೇ ಮಳೆಯಲ್ಲಿ ನೆನೆಯುತ್ತ ನದೀ ಘಟ್ಟಕ್ಕೆ ತಲುಪಿದೆವು . ನೀರು ಈಗಷ್ಟೇ ಬರುತ್ತಿತು . ಹೊಸ ನೀರು ,ಸ್ವಲ್ಪ ಅರಿಶಿನ ಮಿಶ್ರಿತ ಮಂದವಾದ ಶ್ರೀಗಂಧವು ಒಂದು ಪಾತ್ರದಲಿ ಹರಿದರೆ ಹೇಗಿರಬಹುದೋ ಹಾಗಿತ್ತು. ಇದು ಉಕ್ಕಿ ಹರಿಯುವುದನ್ನು ನೋಡುವ ತವಕ ವ್ಯಕ್ತ ಪಡಿಸಿತು ಮನಸ್ಸು. ಆ ಭಾಗ್ಯ ಇಲ್ಲ ನಿನಗೆ ಎಂದು ಬುದ್ಧಿ ಕಟಕಿಯಾಡಿತು. ಮನಸ್ಸು ನೊಂದು ಕೊಂಡಿತು,ಬುದ್ಧಿ ಈಗ ಕಾಣುತ್ತಿರುವುದನ್ನು ನೋಡಿ ಖುಷಿಸು ಸಿಗದಕ್ಕೆ ವ್ಯಥೆ ಪಟ್ಟರೇನು ಎಂದು ವಿವೇಕ ಹೇಳಿತು. ಭಾವುಕ ಮನಸ್ಸು ಕೇಳಬೇಕಲ್ಲ! ಅದರ ಹಠ ಅದಕ್ಕೆ. ಇವೆಲ್ಲವನ್ನೂ ಗಮನಿಸುವ ಸಾಕ್ಷಿಗೆ ಇದಾವುದರ ಬಾಧೆಯೇ ಇಲ್ಲವೇನೋ! ಅಲ್ಲಿಂದ ಒಂದು ಹೋಟೆಲ್ ಗೆ ಹೋಗಿ ತಿಂಡಿ ಶಾಸ್ತ್ರವನ್ನು ಮುಗಿಸಿದೇವು . ಆಗ ಸುಲತಾ ಭಗಿನಿಯ ಅವರ ಫೋನ್. . ಅವರ ಜೊತೆ ಮಾತಾಡಿ ಬಹಳ ಖುಷಿ ಆಯಿತು. ಸರಳತೆ,ಸಜ್ಜನಿಕೆ,ವಾತ್ಸಲ್ಯ ಇವೆಲ್ಲ ಮೇಳೈಸಿದಂತಿತ್ತು ಅವರ ಧ್ವನಿ. ಮನೆಗೆ ಬನ್ನಿ ಎಂದು ಪ್ರೀತಿಯಿಂದ ಆಹ್ವಾನಿಸಿದರು ನಾವು ಬೇರೆಡೆ ಹೋಗಬೇಕೆಂಬ ನಿಶ್ಚಯ ಮಾಡಿದ್ದೆವಾದ್ದರಿಂದ ಮಂಗಳೂರು ಕಡೆಗೆ ಹೋಗಲು ಸಾಧ್ಯವಾಗಲಿಲ್ಲ.ಅವರ ಭೇಟಿ ಆಗದೆ ಇದ್ದದ್ದು ನೋವುಂಟು ಮಾಡಿತಾದರೂ ಅವರ ಜೊತೆ ಮಾತಾಡಿದ ಖುಷಿ ಅದನ್ನು ಮರೆಸಿತು .

ಬನ್ಸ್ ಪುರಾಣ ;)

ಕೊಲ್ಲೂರಿಂದ ಸಿಗಂಧೂರಿನೆಡೆಗೆ ಪ್ರಯಾಣ ಬೆಳೆಸಿದೆವು . ಕೊಲ್ಲೂರಿಂದ ಸುಮಾರು ೫೪ ಕಿ.ಮಿ ದೂರ ಎಂದು ನೆನಪು. ಮೊದಲಿಗೆ ನಿಟ್ಟೂರಿಗೆ ಬಂದು ಅಲ್ಲಿಂದ ಮತ್ತೊಂದು ಬಸ್ ಹಿಡಿದು ಸಿಗಂಧುರು ತಲುಪುವುದು . ಅಲ್ಲಿಂದ ಸಾಗರದ ಕಡೆ ಪಯಣಿಸುವುದೆಂದು ನಿಶ್ಚಯಿಸಿಕೊಂಡೆವು. ಸುಮಾರು ೧೧.೪೫ ರ ಸುಮಾರಿಗೆ ನಿಟ್ಟೂರು ತಲುಪಿದೆವು. ಇಲ್ಲಿ ಮಳೆ ಇಲ್ಲ ಪರವಾಗಿಲ್ಲ ಎಂದುಕೊಳ್ಳುತ್ತಿರುವಂತೆ ಇದೋ ಬಂದೆ ಎಂದು ಸುರಿಯಲಾರಂಭಿಸಿತು. ಸಿಗಂಧೂರಿನ ಬಸ್ ಇದ್ದದ್ದು ೧೨.೪೫ಕ್ಕೆ . ಮಳೆ ನೋಡುತ್ತಾ ಬಸ್ಸಿನ ಬರುವಿಕೆಯನ್ನು ನಿರೀಕ್ಷಿಸುತ್ತಾ ನಿಂತೆವು . ಎಷ್ಟು ಹೊತ್ತು ಮಳೆ ಸುಮ್ಮನೆ ನೋಡೋದು ಒಂದು ಕಾಫಿ ಹೀರುತ್ತಾ ಹಾಗೇ ಬಜ್ಜಿ ಮೆಲ್ಲುತ್ತ ನೋಡಿದರೆ ಮತ್ತೂ ಚಂದ ಎಂದು ಅಲ್ಲೇ ಇದ್ದ ಒಂದು ಹೋಟಲ್ ಹೊಕ್ಕಿದೆವು. ಮೊದಲಿಗೆ ಕಾಫಿ ಸೇವನೆ ಆಯಿತು .ನಂತರ ಒಂದೆರಡು ಫೋಟೋ ಕ್ಲಿಕ್ಕಿಸಿದೆವು . ಹೊತ್ತು ಹೋಗದೆ ಕದಲೀಫಲ ನಿವೇದನವೂ ಆಯಿತು .೧೨ ಗಂಟೆಗೊಂದು ಬಸ್ಗೆ ಬಂದ ಜನವೆಲ್ಲ ಹೋಟೆಲ್ಗೆ ನುಗ್ಗಿದರು. ಬನ್ಸ್ ಬನ್ಸ್ ಬನ್ಸ್ ಎಂದು ಆರ್ಡರ್ ಮಾಡಲಾರಂಭಿಸಿದರು. ಇಡ್ಲಿ ವಡೆ ಏನೇ ತಿಂದರೂ ಜೊತೆಗೊಂದು ಬನ್ ಅಲ್ಲಲ್ಲ ಬನ್ಸ್ (ಏಕವಚನ ಬಹುವಚನ ಅನ್ವಯಿಸುವುದಿಲ್ಲವೇನೋ!).ಶಶಾಂಕನಿ
ಗೆ ಕುತೂಹಲ ಇದೇನೋ ವಿಶೇಷ ಇರಬಹುದು ಎಂದು. ನಾನು ಒಮ್ಮೆ ಉಡುಪಿಯಲ್ಲಿ ತಿಂದು ಅನುಭವಿಸಿದ್ದೆ. ದೊಡ್ಡ ಹೋಟೆಲ್ ಒಂದಕ್ಕೆ ಹೋಗಿ ತಿಂಡಿ ಏನಿದೆ ಅಂದ್ರೆ ಅವಲಕ್ಕಿ ಮತ್ತು ಬನ್ಸ್ ಅಂದಿದ್ದರು. ನಂಗೆ ಆಶ್ಚರ್ಯ ನಮ್ಮಲ್ಲಿ ಪುಟ್ಟ ಹೋಟೆಲ್ ಒಂದರಲ್ಲಿ ಹತ್ತು ಹಲವು ತಿಂಡಿಗಳು ಹೇಳ್ತಾರೆ ಇಲ್ಲಿ ೪೦ ಟೇಬಲ್ಗಳಿವೆ ಇವೆ ೪ ತಿಂಡಿ ಇಲ್ವಲ್ಲಪ್ಪ ಅಂತ. ಆ ಅನುಭವ ಸ್ನೇಹಿತನಿಗೆ ಹೇಳಿದೆ. ಬೇಡ ಅದೇನೂ ಅಂಥ ಒಳ್ಳೇ ತಿನಿಸಲ್ಲ. ಹೋಟೆಲ್ನಲ್ಲಿ ಮಾಡೋದು ಅಷ್ಟೇನೂ ಹಿತವಾಗಿರೋಲ್ಲ ಅಂತ. ಜನಗಳ ಬನ್ಸ್ ಬನ್ಸ್ ಬನ್ಸ್ ಅನ್ನೋ ಬೇಡಿಕೆಯ ಕೊರಲು ಹೆಚ್ಚುತ್ತಲೇ ಹೋಯಿತು. ಸ್ನೇಹಿತನ ಕುತೂಹಲವೂ ಕೂಡ. ಪಕ್ಕದಲ್ಲಿದ್ದ ಒಬ್ಬರನ್ನು ಕೇಳಿದ. ಏನಿದು ಬನ್ಸ್ ಅಂದ್ರೆ ಸಿಹಿಯೋ ಖಾರವೋ ಅಂತ. ಆತ ಸಿಹಿ ಅಂದ. ಮತ್ತೆ ಚಟ್ನಿ ಜೊತೆ ತಿನ್ತೀರಾ! ಅಂದ . "ಹ್ಞೂ ಹಾಗೇ ಇದು.ಯಾಕೆ ಯಾವತ್ತೂ ತಿನ್ದಿಲ್ವ. ಒಮ್ಮೆ ತಿಂದು ನೋಡಿ" ಎಂಬ ಸಲಹೆ ಕೊಟ್ಟ. ಇವನು ನನ್ನ ಮುಖ ನೋಡಿದ . ಆಯಿತಪ್ಪ ತೊಗೋ ಅಂದೆ. ಅಂತೂ ಬನ್ಸ್ ಸೇವನೆಯಾಯಿತು. "ಇದನ್ನ ಎನ್ ತಿಂತಾರೆ ಜನ. ಅದೇನು ಖಾದ್ಯವೋ! ಇಲ್ಲಿ ಮಾಡಿರೋ ಒಂದೆರಡು ಬನ್ಸ ತಿಂದರೆ ನಮ್ಮ ರಸ ಗ್ರಂಥಿಗಳು ಮುಚ್ಚಿ ಹೋಗೋದರಲ್ಲಿ ಯಾವುದೇ ಅನುಮಾನ ಇಲ್ಲ ಅಂದ. ಆಮೇಲೆ ಇವರು ನಮ್ಮ ಬೆಂಗಳೂರಿನ ಹೋಟಲಿಗೆ ಬಂದು ರುಚಿ ನೋಡಿದರೆ ರುಚಿಗೇ ಮೋಕ್ಷ ಪಡೀತಾರೆ ಎಂದು ಹೆಮ್ಮೆಯ ಮಾತಾಡಿದ,ಹೊಟ್ಟೆ ತುಂಬಾ ನಕ್ಕೆವು ಅಷ್ಟರಲ್ಲಿ ಬಸ್ ಬಂತು .

ಸೌಂದರ್ಯದ ಸಂಕೀರ್ಣ ಸ್ವರೂಪ - ಸಿಗಂಧೂರು

ಸುಮಾರು ಒಂದು ವರೆ ಗಂಟೆಯ ಪ್ರಯಾಣದ ನಂತರ ಸಿಗಂಧೂರು ತಲುಪಿದೆವು. ಸಿಗಂಧೂರು ಚೌಡೇಶ್ವರಿಯ ದರ್ಶನ ಮಾಡಿ ಸಾಗರದ ಬಸ್ಸಿಗೆ ಕಾಯುತ್ತ ಕುಳಿತೆವು. ಸಾಗರದ ಬಸ್ ಶರಾವತಿಯ(ಹಿನ್ನೀರಿನ)ಮೇಲೆ ಲಾಂಚ್ ಮೂಲಕ ಹೋಗುವುದೆಂದು ತಿಳಿದಿದ್ದರಿಂದ ಈ ದಾರಿಯನ್ನು ಹಿಡಿದಿದ್ದೆವು. ಬಸ್ ನದೀ ತೀರ ತಲುಪಿಯಾದ ನಂತರ ಪ್ರಯಾಣಿಕರೆಲ್ಲರಿಗೂ ದೋಣಿ ಏರಲು ತಿಳಿಸಲಾಯಿತು. ನಾವು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನಮ್ಮಲ್ಲೇ ಅಂತರ್ಗತ ಗೊಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾ ನಿಧಾನವಾಗಿ ದೋಣಿ ಏರಿದೆವು. ತಿಳಿಯಾದ ನೀರು. ಕಪ್ಪು,ಬೂದು,ನೀಲಿ ಬಣ್ಣದ ಮೋಡಗಳ ಛಾವಣಿ, ಮಳೆ ಹನಿಗಳ ಸಿಂಚನ ಒಂದು ಊಹಾತೀತವಾದ ರಸ ಸನ್ನಿವೇಶವನ್ನು ನಿರ್ಮಾಣ ಮಾಡಿತ್ತು .ಈ ಕಲಾ ಸೃಷ್ಟಿಯಲ್ಲಿ ಸೂರ್ಯನೂ ಭಾಗವಹಿಸದಿದ್ದರೆ ಹೇಗೆ . ಆತ ತನ್ನ ಎಳೆಯ ಕಿರಣಗಳನ್ನು ಕಳುಹಿದ . ಎಳೆಯ ಬಿಸಿಲ ಕಿರಣಗಳು ನೀರ ಮೇಲೆ ಬಿದ್ದು ಅವುಗಳ ಪ್ರತಿಫಲನ ಸೌಂದರ್ಯದ ಮತ್ತೊಂದು ಮಜಲನ್ನು ತೆರೆದಿಟ್ಟಿತು. ಮೋಡದ ಹಿನ್ನಲೆಯಲ್ಲಿ ಕಾಣುತ್ತಿದ್ದ ಒಂದು ಸಣ್ಣ ಗುಡ್ಡ ಗಂಭೀರತೆಯ ಪ್ರತೀಕದಂತೆ ಕಂಡರೆ ಎಳೆಯ ಬಿಸಿಲಿಗೆ ಮೈ ಒಡ್ಡಿದ್ದ ಮತ್ತೊಂದು ಹಸಿರು ಗುಡ್ಡ ಶೃಂಗಾರದ ಪ್ರತೀಕದಂತೆ ಕಂಡಿತು . ಒಂದು ಪಾರ್ಶ್ವದಲ್ಲಿ ಮೋಡಗಳು ಮಳೆಯ ವಾತಾವರಣವನ್ನು ಸೃಷ್ಟಿಸಿದ್ದರೆ ಮತ್ತೊಂದು ಪಾರ್ಶ್ವದಲ್ಲಿ ನೀಲಿ ಮೋಡದ ಹಿನ್ನೆಲೆಯಿಂದ ರವಿಯ ಕಿರಣಗಳು ಹಸಿರನ ಮೇಲೆ ಬಿದ್ದು ಮತ್ತೊಂದು ಪಾರ್ಶ್ವದ ಮಳೆಯ ವಾತಾವರಣದ ಗಂಭೀರ ಸೌಂದರ್ಯಕ್ಕೆ ಸವಾಲು ಹಾಕಿದ್ದವು.. ಸದಾ ಮಳೆಯ ಸೊಬಗಿಗೆ ಮನಸೋಲುವ ನಾನು ಈ ಬಾರಿ ರವಿಯ ಕಿರಣಗಳು ಹೂಡಿದ ಆಟಕ್ಕೆ ಮನ ಸೋತೆ. ಪ್ರಕೃತಿಯ ಸೌಂದರ್ಯದ ಗುಟ್ಟೇನು ಎಂದು ಚಿಂತಿಸಲಾರಂಭಿಸಿತು ಮನಸ್ಸು . ಏಕೋ ಏನೋ ಬಣ್ಣಗಳೇ ನಿಜವಾದ ಸೌಂದರ್ಯ ಕೀಲಕಗಳು ಎಂದೆನಿಸಿತು . ಇಡೀ ಜಗತ್ತೇ ವರ್ಣ ರಹಿತವಾಗಿದ್ದರೆ ಹೇಗಿರುತ್ತಿತ್ತು?!. ಇಲ್ಲಿ ನಾನು ಕಂಡ ದೃಶ್ಯ ನನಗೆ ಅಷ್ಟು ಹಿತವಾಗಿ ಕಾಣಲು ಕಾರಣವೇನು?. ಮೋಡಗಳ ವಿವಿಧ ಬಣ್ಣಗಳು,ಗುಡ್ಡದ ಎಲೆ ಹಸಿರು. ಅದು ಕಪ್ಪು,ಕಂದು ಬಂಡೆಯ ಹಿನ್ನಲೆಯಲ್ಲಿ ಕಂಡ ತಿಳಿ ಹಸಿರು,ಪುಟ್ಟ ಪುಟ್ಟ ಮರಗಳು ,ಅದರ ಮೇಲೆ ಬಿದ್ದ ಹೊಂಗಿರಣಗಳು ಇವೆಲ್ಲವನ್ನೂ ಒಟ್ಟಿಗೆ ಸಮಷ್ಟಿಯಲ್ಲಿ ಕಂಡಾಗ ಅದೇನು ಅನಿರ್ವಚನೀಯ ಆನಂದ . ಈ ಬಣ್ಣಗಳು ಎಲ್ಲವೂ ಬೇರೆ ಬೇರೆಯಾಗಿ ಕಂಡಾಗ ಈ ರೀತಿಯ ಸುಖವಾಗದು, ಅದೇ ಅವೆಲ್ಲವೂ ಸೂತ್ರಕಾರನ ಆದೇಶಕ್ಕೆ ತಕ್ಕಂತೆ ನಿರ್ಧಿಷ್ಟ ರೂಪ ಪಡೆದಾಗ ಸೌಂದರ್ಯ ಸೃಷ್ಟಿಯಾಗುವುದು ,ಸಂಗೀತದ ಸ್ವರಗಳಂತೆ! ಅನಾಹತ ನಾದಗಳ ಮನೋಹರ ರೂಪವೇ ನಾದ ಸೌಂದರ್ಯದ ಪರಾಕಾಷ್ಟೆ ಹಾಗೇ ಬಣ್ಣಗಳೂ ಎಂಬಂತೆ ಭಾಸವಾಯಿತು. ಮತ್ತೆ ಇದಷ್ಟೇ ಅಲ್ಲದೆ ಮತ್ತೇನೋ ರಹಸ್ಯವೊಂದು ಮನಸ್ಸಿನ ಗ್ರಹಿಕೆಗೆ ಸಿಗುತ್ತಿಲ್ಲವೆಂಬುದೂ ಬೋಧವಾಯಿತು.. ಇಷ್ಟನ್ನಾದರೂ ಕಾಣುವ ಅಂತ:ದೃಷ್ಟಿಯನ್ನು ದಯಪಾಲಿಸಿದ ಚಿತ್ರಕಾರನಿಗೆ ನಮೋ ಅನ್ನುವಷ್ಟರಲ್ಲಿ ದಡ ಸೇರಿದೆವು ಅಲ್ಲಿಂದ ಮುಂದೆ ಪ್ರಯಾಣ ಬೆಳಸಿ ಸಾಗರ ತಲುಪಿದೆವು :)

ಸಾಗರದ ಸುತ್ತ ಮುತ್ತ :

ಸಾಗರ ತಲುಪಿದ ಮೇಲೆ ಅಲ್ಲೊಂದು ಹೋಟೆಲ್ನಲ್ಲಿ ದೋಸೆ ತಿಂದು ಆಟೋ ಹಿಡಿದು ವರದಪುರಕ್ಕೆ ಹೊರಟೆವು. ಶ್ರೀಧರ ಸ್ವಾಮಿಗಳು ತಪಸ್ಸು ಗೈದು ಪಾಮರರನ್ನು ಉದ್ಧರಿಸಿದ ಸ್ಥಳವನ್ನು ದರ್ಶಿಸುವುದೂ ಸ್ಪರ್ಶಿಸುವುದೂ ಯೋಗವಷ್ಟೇ. ಸಾಗರದಿಂದ ಸುಮಾರು ೬ ಕಿ.ಮೀ ದೂರ. ಆಶ್ರಮದ ಒಂದು ಕೊನೆಯಲ್ಲಿ ಉಳಿದುಕೊಂಡೆವು.ಸ್ವಲ್ಪ ಹೊತ್ತು ಸುಧಾರಿಸಿಕೊಂಡು ದೇಹಾಯಾಸ ಕಳೆದ ಮೇಲೆ ಸಂಜೆ ೭ ಘಂಟೆ ಸುಮಾರಿಗೆ ಸಣ್ಣ ಗುಡ್ದವೇರಿ ಆಶ್ರಮ ತಲುಪಿದೆವು . ಆಗಷ್ಟೇ ಪೂಜಾ ಕೈಂಕರ್ಯಗಳು ಆರಂಭವಾಗಿದ್ದವು .ಶ್ರೀಧರ ಸ್ವಾಮಿಗಳು ಸಮಾಧಿಸ್ತರಾದ ಜಾಗದಲ್ಲಿ ಆತ್ಮ ವಿದ್ಯಾ ಬೋಧನ ಸ್ವರೂಪವಾದ ಶಿವ ಲಿಂಗದ ಪ್ರತಿಷ್ಟಾಪನೆಯಾಗಿತ್ತು . ಇಡೀ ವಾತಾವರಣವೇ ಮನಸ್ಸನ್ನು ಧ್ಯಾನಕ್ಕೆ ಪ್ರೇರೇಪಿಸುತ್ತಿತ್ತು. ಕಣ್ಮುಚ್ಚಿ ಧ್ಯಾನಸ್ಥನಾದೆ . ಲೋಕದ ಪರಿವೆ ಇಲ್ಲದೆ ಒಂದಷ್ಟು ಹೊತ್ತು ಕೂರುವುದೇ ಅಲೌಕಿಕ ಅನುಭವ ಅನ್ನುವುದಾದರೆ ಅಂಥದ್ದರ ಅನುಭವ ನನಗಯಿತೆಂದು ಊಹಿಸಬಹುದೇನೋ. ಮನಸ್ಸು ನಿಶ್ಚಲ ಸ್ಥಿತಿ ತಲುಪಿತು. ಗುರುಕುಳದಲ್ಲಿನ ವಿದ್ಯಾರ್ಥಿಗಳು ಮಂತ್ರ ಪಾರಾಯಣ ಮಾಡಿದರು. ಕಡೆಗೆ ಗುರುವಂದನೆ ಸಲ್ಲಿಸುವ ಶ್ಲೋಕಗಳು ಆತ್ಮಾನಂದಕರವಾಗಿದ್ದವು . ಪ್ರತಿಯೊಂದು ಶ್ಲೋಕ ವಾಚಿಸಿದಾಗಲೂ ಮೈ ನವಿರೆಳುತ್ತಿತ್ತು ಅದರಲ್ಲಿನ ದಿವ್ಯ ಭಾವದಿಂದ . ಮಹಾ ಮಂಗಳಾರತಿ ಆದ ಮೇಲೆ ಆಶ್ರಮದಲ್ಲೇ ರುಚಿಕಟ್ಟಾದ ಭೋಜನ ಸವಿದೆವು. ಮಾರನೆಯ ದಿನ ಬೇಗ ಎದ್ದು ಶ್ರೀಧರ ತೀರ್ಥದಲ್ಲಿ ಸ್ನಾನ ಮಾಡಿ ನಂತರ ಗುಡ್ಡವನ್ನೇರಿ ಸಮಾಧಿಗೆ ನಮಸ್ಕರಿಸಿ ಅಲ್ಲಿಂದ ಮೇಲೆ ಭಗವಾನರು ತಪ ಗೈದ ಸ್ಥಳಕೆ ಹೋದೆವು. ಕಲ್ಲು ಮುಳ್ಳಿನ ದಾರಿ . ಧರ್ಮದ ಹಾದಿಯೂ ಇಷ್ಟೇ ಅನ್ನಿಸಿತು. ಎಡರು ತೊಡರುಗಳು ಇದ್ದದ್ದೇ. ಆದರೆ ಅವನ್ನು ಅನುಭವಿಸಬೇಕು ಆಗ ಮನಸ್ಸು ಪಾಕವಾಗುತ್ತೆ, ಕಷ್ಟಗಳಿಗೆ ನಮ್ಮನ್ನು ತೆರೆದುಕೊಳ್ಳಬೇಕು ಧೈರ್ಯದಿಂದ ಎಂದೆನಿಸಿತು. ಅಲ್ಲಿಗೆ ಪಾದ ರಕ್ಷೆಗಳನ್ನು ಹಾಕಿಕೊಂಡು ಹೋಗಬಾರದು ಎಂಬ ನಿಯಮ ಉಂಟು . ಅದೂ ಕೂಡ ಈ ದೃಷ್ಟಿಯಲ್ಲಿ ಸಮಂಜಸವಾದದ್ದು ಎಂದೆನಿಸಿತು . ಅಲ್ಲಿಂದ ಕೆಳಗಿಳಿದು ನಮ್ಮ ಸಾಮಾನು ಸರಂಜಾಮು ತೆಗೆದುಕೊಂಡು ಪುನಃ ಸಾಗರದ ಕಡೆಗೆ ಹೊರಟೆವು. ಅಲ್ಲಿ ಒಂದು ಆಟೋ ರಿಕ್ಷ ಮಾತಾಡಿ ಕೆಳದಿ ಮತ್ತು ಇಕ್ಕೇರಿ ಇವೆರಡೂ ಸ್ಥಳಗಳನ್ನ ನೋಡಿ ಬರುವುದು ಎಂದು ನಿಶ್ಚಯಿಸಿದೆವು .

ಕೆಳದಿ ಸಂಸ್ಥಾನ ಸಾಗರದಿಂದ ಸೊರಬಕ್ಕೆ ಹೋಗೋ ಹಾದಿಯಲ್ಲಿ ಸುಮಾರು ೭ ಕಿ ಮೀ ದೂರದಲ್ಲಿದೆ. ವೀರಭದ್ರ ಸ್ವಾಮಿಯ ದೇವಸ್ಥಾನವಿದೆ. ಸುಮಾರು ೧೬ನೆ ಶತಮಾನದಲ್ಲಿ ವಿಜಯನಗರದ ಅರಸನು ಶಿವಪ್ಪ ನಾಯಕ ಅನ್ನುವ ಅಧಿಕಾರಿಗೆ ಈ ಸಂಸ್ಥಾನದ ಜವಾಬ್ದಾರಿಯನ್ನ ವಹಿಸಿದಾಗ ಆತ ಕಟ್ಟಿಸಿದ ದೇವಸ್ಥಾನ ಇದು ಎಂದು ಇತಿಹಾಸ ಹೇಳುತ್ತದೆ. ಈ ದೇವಸ್ಥಾನದ ಶಿಲ್ಪವನ್ನ ನೋಡಿದರೆ ಜೈನರ ಪ್ರಭಾವವು ಹೆಚ್ಚಿತ್ತೆಂದು ಭಾಸವಾಯಿತು. ಅಥವಾ ಈ ದೇವಾಲಯ ಜೈನರದ್ದೇ ಆಗಿದ್ದು ನಂತರ ಶೈವರ ವಶಕ್ಕೆ ಬಂತಾ ಅನ್ನುವ ಕುತೂಹಲವೂ ಉಂಟಾಯಿತು. ಅಲ್ಲಿದ್ದ ಗಣಪತಿ ವಿಗ್ರಹ,ಆಡಿನ ತಲೆಯುಳ್ಳ ವಿಗ್ರಹ ಎಲ್ಲವೂ ನಮ್ಮ ಸಂಪ್ರದಾಯದ ವಿಗ್ರಹಗಳಂತೆ ಕಂಡುಬರಲಿಲ್ಲ. ದೇವಸ್ಥಾನ ಬಹಳ ಪ್ರಶಾಂತವಾಗಿತ್ತು. ಜನ ಜಂಗುಲಿಯಿಲ್ಲ. ತುಂತುರು ಮಳೆಯೂ ಹಿತಕರವಾಗಿತ್ತು. ದೇವರ ದರ್ಶನ ಮಾಡಿ ಇಕ್ಕೇರಿಯ ಕಡೆ ಹೊರಟೆವು. ಅಘೋರೆಶ್ವರನ ದೇವಸ್ಥಾನ ಹಿಂದೊಮ್ಮೆ ನೋಡಿದ್ದೆ. ಮತ್ತೆ ನೋಡಬೇಕೆಂಬ ಬಯಕೆ. ನಮ್ಮ ಜೊತೆ ಮಳೆಯಂತೂ ಇದ್ದೇ ಇತ್ತು . ದೇವಸ್ಥಾನವು ವಿಶಾಲವಾಗಿಯೂ ,ಉತ್ತಮ ಶಿಲ್ಪಿ ಕಲಾ ಕುಸುರಿಗಳನ್ನೊಳಗೊಂಡಿದೆ, ಶಿಲ್ಪದ ವಿಷಯ ನನಗೆ ಅಷ್ಟೇನೂ ಗೊತ್ತಿಲ್ಲವಾದರೂ ಇದು ನಮ್ಮ ಹೊಯ್ಸಳ ಶಿಲ್ಪಿಅಥವಾ ಚಾಲುಕ್ಯ ಇದ್ಯಾವುದನ್ನು ಹೋಲದೆ ಒಂದು ವಿಭಿನ್ನ ಶೈಲಿಯಲ್ಲಿ ಕಟ್ಟಿದ್ದಾರೆ ಎಂದೆನಿಸಿತು. ಬೃಹತ್ ಶಿವಲಿಂಗ ಒಮ್ಮೆಲೇ ಭಕ್ತಿ ಮೂಡಿಸುವಂತಿತ್ತು. ಇಲ್ಲಿ ಅರ್ಚಕರು ಪೂಜೆ ಮಾಡುತ್ತಿದ್ದ ರೀತಿ ಬಹಳ ಹಿಡಿಸಿತು. ಅಲ್ಲಿ ಭಕ್ತಾದಿಗಳು ಬರುವುದೇ ಕಮ್ಮಿ. ಅಂಥದ್ದರಲ್ಲಿ ಯಾರಾದರೂ ಬಂದರೆ ಅವರಿಗೆ ವಿಶೇಷ ಆತಿಥ್ಯ ಕೊಡುವುದು ,ಉಪಚಾರದ ಮಾತಾಡುವುದು ಇವೆಲ್ಲ ಸಾಮಾನ್ಯವಷ್ಟೇ. ಇವರು ನಮ್ಮ ಕಡೆ ತಿರುಗಿಯೂ ನೋಡದೆ ಅಭಿಷೇಕ ಮಾಡಿ ಲಿಂಗವನ್ನು ಅಚ್ಚುಕಟ್ಟಾಗಿ ಒರೆಸಿ ನಂತರ ಶುಭ್ರವಾದ ವಸ್ತ್ರಗಳನ್ನು ಉಡಿಸಿ , ನಿಧಾನವಾಗಿ ಬಿಳಿ,ಕೆಂಪು ದಾಸವಾಳ ಹೂಗಳಿಂದ ಶಂಕರನಿಗೆ ಸರಳವಾದ ಅಲಂಕಾರ ಮಾಡಿ ,ಲಕ್ಷಣವಾಗಿ ವಿಭೂತಿ ಇಟ್ಟು ನಂತರ ಮಂಗಳಾರತಿ ಮಾಡಿಯಾದ ಮೇಲೆಯೇ ನಮ್ಮ ಕಡೆ ಲಕ್ಷ್ಯ ವಹಿಸಿದ್ದು.ಹೀಗಿರಬೇಕು ಮಗ್ನತೆ ಅನ್ನಿಸಿತು. ಶಂಕರ ಪಾರ್ವತಿಯರಿಬ್ಬರಿಗೂ ನಮನಗಳನ್ನು ಸಲ್ಲಿಸಿ ಸುಮಾರು ಹೊತ್ತು ಧ್ಯಾನಿಸಿ ,ಸ್ವಲ್ಪ ಸುತ್ತಾಡಿ ಸಾಗರಕ್ಕೆ ವಾಪಸಾದೆವು.

ಶಾರದೆಯ ಕೃಪೆಯನ್ನರಸಿ...

ಸಾಗರದಿಂದ ತೀರ್ಥ ಹಳ್ಳಿಯ ಬಸ್ ಹಿಡಿದು ಅಲ್ಲಿಂದ ಶೃಂಗೇರಿ ತಲುಪಿದೆವು ಸಂಜೀಯ ಸುಮಾರಿಗೆ .ಶೃಂಗೇರಿ ನನ್ನ ಮನಸ್ಸಿಗೆ ಅಪ್ಯಾಯಮಾನವಾದ ಸ್ಥಳಗಳಲ್ಲೊಂದು . ನನ್ನ ಬಂಧು ವರ್ಗ ಇದ್ದ (ಈಗಲೂ ಇರುವ) ಮೋಹ ಒಂದು ಲೌಕಿಕ ಕಾರಣವಾದರೆ,ಅಲ್ಲಿನ ಪ್ರಕೃತಿ ಸೌಂದರ್ಯ,ತುಂಗೆಯ ತಟ,ನೃಸಿಂಹ ವನ ,ದೇವಾಲಯ ಇವೆಲ್ಲ ಭೌಗೋಳಿಕ ಆಕರ್ಷಣೆಗಳು ಇದೆಲ್ಲಕ್ಕಿಂತ ಮಿಗಿಲಾಗಿ ಋಷ್ಯ ಶೃಂಗನಂಥಹ ಮಹಾ ತಪಸ್ವಿ ಇದ್ದ ಸ್ಥಳ , ಆಚಾರ್ಯ ಶಂಕರರ ಕಾರ್ಯ ಕ್ಷೇತ್ರ ,ತಮ್ಮ ಮೊದಲ ಆಮ್ನಾಯ ಮಠವನ್ನ ಸ್ಥಾಪಿಸಿದ ಸ್ಥಳ ,ವೇದಾಂತ ತತ್ವವನ್ನು ಜಗತ್ತಿಗೆ ಸಾರಿ ಹೇಳಲು ದೀಕ್ಷೆ ವಹಿಸಿದ ಸ್ಥಳ ಅನ್ನುವ ವಿಚಾರಗಳು ನನ್ನಲ್ಲಿ ಈ ಕ್ಷೇತ್ರದ ಬಗ್ಗೆ ಪೂಜ್ಯಭಾವವನ್ನುಂಟು ಮಾಡುತ್ತದೆ. ಬಂಧುಗಳ ಮನೆಯೊಂದರಲ್ಲಿ ಇಳಿದುಕೊಳ್ಳಬೇಕು ಎಂಬ ಉದ್ದೇಶ ಇದ್ದರೂ ಕಡೆಯ ಘಳಿಗೆಯಲ್ಲಿ ಬದಲಾಯಿಸಿ ಹ್ಸಾರದ ಪೀಠದ ಅತಿಥಿ ಗೃಹದಲ್ಲೇ ಉಳಿದುಕೊಂಡೆವು . ಸ್ವಲ್ಪ ದಣಿವಾರಿಸಿಕೊಂಡು ದೇವಸ್ಥಾನಕ್ಕೆ ಹೊರಟೆವು. ಶಾರದೆ ವೀಣಾ ಪಾಣಿಯಾಗಿ ನಾದಾನುಸಂಧಾನದಲ್ಲಿ ಮುಳುಗಿಹೋಗಿದ್ದಳು. ಸ್ವಲ್ಪ ಹೊತ್ತು ಕೂತು ಧ್ಯಾನಿಸಿದೆ. ಅಲ್ಲಿಂದ ಚಂದ್ರಮೌಳೆಶ್ವರನ ದರ್ಶನ ಮಾಡಿ ತುಂಗೆಯ ನದಿ ತಟದಲ್ಲಿ ಸ್ವಲ್ಪ ಕುಳಿತು ನಂತರ ಸೇತುವೆಯ ಮಾರ್ಗದಲ್ಲಿ ನೃಸಿಂಹವನವನ್ನು ತಲುಪಿದೆವು ಗುರುಗಳ ದರ್ಶನಾರ್ಥಿಗಳಾಗಿ. ಗುರುಗಳು ಪ್ರವಾಸದ ನಿಮಿತ್ತ ಅನ್ಯ ಕ್ಷೇತ್ರಗಳಿಗೆ ಸಂಚಾರ ಹೋಗಿದ್ದರು,. ನಮಗೆ ಅವರ ದರ್ಶನ ಪ್ರಾಪ್ತವಾಗಲಿಲ್ಲ. ಅಲ್ಲಿಂದ ಸ್ವಲ್ಪ ಮುಂದೆ ನಡೆದು ವೇದ ವ್ಯಾಸ ಮಂದಿರದ ಬಳಿ ಕುಳಿತೆವು. ವೇದ ವ್ಯಾಸ ಮಂದಿರದ ಮುಂದೆ ಮೆಟ್ಟಿಲುಗಳಿವೆ ನದಿಗೆ . ಅಲ್ಲಿಂದ ಶಾರದೆಯ ದೇವಳ ಕಾಣತ್ತೆ. ಎರಡು ದೇವಳಗಳ ನಡುವೆ ತುಂಗೆ ಹರಿಯುತ್ತಾಳೆ. ಈ ದೃಶ್ಯ ನೋಡಿ ಕೃಷ್ಣ ದ್ವೈಪಾಯನರ ಹುಟ್ಟು ಅವರ ಜನ್ಮ ವೃತ್ತಾಂತ ಅವರು ಮಾಡಿದ ಮಹತಕಾರ್ಯಗಳು ಎಲ್ಲವೂ ಸ್ಮೃತಿ ಪಟಲದಲ್ಲಿ ಮೂಡಿದವು. ಹೀಗೆ ಯೋಚಿಸುತ್ತ ಕುಳಿತಿದ್ದಾಗ ವೇದ ವ್ಯಾಸರು ಅದೆಷ್ಟು ದೊಡ್ದವರಲ್ವ ಅಂದ ಸ್ನೇಹಿತ. ಆಗ ವೇದ ವಿಭಾಗ ಆಗಿದ್ದು ಅದಕ್ಕೆ ಅವರು ಪಟ್ಟಿರಬಹುದಾದಂಥ ಶ್ರಮ ಇವುಗಳ ಬಗ್ಗೆ ಸ್ವಲ್ಪ ಮಾತಾಡಿದೆವು. ನಂತರ ಮಾತು ವೇದಾಂತಕ್ಕೆ ತಿರುಗಿ ಶ್ರೀ ವಿದ್ಯೆಗೂ ವೇದಾಂತ ಪ್ರತಿ ಪಾದಿಸುವ ಅದ್ವೈತಕ್ಕು ಏನು ಸಂಬಂಧ. ಔಪಾಸನೆ ಶ್ರೀವಿದ್ಯೇಲಿ ಇದೆ. ವೇದಾಂತದಲ್ಲಿ ಔಪಾಸನೆ ಇಲ್ಲ. (ನಮಗೆ ತಿಳಿದಂತೆ) ಕೇವಲ ತಪಸ್ಸು ಅಂತ ಹೇಳ್ತಾರೆ. ಏನು ತಪಸ್ಸಂದ್ರೆ ಅದಕ್ಕೊಂದು ಮಾರ್ಗ ಕ್ರಮ ಬೇಕಲ್ಲವೋ . ಸರಿ ತಪಸ್ಸು ಕರ್ಮವಾದರೆ ಆ ಕರ್ಮವನ್ನೂ ಮೀರೋದು ಹೇಗೆ ಅಂತೆಲ್ಲ ವಿಚಾರ ಮಾಡಿದೆವು. ಕೇವಲ ಜಿಜ್ನಾಸೆಯಿಂದಲೇ ಬ್ರಹ್ಮನನ ಅರಿಯಲು ಸಾಧ್ಯವಿಲ್ಲ. ಯಾಕಂದ್ರೆ ಜಿಜ್ಞಾಸೆ ಮಾಡುವ ಬುದ್ಧಿಯೂ ಆತ್ಮನ ಉಪಾಧಿಯೇ. ಅದರಾಚಿನದ್ದು ಅಂದರೆ ಏನು ? ಅದನ್ನಂತೂ ಯಾವ ಲೌಕಿಕಾನುಭವವು ತಿಳಿಸಲಾರದು .ಅದಕ್ಕೇ ಏನೋ ಶಂಕರರು ನೇತಿ ನೇತಿ ಮಾರ್ಗ ಅನುಸರಿಸಬೇಕು ಅಂತ ಹೇಳಿದ್ದು ಅಂತೆಲ್ಲ ಮಾತಾಡಿಕೊಂಡು ಮಠದ ಕಡೆ ಹೆಜ್ಜೆ ಹಾಕಿದೆವು.ಊಟ ಮಾಡಿ ನಿದ್ರಿಸಿದ್ದಷ್ಟೇ ನೆನಪು .

ಬೆಳಿಗ್ಗೆ ಬೇಗ ಎದ್ದು ಆಗುಂಬೆಗೆ ಹೊರಟೆವು. ಘಟ್ಟವನ್ನು ಹತ್ತಿರದಿಂದ ನೋಡುವುದು ,ದೂರದಿಂದ ನೋಡುವುದು ಎರಡೂ ರೀತಿಯ ವೀಕ್ಷಣೆ ಆಗಿತ್ತಷ್ಟೆ. ಇನ್ನು ಇದೇ ಘಟ್ಟದ ಸೌಂದರ್ಯವನ್ನ ಸಮಷ್ಟಿಯಲ್ಲಿ ಗ್ರಹಿಸಬೇಕೆಂದರೆ ಒಂದು ಸಾಕ್ಷಿ ಪ್ರಜ್ಞೆಯಲ್ಲಿ ವೀಕ್ಷಿಸಬೇಕು. ಎತ್ತರದಿಂದ ನೋಡಬೇಕು! ಆಗುಂಬೆಗೆ ಹೊರಟಿದ್ದು ಈ ದೃಷ್ಟಿಯಿಂದ. ೯.೩೦ ಸುಮಾರಿಗೆ ತಲುಪಿದೇವು. ಸೂರ್ಯಾಸ್ತ ವೀಕ್ಷಿಸುವ ತಾಣಕ್ಕೆ ೨ ಕಿ ಮೀ ಎಂಬ ಫಲಕ ಕಾಣಿಸಿತು . ನಡೆದು ಹೋದೆವು. ಸುಮಾರು ೩-೪ ಕಿ ಮೀ ನಡೆದಂತೆ ಭಾಸವಾಯಿತು, ಆದರೆ ನಡೆದದ್ದೇ ಗೊತ್ತಾಗಲಿಲ್ಲ. ಸುತ್ತ ಮುಟ್ಟ ದಟ್ಟವಾದ ಕಾನನ. ಆಗೊಮ್ಮೆ ಈಗೊಮ್ಮೆ ಸಂಚರಿಸುವ ವಾಹನಗಳು ಮಿಕ್ಕಂತೆ ಬಹಳ ಪ್ರಶಾಂತ ವಾತಾವರಣ. ಸ್ವಲ್ಪವೇ ದೂರದಲ್ಲಿ ಒನಕೆ ಅಬ್ಬಿ ಜಲಪಾತ ಇದೆ ಎಂಬ ಫಲ ಕಂಡಿತು. ಅದಕ್ಕೇ ಕಾಡಿನೊಳಗೆ ಹೋಗಬೇಕು ಯಾರಾದರೂ ಸ್ಥಳೀಯರು ಜೊತೇಲಿ ಇರಬೇಕು ಎಂದು ಅಲ್ಲಿದ್ದವರೊಬ್ಬರು ಹೇಳಿದರು. ನಾವು ಅಲ್ಲಿಗೆ ಹೋಗಲಿಲ್ಲ. ಮುಂದೆ ನಡೆದು ಸೂರ್ಯಾಸ್ತ ನೋಡುವ ಸ್ಥಳಕ್ಕೆ ಬಂದೆವು. ದೀರ್ಘವಾದ ಉಸಿರೆಳೆದು ನೋಡುವಂತಾಯಿತು. ವಿಶಾಲ ಭೂ ಪ್ರದೇಶದ ಮೇಲೆ ಹರಡಿರುವ ಸಸ್ಯ ಸಂಕುಲ. ಅದೆಷ್ಟು ವಿಧಗಳಿವೆಯೋ ಅದೆಷ್ಟು ಜೀವ ವೈವಿಧ್ಯಗಳಿವೆಯೋ ಬ್ರಹ್ಮನಿಗೂ ಅದರ ಲೆಖ್ಹ ಇರಲಾರದೇನೋ ! ದೃಷ್ಟಿ ಚಾಚಿದಷ್ಟು ದೂರ ಸಸ್ಯ ಸಂಪತ್ತು .ಅಚಲವಾಗಿದ್ದರೂ ಅದೆಷ್ಟು ಕ್ರಿಯಾ ಶೀಲವಾಗಿದೆ ಅನ್ನಿಸಿತು. ಸುಮಾರು ಹೊತ್ತು ವೀಕ್ಷಿಸಿ ಬೊಮ್ಮನ ಕಲಾ ಕುಶಲದ ಬಗ್ಗೆ ಮೆಚ್ಚುಗೆಯ ಮಾತಾಡಿಕೊಂಡು ಶೃಂಗೇರಿಗೆ ವಾಪಸ್ಸಾಗಿ ಭೋಜನ ವಿಧಿ ಮುಗಿಸಿದೆವು.

ಭುಕ್ತಾಯಾಸವನ್ನ ನೀಗಿಸಿಕೊಂಡು ಋಷ್ಯ ಶೃಂಗ ಮುನಿ ತಪಸ್ಸು ಮಾಡಿದ ಸ್ಥಳವಾದ ಕಿಗ್ಗ ದ ಕಡೆಗೆ ಪ್ರಯಾಣ ಬಳಸಿದೆವು . ಕಿಗ್ಗ ಶೃಂಗೇರಿಯಿಂದ ಸುಮಾರು ೧೦ ಕಿ ಮೀ ದೂರದಲ್ಲಿದೆ. ಋಷ್ಯಶೃಂಗೇಶ್ವರನ ದರ್ಶನ ಮಾಡಿಕೊಂಡು ಒಂದು ಆಟೋ ರಿಕ್ಷ ಹಿಡಿದು ಅಲ್ಲಿಂದ ೬ ಕಿ ಮೀ ದೂರದಲ್ಲಿರುವ ಸಿರಿ ಮನೆ ಜಲಪಾತಕ್ಕೆ ಹೊರಟೆವು. ಒಳ್ಳೇ ಮಳೆ ಶುರುವಾಯಿತು. ಒಂದು ಸಣ್ಣ ತೋಟದಲ್ಲಿ ೭೦-೮೦ ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲ ಧಾರೆ. ಚೆನ್ನಾಗಿತ್ತು . ಅದನ್ನೂ ನೋಡಿ ಮತ್ತೆ ಕಿಗ್ಗಕ್ಕೆ ವಾಪಸು ಬಂದು ಶೃಂಗೇರಿಗೆ ಮರಳಿದೆವು.

ಸಂಜೆ ಯಥಾ ಪ್ರಕಾರ ನದೀ ತೀರಕ್ಕೆ ಹೋಗಿ ಕುಳಿತೆವು. ನೃಸಿಂಹವನಕ್ಕೆ ಕಾಗೆಗಳ ಗಂಡ ಬಂದಿದೆ ಎಂದು ಕಾಣುತ್ತೆ ;). ಸಾವಿರಾರು ಕಾಗೆಗಳು ಬಂದು ದಾಂಗುಡಿ ಇಟ್ಟಿದ್ದವು. ಅವನ್ನ ಓಡಿಸಲಿಕ್ಕೆ ಹರ ಸಾಹಸ ಮಾಡುತ್ತಿದ್ದರು. ಕತ್ತಲಾಯಿತು. ವರ್ಷ ಧಾರೆ ಮೊದಲಾಯಿತು . ಇಬ್ಬರೂ ಕೊಡೆ ಹಿಡಿದು ಸುಮ್ಮನೆ ನದೀ ತೀರವನ್ನ,ತಣ್ಣನೆಯ ವರ್ಷ ಧಾರೆಗೆ ಮೆಲ್ಲಗೆ ಕಂಪಿಸುವ ನದೀ ಪಾತ್ರವನ್ನ ಸುತ್ತಲಿನ ಕಪ್ಪು ವಾತಾವರಣವನ್ನ ನೋಡುತ್ತಾ ಕುಳಿತಿದ್ದಾಗ ಮನಸ್ಸು ಅಂತರ್ಮುಖವಾಗದೆ ಏನಾದೀತಿತು. ಈ ಸರ್ತಿ ನೋಡಿದ ಸ್ಥಳಗಳೆಲ್ಲವೂ 'ಪೂರ್ಣ' ಅನ್ನುವಂಥ ಅನುಭವವನ್ನೇ ನೀಡಿವೆ. ಎಂಬ ತೃಪ್ತಿ ತುಂಬಿದಂಥ ಭಾವ. ಆಗ ಅದೇಕೋ ಹೀಗೆ ಅನ್ನಿಸಿತು .ಸಂಗೀತದಲ್ಲಿ ರಾಗವನ್ನ ಗುರುತಿಸುವಾಗ ,ಸ್ವರಗಳನ್ನು ಗುರುತಿಸಿ ಕೇಳುವಾಗ ಆಗುವ ರಸಾನುಭವ ಅದಿಲ್ಲದೆ ಕೇಳುವಾಗ ಆಗುವ ಅನುಭವಕ್ಕಿಂತ ಭಿನ್ನ ಮತ್ತು ಹೆಚ್ಚು ಸೂಕ್ಷ್ಮವೂ ಹೌದು. ಹಾಗೆಯೇ ಪ್ರಕೃತಿಯಲ್ಲಿ ಏನೇ ಸುಂದರವಾದ್ದು(ಪ್ರಕೃತಿಯಲ್ಲಿ ಎಲ್ಲವೂ ಸುಂದರವೇ ನೋಡುವ ಕಣ್ಣುಗಳು ಬೇಕೇನೋ! ) ಕಂಡರೂ ಮನಸ್ಸಿಗೆ ಒಂದು ಬಗೆಯ ಹಿತವಾದ ಭಾವ ಉಂಟಾಗುತ್ತದೆ. ಒಂದು ಹೂವು,ಒಂದು ಲತೆ,ಒಂದು ಗಿಡ ಇವೆಲ್ಲ ಮುದ ನೀಡುತ್ತವೆ.ಆದರೆ ಅವುಗಳ ಬಗ್ಗೆ ತಿಳಿದಾಗ ಅವುಗಳ ಸ್ವರೂಪವನ್ನು ಅರಿತು ಅವುಗಳ ವಿಶೇಷತೆಯನ್ನು ಅರಿತು ಅಸ್ವಾದಿಸಿದಾಗ ಬೇರೆಯೇ ಮಟ್ಟದ ಖುಷಿ ಆಗಬಹುದೇನೋ. ಇಲ್ಲೂ ಸಂತೋಷದಲ್ಲಿ ವಿವಿಧ ಸ್ತರಗಳು ಇವೆಯೇನೋ ! ನಾವು ಈಗ ಸ್ಥೂಲವಾಗಿ ಸೌಂದರ್ಯದ ಮೇಲ್ಪದರವನ್ನು ಅಷ್ಟೋ ಇಷ್ಟೋ ಕಂಡು ಸಂತೋಷಿಸಿದ್ದೇವೆ ಅವುಗಳ ಅಂತ:ಸತ್ವವನ್ನು ಅರಿತರೆ ಇನ್ನೆಷ್ಟು ಸಂತೋಷ ಆಗಬಹುದು.ರಸ ಪ್ರಜ್ಞೆಯೇ ಉನ್ನತ ಮಟ್ಟಕ್ಕೆರಬಹುದೆಂಬ ಭಾವ ಮೂಡಿತು. ಹೀಗದಾಗಷ್ಟೇ ನಾವು ಪ್ರಕೃತಿಗೆ ಹತ್ತಿರವಾಗುತ್ತೇವೆ. ಸಾಧ್ಯವಾದರೆ ಈ ಜೀವಿತಾವಧಿಯಲ್ಲೇ ಪ್ರಕೃತಿಯಲ್ಲಿ ಲೀನವಾಗುವ ಯೋಗವನ್ನು ಪಡೆಯುತ್ತೇವೆ. ಎಲ್ಲದಕ್ಕೂ ಸೂಕ್ಷ್ಮವನ್ನರಸುವ ದೃಷ್ಟಿ,ಬಾಲ ಸಹಜ ಕುತೂಹಲವೇ ಸಾಧನ ಎಂದನಿಸಿ ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರೆಯಬೇಕೆಂದೆನಿಸಿತು. ಇಷ್ಟು ಯೋಚಿಸಿ ಏಳುವಷ್ಟರಲ್ಲಿ ಜಿಗಣೆಯೊಂದು 'ಅಖಂಡ ರಸಾಸ್ವಾದನೆ 'ಮಾಡಿ ಮತ್ತಿನಿಂದ ಕೆಳಗುದುರಿತ್ತು. ಮೀನಖಂಡ ಭಾಗದಲ್ಲಿ ರಕ್ತ ಸೋರಿ ಹೆಪ್ಪುಗಟ್ಟಿತ್ತು .ಇದು ತಿಳಿದಿದ್ದು ಸ್ನೇಹಿತ ಗಮನಿಸಿ ಹೇಳಿದ ಮೇಲಷ್ಟೇ ;))

ಅವಧೂತ ದರ್ಶನ !

ಮಾರನೆಯ ದಿನ ಬೆಳಿಗ್ಗೆ ಬೇಗ ಎದ್ದು ಸುಮಾರು ೭.೩೦ ಹೊತ್ತಿಗೆ ಚಿಕ್ಕಮಗಳೂರು ಬಸ್ ಹಿಡಿದೆವು. ಸುಂದರವಾದ ಕಾಫಿ ತೋಟಗಳ ಮಾರ್ಗದಲ್ಲಿ ಸಾಗಿದ ಪ್ರಯಾಣ ಮನೋಹರವಾಗಿತ್ತು. ಕೆಲವೆಡೆ ಟೀ ತೋಟಗಳು ಸಹ ಮುದ ನೀಡಿದವು. ಟೀ ತೋಟಗಳು ಮಾನವ ಕೃತ ಅನ್ನುವಂತೆ ಭಾಸವಾಯಿತು. ಅವು ಸಹಜವಾಗಿಯೇ ಕೃತಕ ಅನ್ನುವಂತೆ. ಕಾಫಿ ತೋಟಗಳು ಹೆಚ್ಚು ನೈಸರ್ಗಿಕ ಅನ್ನಿಸಿತು. ಆಯಾ ಗಿಡಗಳ ಸ್ವರೂಪ ಇದಕ್ಕೆ ಕಾರಣ ಅನ್ನಿಸುತ್ತೆ. ಕಾಫಿ ತೋಟಗಳು ನನಗೆ ಹಿಡಿಸುವುದಕ್ಕೆ ಅದರ ಮೇಲಿರೋ ವ್ಯಾಮೋಹವೂ ಕಾರಣವಿರಬಹುದೇನೋ! ಸುಮಾರು ೧೦.೧೫ ಕ್ಕೆ ಚಿಕ್ಕಮಗಳೂರು ತಲುಪಿದೆವು . ಅಲ್ಲಿಂದ ಕಡೂರಿನ ಬಸ್ ಹಿಡಿದು ಸಖರಾಯ ಪಟ್ಟಣ ತಲುಪಿದೆವು .ಇಲ್ಲಿ ಒಬ್ಬ ಅವಧೂತರ ದರ್ಶನ ಮಾಡಬೇಕೆಂಬ ಆಸೆ ನಮ್ಮದಾಗಿತ್ತು . ವೆಂಕಟಾಚಲ ಸ್ವಾಮಿಗಳು ಎಂದು ಹೆಸರು. ಸ್ವಾಮಿ ಅಂತ ಜನ ಗೌರವಿಸುತ್ತಾರೆ. ಅವರ ಬಗ್ಗೆ ನಾವು ಕೇಳಿದ್ದೆವು. ಒಮ್ಮೆ ಹಿಂದೆ ನೋಡಿದ್ದೆ ಕೂಡ. ಬಸ್ ನಿಲ್ದಾಣದಲ್ಲಿ ಇಲ್ಲಿ ಗುರುಗಳ ಮನೆ ಯಾವುದು ಎಂದು ಕೇಳಿ ವಿಳಾಸ ತಿಳಿದುಕೊಂಡು ಅವರ ಮನೆ ತಲುಪಿದೆವು . ಮನೆಯನ್ನ ಚಂದ್ರಶೇಖರ ಭಾರತಿ ಸಂಸ್ಥಾನಕ್ಕೆ ಸೇರಿದ್ದು ಎಂದು ಬರೆಸಿದ್ದಾರೆ .ಅಲ್ಲಿ ವೇದ ಪರಾಯಣ ನಡೀತಿತ್ತು. ರುದ್ರ ಪಾರಾಯಣ ಹಿತಕರವಾಗಿತ್ತು. ಅಲ್ಲಿದ್ದ ಕೆಲವರನ್ನು ವಿಚಾರಿಸಿದೆವು. ಸ್ವಾಮಿಗಳು ಇದ್ದಾರ ಅಂತ. ಒಬ್ಬರು ಇಲ್ಲ ಅವರು ಚಿಕ್ಕಮಗಳೂರಿಗೆ ಹೋಗಿದ್ದಾರೆ ಅಂದರು,ಮತ್ತೊಬ್ಬರು ಇಲ್ಲ ಶೃಂಗೇರಿಯಲ್ಲಿ ಇದ್ದಾರೆ ಅಂದರು,ಮತ್ತೊಬ್ಬರು ಅವರಿಗೆ ಹುಷಾರಿಲ್ಲ ಹಾಸಿಗೆ ಹಿಡಿದಿದ್ದಾರೆ ಈಗ ಯಾರನ್ನು ನೋಡೋಲ್ಲ ಎಂದರು. ಯಾವುದು ಸತ್ಯ ಎಂಬುದು ತಿಳಿಯಲಿಲ್ಲ . ಏನು ಮಾಡೋದು? . ಅಲ್ಲೊಂದು ಅಂಗಡಿಯಲ್ಲಿ ಬಾಳೆ ಹಣ್ಣು ತಿನ್ನುತ್ತ ಕುಳಿತೆವು . ಅಂಗಡಿಯಾಕೆ 'ಯಾಕೆ? ಗುರುಗಳು ಸಿಕ್ಕಿಲ್ವ ಬುದ್ದಿ?' ಅಂದಳು. "ಇಲ್ಲಮ್ಮ ಅವರು ಊರಲ್ಲಿ ಇಲ್ಲವಂತೆ" ಅಂದ್ವಿ ಬೇಸರದಿಂದ . ಆಕೆ ಸೀದಾ ಅವರ ಮನೆಗೆ ನುಗ್ಗಿ ನೋಡಿಕೊಂಡು ಬಂದು 'ಸ್ವಾಮಿಯೋರು ಮನೇಲೆ ಅವ್ರೆ, ಅಲ್ಲೇ ಕುಂತಿರಿ ಕರೀಲೂ ಬೋದು ,ದೂರದಿಂದ ಬಂದೀರ ಯಾಕೆ ನೋಡದಂಗೆ ವೋಯ್ತಿರ "ಅಂದಳು. ಅದು ನಿಜವೇ ಎಂದು ಅವರ ಮನೆ ಬಳಿ ಕುಳಿತೆವು. ಸ್ನೇಹಿತ ಹೇಳಿದ. ಭಕ್ತಿಯಲ್ಲಿ ನಾವು ಭೀಮನ್ನ ಆಶ್ರಯಿಸಬೇಕು. ಧೀರತೆ ಇರಬೇಕು. ಈ ಬಾರಿ ಬಂದಿದ್ದೇವೆ. ದರ್ಶನವಾದರೆ ಈಗಲೇ ಆಗ್ಬೇಕು ಮತ್ತೆ ಬರೋಲ್ಲ ಎಂದು ನಿರ್ಧರಿಸಿ ಕುಳಿತೆವು.ಒಬ್ಬರು ಮನೆಯಿಂದ ಹೊರಬಂದು ಗುರುಗಳು ಕರೀತಿದ್ದಾರೆ ಅಂದರು . ನಾವು ಧಡ ಧಡ ಎದ್ದು ಒಳಗೆ ಹೋದೆವು. ಕುರ್ಚಿಯ ಮೇಲೆ ಒಂದು ಪುಟ್ಟ ದಟ್ಟಿ ಸುತ್ತುಕೊಂಡು ಕುಳಿತಿದ್ದರು. ನೋಡಲಿಕ್ಕೆ ಭವ್ಯವಾದ ಆಕೃತಿ. ೮೫ ವರ್ಷ ವಯಸ್ಸಾಗಿದೆ ಎಂದೆನಿಸಲಿಲ್ಲ . ತಲೆತುಂಬ ಕೆದರಿದ ಬಿಳಿ ಕೂದಲು ,ಕೆದರಿದ ಗಡ್ಡ ತೇಜಸ್ವಿ ಮುಖಲಕ್ಷಣ. ಸ್ನೇಹಿತ ಹೋಗುತ್ತಲೇ ಅಡ್ಡ ಬಿದ್ದ ,ತಕ್ಷಣ "ಈ ಗಿಲೀಟು ಎಲ್ಲಾ ಬಿಟ್ಟು ಬಿಡು . ನಮಸ್ಕಾರ ಏನ್ ಮಾಡೋದು ನೀನು! ಬೀದೀಲಿ ಕಸ ಗುಡಿಸು ,ಆಗತ್ತಾ? ಅದು ಮಾಡು ಮೊದಲು. ಈ ಗಿಲೀಟೆಲ್ಲ ಬಿಟ್ಟು ಬಿಡು !"ಎಂದು ಗದರಿದರು ಅವನು ಅವಕ್ಕಾಗಿ ನಿಂತ. ನಮಸ್ಕರಿಸಲು ಸಿದ್ಧನಾಗಿದ್ದ ನಾನು ಹಿಂಜರಿದೆ. ಸೇವೆ ಮಾಡು ಎಂಬ ಆದೇಶ ಸಿಕ್ತೆಂಬ ಖುಷಿ ಆಯಿತು. ಸರಿ ಸರಿ ಏನು ಸುಮ್ನೆ ನಿಂತಿದ್ದೀರ. ಮೊದ್ಲುಊಟ ಮಾಡಿ ಹೋಗಿ ಹೋಗಿ ಎಂದು ಕಳುಹಿಸಿದರು. ನಮ್ಮ ಹಿಂದೆ ಬಂದ ಅನೇಕರಿಗೆ ಸ್ವಸ್ತಿ ವಾಚನ ನಡೀತಾ ಇತ್ತು. ಊಟ ಅದ್ಭುತವಾಗಿತ್ತು. ಪಾಯಸ,ಸಾರು,ಮಜ್ಜಿಗೆ ಹುಳಿ,ಪಲ್ಯಗಳು,ಬಿಸಿ ಶಾಲ್ಯನ್ನ,ಸಕ್ಕರೆ ಹೋಳಿಗೆ ,ಹಲಸಿನ ಹಣ್ಣು .ಮಾವಿನ ಹಣ್ಣಿನ ಸೀಕರಣೆ ಇತ್ಯಾದಿ . ಊಟ ಮಾಡುವಾಗ ನಮೆಗೆಲ್ಲ ಆರತಿ ಮಾಡಿದರು. ಗುರು ಸಂಬಂಧಿ ಭಜನೆಗಳು ಶ್ರಾವ್ಯವಾಗಿ ಕೇಳುತ್ತಿದ್ದವು. ಎಂಜಲು ಎಲೆಯನ್ನೂ ಅವರೇ ಎತ್ತಿದರು ,ಕೈ ತೊಳೆಯಲಿಕ್ಕೂ ಕೂತಲ್ಲೇ ವ್ಯವಸ್ಥೆ. ಇದೇನಪ್ಪ ಸತ್ಕಾರ ಎಂದು ನಮಗೆ ಆಶ್ಚರ್ಯ. ನಂತರ ತಾಂಬೂಲ,ವಸ್ತ್ರ ಎಲ್ಲಾ ಕೊಟ್ಟರು. ಜಾತಿ ಮತ ಭೇದ ಇಲ್ಲವೇ ಇಲ್ಲ. ಎಲ್ಲರೂ ಒಂದೇ ಎಂಬ ಅದ್ವೈತ ಭಾವ. ನಾವು ಅದ್ವೈತವನ್ನ ಬಡಬಡಿಸುತ್ತಿದ್ದರೆ ಅವರು ಅದ್ವೈತವನ್ನ ಆಚರಿಸುತ್ತಿದ್ದರು. ಅವಧೂತರ ನಡಾವಳಿಗಳು ಎಷ್ಟು ವಿಚಿತ್ರ ಎಂಬುದರ ಪ್ರತ್ಯಕ್ಷ ದರ್ಶನ ವಾಯಿತು.ಅವರ ಮನಸ್ಥಿತಿಯನ್ನ (ಮನಸು ಎಂಬುದೊಂದಿದ್ದರೆ) ನಮ್ಮದರ ಜೊತೆ ತಾಳೆ ಹಾಕಿ ನೋಡಿದಾಗ ಅದು ವಿಚಿತ್ರ ಎನ್ನಿಸುವುದು ಸಹಜವಷ್ಟೇ. ಊಟಿಸಿ ಹೊರಡುವ ಮುಂಚೆ ಅವರ ದರ್ಶನ ಮಾಡಿದೆವು. ಏನು ? ಎಂದು ಪ್ರಶ್ನಾರ್ಥಕವಾಗಿ ನೋಡಿದರು ಕೇಳಲೇನು ಇಲ್ಲ ನಿಮ್ಮನ್ನ ನೋಡಲಿಕ್ಕೆ ಮಾತ್ರ ಬಂದವರು ಅನ್ನೋ ಭಾವದಿಂದ ನಮಸ್ಕರಿಸಿ ಹೊರಟೆವು .ಪ್ರಯಾಣ ನಿಜಾರ್ಥದಲ್ಲಿ 'ಪೂರ್ಣ'ವಾಯಿತು .:)

ಕಡೂರಿಗೆ ಬಂದು ಕಡೂರಿಂದ ಬೆಂಗಳೂರಿನ ಬಸ್ ಹಿಡಿದೆವು . ಅರಸೀಕೆರೆ ,ತಿಪಟೂರು ಹೀಗೆ ನಮ್ಮ ಪ್ರದೇಶಕ್ಕೆ ಹತ್ತಿರವಾದಂತೆ ಪ್ರಕೃತಿಯಿಂದ ಹೆಚ್ಚು ದೂರ ಆಗ್ತಾ ಇದೀವಿ ಅನ್ನೋ ನೋವು ಕಾಡತೊಡಗಿತು. ಅಲ್ಲಿನ ಪ್ರಶಾಂತತೆ , ಸ್ನೇಹಪರತೆ ಇಲ್ಲಿ ಕಾಣುತ್ತಿರಲಿಲ್ಲ. ಅಲ್ಲಿಯ ಬಸ್ ಗಳು ತುಂಬಿ ತುಳುಕಿದ್ದರೂ ಹೆಚ್ಚು ಮಾತಿಲ್ಲ ಆದರೆ ಬಿಗುಮಾನವೂ ಇಲ್ಲ . ಎಲ್ಲರೂ ಅಲ್ಲಿನ ಪರಿಸರದಂತೆಯೇ ಇದ್ದರು. ಇಲ್ಲಿಯೂ ಅಷ್ಟೇ ಇಲ್ಲಿಯ ಪರಿಸರದಂತೆ ಜನ ಗಿಜಿ ಬಿಜಿ ,ಗಲಾಟೆ ಮಾಡ್ತಾ ಇದ್ದರು. ಇವೆಲ್ಲವನ್ನೂ ನೋಡ್ತಾ ಮನಸ್ಸು ಮತ್ತೆ ಒಳಸರಿಯಿತು . ನಾಗರೀಕತೆ ಅನ್ನುವ ರೋಗ ಹೆಚ್ಚಿದಂತೆಲ್ಲ ನಾವು ಪ್ರಕೃತಿ ಮಾತೆಯ ಮಡಿಲಿಂದ ಜಾರಿ ಬಿದ್ದು ತಬ್ಬಲಿಗಳಾಗುತ್ತಿದ್ದೇವೆ ಅನ್ನೋ ಭಾವ ಮೂಡಿ ಮನಸ್ಸು ಮತ್ತೆ ವ್ಯಸ್ತವಾಯಿತು. ಗಲಿಬಿಲಿಗೊಂಡಿತು ,ಗೋಜಲಾಯಿತು . ಬೆಂಗಳೂರಿನ ಪರಿಸರಕ್ಕೆ ಸಂವಾದಿಯಾಗಿ :)

ಸಾಯಿ ಗಣೇಶ್ ಎನ್ ಪಿ

Friday, May 14, 2010

ವಂಶವೃಕ್ಷ ಒಂದು ಸಿಂಹಾವಲೋಕನ -೨


ಕಾದಂಬರಿಯಲ್ಲಿ ಮುಖ್ಯವಾಗಿ ಬರುವ ಪಾತ್ರಗಳು ಶ್ರೀನಿವಾಸ ಶ್ರೋತ್ರಿ , ಕಾತ್ಯಾಯಿನಿ , ಸದಾಶಿವರಾಯರು , ರಾಜಾರಾಯ , ನಾಗಲಕ್ಷ್ಮಿ , ಕರುಣರತ್ನೆ , ಪೃಥ್ವಿ , ಚೀನೀ . ಈ ಪಾತ್ರಗಳನ್ನೂ ಗಮನಿಸಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ . ಇವುಗಳಲ್ಲಿ ದುಷ್ಟರಾದ , ನೀಚರಾದ , ಕ್ಷುದ್ರರಾದ ಯಾವ ವ್ಯಕ್ತಿಯೂ ಗೋಚರಿಸುವುದಿಲ್ಲ . ಆದರೂ ಎಲ್ಲರ ಜೀವನದಲ್ಲೂ ಅನುಭವಿಸುವಂತ ತೊಳಲಾಟ ಮಾನಸಿಕ ವೇದನೆ ಸುಸ್ಪಷ್ಟವಾಗುತ್ತದೆ . ಇದು ಏಕೆ ಹೀಗೆ ಎಂಬುದಕ್ಕೆ ಯಾವ ಉತ್ತರವೂ ತಿಳಿಯುವುದಿಲ್ಲ , ಪ್ರಾಯಶಃ ಇದು ಇರುವುದು ಹೀಗೆ ಎಂದು ಒಪ್ಪಿಕೊಂಡು ಜೀವನವನ್ನು ನಡೆಸುವುದೊಂದೇ ದಾರಿಎಂದೆನಿಸುತ್ತದೆ .


ಶ್ರೀನಿವಾಸ ಶ್ರೋತ್ರಿಯರು ಸನಾತನ ಧರ್ಮವೇ ಮೂರ್ತಿವೆತ್ತಂತೆ ಮೂಡಿರುವ ಪಾತ್ರ . ಶ್ರೋತ್ರಿಯರ ಧೀಮಂತಿಕೆಯನ್ನು ಲೇಖಕರು ಕಾದಂಬರಿಯ ೨೦ ನೇ ಅಧ್ಯಾಯದಲ್ಲಿ ಕರುಣಾರತ್ನೆಯ ಮೂಲಕ ಮಾಡಿಸುತ್ತಾರೆ . ಆ ವಾಕ್ಯಗಳು ಹೀಗಿವೆ "ಭಾರತೀಯ ಪುರಾಣ , ಸಾಹಿತ್ಯ ಮೊದಲಾದವುಗಳನ್ನು ಅವಳು ಗ್ರಂಥಗಳಲ್ಲಿ ಓದಿ ವ್ಯಾಸಂಗ ಮಾಡಿದ್ದಳು . ಅವುಗಳಲ್ಲಿ ಬರುವ ಭೀಷ್ಮ , ವಸಿಷ್ಠ , ಯುಧಿಷ್ಠಿರ , ರಾಮ , ಮೊದಲಾದ ಪಾತ್ರಗಳ ಸ್ಪಷ್ಟ ಕಲ್ಪನೆ ಅವಳಿಗಿತ್ತು . ಯಾವುದಾದರು ವಿಚಿತ್ರ ಸನ್ನಿವೇಶದಲ್ಲಿ ಆ ಪಾತ್ರಗಳನ್ನಿಟ್ಟರೆ ಅವರು ಹೇಗೆ ವರ್ತಿಸುತ್ತಾರೆಂದು ಅವಳು ತಪ್ಪಿಲ್ಲದೆ ಹೇಳಿಬಿಡಬಲ್ಲವಲಾಗಿದ್ದಳು . ಈಗ ಶ್ರೋತ್ರಿಯರನ್ನು ನೋಡಿ ಆ ಪಾತ್ರ ನೆನಪಿಗೆ ಬರುತ್ತಿತ್ತು ". ಶ್ರೋತ್ರಿಯರು ಸನಾತನ ಧರ್ಮವನ್ನು ಕೇವಲ ಆಚರಿಸುತ್ತಿರಲಿಲ್ಲ ಬದಲಾಗಿ ಅದನ್ನೇ ಜೀವಿಸುತ್ತಿದ್ದರು ಎಂಬುದನ್ನು ಅಭಾರತೀಯವಾದ ಮತ್ತೊಂದು ಪಾತ್ರದಿಂದ ವ್ಯಕ್ತಪಡಿಸಿರುವುದು ಲೇಖಕರ ಹೆಚ್ಚುಗಾರಿಕೆ . ಭಾರಾತೀಯ ಸಂಸ್ಕೃತಿ ನಂಬಿರುವ ಪುರುಷಾರ್ಥ ಚತುಷ್ಟಯಗಳು- ಧರ್ಮಾರ್ಥಕಾಮಮೊಕ್ಷಗಳು , ಇವೇ ಶ್ರೋತ್ರಿಯರು ಪ್ರತಿಪಾದಿಸುವ ಶಾಶ್ವತವಾದ ಮೌಲ್ಯಗಳು . ಕಾತ್ಯಾಯಿನಿ ಮತ್ತೊಂದು ವಿವಾಹ ಮಾಡಿಕೊಳ್ಳುವುದೆಂದು ಯೋಚಿಸಿ ಆ ವಿಷಯವನ್ನು ಮಾವನವರಿಗೆ ತಿಳಿಸಲು ಸುಮಾರು ೧೬ ಪುಟಗಳಷ್ಟು ಧೀರ್ಘವಾದ ಪತ್ರ ಬರೆಯುತ್ತಾಳೆ . ಶ್ರೋತ್ರಿಯರು ಅದನ್ನು ನೋಡಿ ಯಾವ ಮಾತನ್ನು ಆಡದೆ ಸುಮ್ಮನಾಗುತ್ತಾರೆ . ನಂತರ ಕಾತ್ಯಾಯಿನಿಗೆ ತನ್ನ ಅಭಿಪ್ರಾಯ ತಪ್ಪು ಎಂಬ ಭಾವನೆ ಬಂದು , ಶ್ರೋತ್ರಿಯರ ಬಳಿ ಕ್ಷಮೆ ಯಾಚಿಸುತ್ತಾಳೆ . ಆಗ ಶ್ರೋತ್ರಿಯರು , ಇದು ಎಲ್ಲರಿಗೂ ಆಗುವಂತಹದ್ದು ಅದನ್ನ ಮರೆತುಬಿಡು , ಪತ್ರ ಹರಿದು ಹಾಕು ಎಂಬುವುದು ಮೇಲ್ನೋಟಕ್ಕೆ ಸಾಧಾರಣ ಮಾತಿನಂತೆ ಕಂಡರೂ , ಅದರ ಧೀಮಂತಿಕೆಯ ನೋಡಿದಾಗ ಅವು ವೇದಮಂತ್ರ ಸದೃಶವಾದ ಉಕ್ತಿ ಎಂದು ಗೋಚರಿಸುತ್ತದೆ . ಕಾಯಾಯಿನಿ ಮಗುವನ್ನು ಯಾಚಿಸಲು ಬಂದಾಗ , ನಿನಗೆ ಬೇರೆ ಗಂಡ ಸಿಕ್ಕಿರಬಹುದು ಆದರೆ ನನಗೆ ಬೇರೆ ಮಗ ಸಿಗಲಿಲ್ಲ, ಆದರು ನಿನ್ನ ಮಗು ಕರೆದುಕೊಂಡು ಹೊಗುವ ಅಧಿಕಾರ ನಿನಗಿದೆ ಎನ್ನುತ್ತಾರೆ . ಇದು ಅವರ ಸಂಸ್ಕಾರಕ್ಕೆ ಸಾಕ್ಷಿ . ಧರ್ಮವನ್ನು ಬಿಡದೆ ಅವರು ನಡೆಯುವ ಹಾದಿ ಎಲ್ಲರಿಗೂ ಮಾರ್ಗದರ್ಷಕವಾದದ್ದು . ತಮಗೆ ಆಸ್ತಿಯ ಮೇಲೆ ಹಕ್ಕಿಲ್ಲ ಎಂದು ತಿಳಿದಾಗ ಸರ್ವಸ್ವವನ್ನು ಸದ್ವಿನಿಯೋಗ ಮಾಡುತ್ತಾರೆ . ಮನೆಯ ಕೆಲಸದವಳಾದ ಲಕ್ಷ್ಮಿಗೂ ಆಸ್ತಿಯಲ್ಲಿ ಪಾಲು ನೀಡುತ್ತಾರೆ . ಪಿತೃ ಸ್ಥಾನದಲ್ಲಿ ನಿಂತು ಚೀನಿಯ ವಿದ್ಯಾಭ್ಯಾಸ ಹಾಗು ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ . ಆಸ್ತಿಯ ಸರಿಯಾದ ನಿರ್ವಹಣೆಯಲ್ಲಿ ಅರ್ಥ ಕಾಮಗಳನ್ನು ಪರಿಪಾಲಿಸಿ , ಆಶ್ರಮ ಧರ್ಮಕ್ಕೆ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತಾರೆ . ತಮ್ಮ ಎಲ್ಲ ಜವಾಬ್ದಾರಿಗಳನ್ನು ಪಾಲಿಸಿದ ನಂತರ ಸನ್ಯಾಸ ಪರಿಗ್ರಹಿಸಲು ಮುಂದಾಗಿ , ಮೋಕ್ಷ ಮಾರ್ಗ ಹಿಡಿಯುತ್ತಾರೆ . ಹೀಗೆ ಮೌಲ್ಯಗಳ ಮೂರ್ತ ರೂಪವಾಗಿ ಕಾದಂಬರಿಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತದೆ ಶ್ರೋತ್ರಿಯರಪಾತ್ರ .

ಕಾತ್ಯಾಯಿನಿ ಶ್ರೋತ್ರಿಯರ ಸೊಸೆ . ಆಕೆಯ ಪತಿ ಕಪಿಲೆಯ ಪ್ರವಾಹಕ್ಕೆ ಬಲಿಯಾಗಿ ಮದುವೆಯಾದ ಒಂದೆರಡು ವರ್ಷಗಳಲ್ಲೇ ವಿಧವೆಯಾದವಳು . ತನ್ನ ಪತಿಯು ಅರ್ಧಕ್ಕೆ ನಿಲ್ಲಿಸಿದ್ದ ಬಿ. ಎ . ಪರೀಕ್ಷೆಯನ್ನು ತಾನು ಮುಗಿಸಿ ತನ್ಮೂಲಕ ಆತನ ಆತ್ಮಕ್ಕೆ ಶಾಂತಿ ದೊರಕಿಸಬೇಕೆಂಬುದು ಆಕೆಯ ನಂಬಿಕೆ . ಹೀಗಾಗಿ ಮೈಸೂರಿನ ಕಾಲೇಜಿಗೆ ಸೇರುತ್ತಾಳೆ . (ಕೊನೆಯ ಭಾಗ ಮುಂದಿನ post ನಲ್ಲಿ)
ಶಶಾಂಕ್ . ಮ .ಅ

Monday, May 3, 2010

ಇಜ್ಜೋಡು ನೋಡು , ವಿಲ ವಿಲ ಒದ್ದಾಡು


ಸಿಡಿಲ ಪೊಟ್ಟಣಗಟ್ಟಿ ಸೇಕವ ಕೊಡುವರೇ ಹರನೇತ್ರ ವಹ್ನಿಯೋಲಡಬಳವ ಸುಡುಬಗೆದೆಲಾ , ಹೆಡೆತಲೆಯ ತುರಿಸುವರೆ ಹಾವಿನ ಪಡೆಯನಕಟ (ಸಿಡಿಲ ಪೊಟ್ಟಣಕಟ್ಟಿ ಶಾಕವನು ಯಾರಾದರೂ ಕೊಡುವರೇ , ಹರನೇತ್ರದ ಬೆಂಕಿಯಲ್ಲಿ ಮಾಮ್ಸವಸುಡಲಾದೀತೇ ಹಾವಿನಹೆಡೆಯಿಂದ ತಲೆಯ ತುರಿಸಿಕೊಳ್ಳಲು ಸಾಧ್ಯವೇ ) ಇವು ಯಾರು ಮಾಡಲು ಧೈರ್ಯವ ತೋರದಂತ ವಿಚಾರಗಳು . ಪ್ರಾಯಶಃ ಕುಮಾರವ್ಯಾಸ ಇಜ್ಜೋಡು ಚಲನಚಿತ್ರ ನೋಡಿದ್ದರೆ , ಇಜ್ಜೋಡನೀಕ್ಷಿಸಿ ಬೆಪ್ಪರಾಗದವರಿರ್ವರೆ ! ಎಂದು ಸೇರಿಸುತ್ತಿದ್ದನೇನೋ . ಏಕೆಂದರೆ ಎಂ .ಎಸ್. ಸತ್ಯು ನಿರ್ದೇಶನದ ಇಜ್ಜೋಡು ಚಲನಚಿತ್ರವ ವೀಕ್ಷಿಸುವವರೂ ಮಾಡುವುದು ಮೇಲೆ ತಿಳಿಸಿರುವಂತ ಮೂರ್ಖ ಕೆಲಸಗಳನ್ನು ಮಾಡಿದಂತಯೇ . ೯೦ ನಿಮಿಷದ ಸಿನಿಮಾ ಮುಗಿಯುವ ಹೊತ್ತಿಗೆ ೯೦ ಮನ್ವಂತರಗಳ ದಾಟಿ ಹೊರಬಂದಂತಹ ಅನುಭವ ನೀಡುತ್ತದೆ . ತೀರ ಕಳಪೆ ಚಿತ್ರಕಥೆ , ಮನಸ್ಸನ್ನು ಮುಟ್ಟದ ಸಂಭಾಷಣೆ , ಹೊಗಳಲು ಯೋಗ್ಯವಲ್ಲದ ಛಾಯಾಗ್ರಹರಣ , ಅನಗತ್ಯ ,ಅಸಂಬದ್ಧ , ಹಾಡು ಇದು ಚಿತ್ರದ highlights . ಫಿಲಂ ಫೇರ್ , ಪದ್ಮಶ್ರಿ ದಂತಹ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ನಿರ್ದೇಶಕ ಇಂತ ಚಿತ್ರವನ್ನೂ ನಿರ್ದೇಶಿಸಿದ್ದಾರೆ ಎಂದು ನನಗೆ ನಂಬಲೂ ಸಾಧ್ಯವಾಗುತ್ತಿಲ್ಲ . ಚಿತ್ರದಲ್ಲಿ ಅಭಿನಯಿಸಿರುವ ಪಾತ್ರಧಾರಿಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ . ಮೀರಾ ಜಾಸ್ಮಿನ್ ಳಿಗೆ ಕನ್ನಡ ಬಾರದಿದ್ದರೂ ಆಕೆಯೇ ಡಬ್ ಮಾಡಿರುವುದು ಶ್ಲಾಘನೀಯವಾದ ವಿಷಯವೇ . ತನ್ನ ಪಾತ್ರಕ್ಕೆ ಆಕೆಯಾಗಲಿ , ಅನಿರುದ್ , ರಾಮಕೃಷ್ಣ ಆಗಲಿ ಯಾವುದೇ ಮೋಸ ಮಾಡಿಲ್ಲ . ಚಿತ್ರದ ಪ್ರಾರಂಭದಲ್ಲಿ ಬರುವ "ಸಮರ" ಎಂಬ ಹಾಡಿನ ಹಿನ್ನಲೆಯ ಕುರೂಪ ನೃತ್ಯ , ಮಂಡ್ಯ ರಮೇಶರ ಪಾತ್ರದ ಮೂಢತನದ ಪ್ರದರ್ಶನದ ಅಗತ್ಯವನ್ನು ಆ "ಸತ್ಯ"ನಾರಾಯಣನೆ ಬಲ್ಲ . ಚಿತ್ರದ ಕಥೆಯು ಅಜ್ಜಂಪುರ ಸೀತಾರಾಮ ರವರ ಸಣ್ಣಕತೆಯಾದ "ನಾನು ಕೊಂದ ಹುಡುಗಿ " ಯನ್ನು ಶೇಕಡ ೮೫ ರಷ್ಟು ಹೋಲುತ್ತದೆ , ಚಿತ್ರದ ಕತೆಯು ಅದರಿಂದ ಪ್ರೇರಿತವಾಗಿದೆಯೋ ಇಲ್ಲವೋ ನನಗೆ ತಿಳಿಯದು , ಏಕೆಂದರೆ title card ನೋಡಲಾಗಲಿಲ್ಲ . ಇಷ್ಟೆಲ್ಲಾ ಕೇಳಿಯೂ ಯಾರಾದರೂ ಚಿತ್ರಮಂದಿರಕ್ಕೆ ಹೋದರೆ ಅವರು ಎಂಟೆದೆಯ ಭಂಟರೆ ಸೈ! . ಆದರೆ ಕಲಾತ್ಮಕ ಚಿತ್ರ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಕಾರಣ ಇದಕ್ಕೆ ರಾಜ್ಯ ಪ್ರಶಸ್ತಿ ಬಂದರೂ ಅನುಮಾನವಿಲ್ಲ . ಪ್ರಶಸ್ತಿ ಬಂದರು ಬರದಿದ್ದರು ನನಗೆ ಬೇಜಾರಿಲ್ಲ . But i need my ticket money back........ ಶಶಾಂಕ್ .ಮ .ಅ

Wednesday, April 28, 2010

ವಂಶವೃಕ್ಷ ಒಂದು ಸಿಂಹಾವಲೋಕನ -೧


ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವೇ ಅಲ್ಲದೆ ಭಾರತೀಯ ಸಾರಸ್ವತ ಲೋಕದಲ್ಲೇ ಅಗ್ರಗಣ್ಯರು ಜನಪ್ರಿಯರೂ ಆಗಿರುವ ಕಾದಂಬರಿಕಾರರು ಎಸ.ಎಲ್.ಭೈರಪ್ಪನವರು . ಅವರ ಅತ್ಯುತ್ತಮ ಕಾದಂಬರಿಗಳನ್ನು ಗಮನಿಸಿದಾಗ ತನ್ನದೇ ಆದ ವಿಶಿಷ್ಟ ಸ್ಥಾನ ಗಳಿಸಿರುವ ಕಾದಂಬರಿ ವಂಶವೃಕ್ಷ . ೧೯೬೫ ರಲ್ಲಿ ಪ್ರಕಟಣೆಗೊಂಡ ಇದು ೨೦೦೯ ರ ವರೆಗೂ ಸತತವಾಗಿ ಮರುಮುದ್ರಣ ಕಾಣುತ್ತಿರುವುದು , ಕಾದಂಬರಿಯ ಜನಪ್ರಿಯತೆಗೆ ಸಾಕ್ಷಿ .
ವಂಶವೃಕ್ಷದ ಬಗೆಗೆ ಗಮನಿಸುವುದಾದರೆ , ಮೊದಲಿಗೆ ಈ ಕಾದಂಬರಿಯ ಕಾಲ ದೇಶಗಳನ್ನೂ ಗಮನಿಸಬೇಕು . ಈ ಕಥೆಯು ನಡೆಯುವ ಕಾಲ ೧೯೪೦-೧೯೬೦ ರ ಹದಿನೈದು ಇಪ್ಪತ್ತು ವರ್ಷಗಳ ಅವಧಿ . ಇದರ ದೇಶವು ಬಹಳ ಸಂಕ್ಷಿಪ್ತವಾದ ಮೈಸೂರು ನಂಜನಗೂಡುಗಳ ನಡುವೆ . ಭೌಗೋಳಿಕವಾಗಿ ಕಥೆಯ ವಿಸ್ತಾರ ಬಹಳ ಕಡಿಮೆಯಾದರೂ ಭಾವನಾತ್ಮಕ ಪ್ರಪಂಚದಲ್ಲಿ ಅತಿ ಆಳವೂ ವಿಸ್ತಾರವೂ ಆಗಿದೆ . ಶ್ರೋತ್ರಿಯರಿಗೆ ಉಂಟಾಗುವ ಆತ್ಮ ಭರ್ತ್ಸನೆ , ಸಮಾಜದಲ್ಲಿ ನೆಲೆಯೂರಿರುವ ವಿಚಾರಗಳ ವಿರುದ್ಧ ಹೊರಟಾಗ ಕಾತ್ಯಾಯಿನಿಯಲ್ಲಿ ಉಂಟಾಗುವ ಒಳತೋಟಿ ಮುಂತಾದವುಗಳ ವಿವರಣೆ ಚಿತ್ರ ಸದೃಶವಾಗಿ ಕಣ್ಣಮುಂದೆ ನಡೆಯುವಂತಿವೆ. ಭೈರಪ್ಪನವರ ಇತರೆ ಕಾದಂಬರಿಯಂತೆ ಇಲ್ಲೂ ಯುಗ ಸಂಧಿ ಕಾಲದಲ್ಲಿ ಉಂಟಾಗುವ ಮೌಲ್ಯ ಸಂಘರ್ಷವನ್ನು ಚಿತ್ರಿಸಿ ಆ ಮೂಲಕ ಸತ್ಯಶೋಧನೆಯಲ್ಲಿ ಲೇಖಕರು ತೊಡಗುತ್ತಾರೆ . ಉಕ್ಕಿ ಬರುವ ಕಪಿಲೆಯ ಪ್ರವಾಹವನ್ನು ಮೌಲ್ಯ ಸಂಘರ್ಷದ ಭೌತಿಕ ಪ್ರತೀಕವಾಗಿ ಲೇಖಕರು ಉಪಯೋಗಿಸಿದ್ದಾರೆ .ಪ್ರವಾಹ ನಿಂತಮೇಲು ಅವಿಚ್ಚಿನ್ನವಾಗಿ ಸಾಗುವ ನದಿಯ ಚಲನೆಯು ಸತತವಾಗಿ ಸಾಗುವ ಧರ್ಮದ ಸ್ರೋತಕ್ಕೆ ದ್ಯೋತಕವಾಗಿದೆ. ಕಾದಂಬರಿಯಲ್ಲಿ ಮುಖ್ಯವಾಗಿ ಚರ್ಚಿತವಾಗುವ ಪ್ರಶ್ನೆ . ಒಂದು ಸಂತತಿಯ ನಿಜವಾದ ಬಾಧ್ಯಸ್ತರು ಯಾರು ಎಂಬುದು . ತಮ್ಮ ಜೀವನವನ್ನೇ ಸಂಶೋಧನೆ ಹಾಗು ಕೃತಿರಚನೆಗಾಗಿ ಮುಡುಪಾಗಿಟ್ಟ ಸದಾಶಿವರಾಯರ ಮಗ ಪ್ರುತ್ವಿಗೆ ಅವರ ಕೃತಿಗಳು ಯಾವ ಉಪಯೋಗಕ್ಕೂ ಬಾರದ ಪುಸ್ತಕಗಳಾಗುತ್ತವೆ. ಕರುಣಾರತ್ನೆ , ಲಂಕೆಗೆ ಹಿಂದಿರುಗುವಾಗ ನಿನ್ನ ತಂದೆಯ ಪುಸ್ತಕವನ್ನು ಓದು ಎಂದು ಪ್ರುತ್ವಿಗೆ ಹೇಳಿದಾಗ " ನಾನು ಸೈನ್ಸ್ ವಿದ್ಯಾರ್ಥಿ" ಎಂದು ಹೇಳಿ ಇಡೀ ಒಂದು ಪರಂಪರೆಗೆ ಬೆನ್ನು ಮಾಡುವ ರೀತಿ , ಕಾದಂಬರಿಯ ಎಲ್ಲ ಸಾರವನ್ನು ಹಿಡಿದಿಟ್ಟಿರುವ ಒಂದು ಮಾರ್ಮಿಕ ಘಟ್ಟ ಎಂದರೆ ತಪ್ಪಾಗಲಾರದು. ಅಲ್ಲಿ ಮೂಡುವ irony ಅತಿ ಉತ್ಕೃಷ್ಟವಾದ , ಮನಕಲಕುವಂತಹದ್ದು . ಆದರೆ ಭಾರತಕ್ಕೇ ಪರಕೀಯಳಾದ ಕರುಣಾರತ್ನೆ ,ರಾಯರ ಭಾರತೀಯ ಸಂಸ್ಕೃತಿಯ ಬಗೆಗಿನ ಸಂಶೋದನೆಯಲ್ಲಿ ಸಹಕರಿಸಿ , ಮೋಕ್ಷ ಪತ್ನಿಯಂತೆ ರಾಯರನ್ನು ಸೇವಿಸುವ ಬಗೆ , ಆಕೆಯನ್ನು ರಾಯರ ಪರಂಪರೆಯ ನಿಜವಾದ ಹಕ್ಕುದಾರಿಣಿಯನ್ನಾಗಿ ಮಾಡುತ್ತದೆ . ಅಂತೆಯೇ ತನ್ನ ಹುಟ್ಟಿನ ಬಗ್ಗೆ ಸತ್ಯವನ್ನರಿತ ಶ್ರೋತ್ರಿಯರಿಗೆ , ಅವರು ಅತಿ ಪಾವಿತ್ರ್ಯವೆಂದು ನಂಬಿದ್ದ ಅವರ ವಂಶಕ್ಕೆ ಅವರ ಸಂಬಂಧವೇ ಇಲ್ಲ ವೆಂದು ಅವರಿಗೆ ತಿಳಿದಾಗ , ಅವರಿಗಾಗುವ ಆಘಾತ ಎಂತದ್ದು ಎಂಬುದು ಊಹಿಸಲೂ ಅಸಾಧ್ಯವಾದುದು . ಆದರು ಅವರು ದೃತಿಗೆಡದೆ ತಮ್ಮ ಕರ್ತವ್ಯವನ್ನು ಪಾಲಿಸಿ , ನಿರ್ವಹಿಸುವ ರೀತಿ , ಸಾನತನ ಧರ್ಮದಿಂದ ಅವರಿಗೆ ಒದಗಿದ ಸಂಸ್ಕಾರಕ್ಕೆ ಸಾಕ್ಷಿ .
(ಮುಂದುವರೆಯುವುದು)
ಶಶಾಂಕ್ .ಮ.ಅ

Wednesday, April 21, 2010

ಸಂಗೀತ ರಸಾಸ್ವಾದನೆ-ಹೀಗೊಂದು ಚಿಂತನೆ

ಒಂದು ಕಲಾ ಪ್ರಕಾರದ ಸೌಂದರ್ಯವನ್ನು ಕಲೆಯ ಮಟ್ಟದಲ್ಲೇ ಆಸ್ವಾದಿಸುವುದು ಉತ್ತಮ ರಸಿಕನಾಗಬಯಸುವನ ಗಮ್ಯವಾಗಿರುತ್ತದೆ.ಕಲೆಯನ್ನು ಆಸ್ವಾದಿಸುವುದು ವಿಷಯ ಜ್ಞಾನ,ವಿಚಾರ ಶುದ್ಧಿ,ಭಾವ ಸಮೃದ್ಧಿ ಮೊದಲಾದ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಸಂಗೀತದ ಸೊಗಸನ್ನು ಆಸ್ವಾದಿಸುವ ವಿಷಯದಲ್ಲೂ ಮೇಲ್ಕಂಡ ವಿಚಾರಗಳನ್ನು ಅನ್ವಯ ಮಾಡಬಹುದು .


ಪ್ರಸ್ತುತ ಭಾರತೀಯ ಸಂಗೀತ ವಾಹಿನಿಯು ಕವಲೊಡೆದು ೨ ಮುಖ್ಯ ಹರಿವುಗಳಾಗಿರುವುದು ವೇದ್ಯವಾದ ವಿಚಾರವಷ್ಟೇ. ಮೂಲ ಸ್ವರೂಪವನ್ನು ಹೆಚ್ಚು ಮಾರ್ಪಾಡು ಮಾಡಗೊಡದೆ ಹಾಗೆಯೇ ಉಳಿಸಿಕೊಂಡು ಬಂದಿರುವ ಗರಿಮೆ ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ್ದು. ವಿವಿಧ ಸಂಗೀತ ಪ್ರಾಕಾರಗಳಿಗೆ ಹೋಲಿಸಿದರೆ ನಮ್ಮ ಸಂಗೀತದ ಸ್ವರೂಪ ಹೆಚ್ಚು ಸಂಕೀರ್ಣವಾದದ್ದು ಹಾಗೆಯೇ ಸೂಕ್ಷ್ಮವಾದದ್ದು.ನಮ್ಮ ರಾಗಗಳ ಕಲ್ಪನೆ,ತಾಳಗಳ ವೈವಿಧ್ಯತೆ ,ವಿಪುಲವಾದ ಗೇಯ ರಚನೆಗಳು ಅದರಲ್ಲಿನ ವಿಭಿನ್ನ ಪ್ರಾಕಾರಗಳು ಹೀಗೆ ಎಲ್ಲವೂ ನಿತ್ಯ ನೂತನವೂ ,ವಿಶಿಷ್ಟವೂ ಆಗಿವೆ. ನಮ್ಮ ಗಮಕದ ವಿಷಯವಂತೂ ಬಹಳ ಗಹನವಾದದ್ದು ಹಾಗೆಯೇ ಇತರ ಸಂಗೀತ ಪದ್ಧತಿಗಳಿಗಿಂತ ಸೂಕ್ಷ್ಮವಾದದ್ದು.ಇಂತಹ ಸಂಗೀತದ ಹಿರಿಮೆ ಗರಿಮೆಗಳನ್ನು ಮನಗಂಡು ಅದರ ಆಶಯಕ್ಕೆ ತಕ್ಕಂತೆ ಪ್ರಸ್ತುತಿಪಡಿಸುವದು ಮೇರು ಸಾಧನೆಯಾದರೆ ಅದನ್ನು ರಸದ ಮಟ್ಟದಲ್ಲಿ ಅನುಭವಿಸುವ ರಸಿಕ ಪ್ರಜ್ಞೆ ಪಡೆಯುವುದೂ ಸಹ ಕಷ್ಟ ಸಾಧ್ಯವೇ ಸರಿ.


ಒಬ್ಬ ರಸಿಕನಾಗಿ ನಾನು ಸಂಗೀತದಲ್ಲಿ ಅರಸುವುದು ಏನು ಎಂಬ ಪ್ರಶ್ನೆಯಿಂದ ಈ ರಸಾಸ್ವಾದನೆಯ ವಿಚಾರ ಮಂಥನ ಮೊದಲುಮಾಡುವುದು ಸೂಕ್ತವೆನಿಸುತ್ತದೆ.ಸಾಮಾನ್ಯವಾಗಿ ಸಂಗೀತದಲ್ಲಿ ನಮ್ಮನ್ನು ಆಕರ್ಷಿಸುವುದು ಶುದ್ಧ ನಾದ.ಶ್ರುತಿಯಲ್ಲೇ ಲೀನವಾಗಿ ಹೋಗುವ ನಾದ ಸೌಖ್ಯ ಯಾರಿಗೆ ಬೇಡ? ಹಾಗಾದರೆ ಕೇವಲ ನಾದ ಸೌಖ್ಯವಷ್ಟೇ ಸಂಗೀತದ ಗಮ್ಯವೇ ?ಅದನ್ನೂ ಸೇರಿದಂತೆ ಮತ್ತೇನು ಎಂದರಸಿದಾಗ ಲಯದ ನಿಗೂಢತೆ ,ಅಗಾಧತೆಯ ಅರಿವಾಗುತ್ತದೆ. ಲಯ ವಿಹೀನವಾದ ಸಂಗೀತವಿಲ್ಲವಷ್ಟೇ.ನಾದ ಲಯಗಳ ಪರಿಪಾಕವೇ ಸಂಗೀತವೇ? ಮನೋಧರ್ಮ ಪ್ರಧಾನವಾದ ,ಧಾತುವೇ ಮುಖ್ಯವಾದ ಶಾಸ್ತ್ರೀಯ ಸಂಗೀತದಲ್ಲಿ ಇದು ಬಹುಮಟ್ಟಿಗೆ ಸತ್ಯವೂ ಹೌದು. ಆದರೆ ನಮ್ಮ ಸಂಗೀತದಲ್ಲಿ ಸಾಹಿತ್ಯವೂ ಪೋಷಕವಾಗಿ ,ಕೆಲವೊಮ್ಮೆ ಸಂಗೀತದಿಂದ ಪೋಷಣೆಯನ್ನು ಪಡೆದು ತನ್ನ ಹಿರಿಮೆ ಗರಿಮೆಗಳನ್ನು ಹೆಚ್ಚಿಸಿಕೊಂಡಿದೆಯಷ್ಟೇ.ಹೀಗಾಗಿ ರಸಿಕನಾದವನಿಗೆ ನಾದ ಸೌಖ್ಯ,ಲಯ ಜ್ಞಾನ ,ಸಾಹಿತ್ಯಾರ್ಥ ಅದರಿಂದ ಹೊರಹೊಮ್ಮುವ ಭಾವದ ಅರಿವು ಇವುಗಳೆಲ್ಲವನ್ನೂ ಸಮಷ್ಟಿಯಲ್ಲಿ ಗ್ರಹಿಸುವ ಮನೋಪರಿಪಾಕ ಮುಖ್ಯವೆಂದನಿಸುತ್ತದೆ.


ಒಂದು ರಾಗಲಾಪನೆಯನ್ನು ಕೇಳುವಾಗ ಹಲವರಿಗೆ ಹಲವು ರೀತಿಯ ಅನುಭವಗಳಾಗಬಹುದು.ಒಬ್ಬೊಬ್ಬರಿಗೆ ಆಗುವ ಆನಂದ ವಿಭಿನ್ನ ರೀತಿಯದ್ದಾಗಿರಬಹುದು. ಸಾಮಾನ್ಯ ಶ್ರೋತೃ ಒಬ್ಬನಿಗೆ ಸಿಗುವ ಆನಂದ ನುರಿತ ಶ್ರೋತೃವಿಗೆ ದೊರೆಯದೆ ಹೋಗಬಹುದು.ನುರಿತ ಶ್ರೋತೃವಿಗೆ ಸಿಕ್ಕ ಆನಂದದ ಅನುಭವ ಬೇರೆಯದೇ ಆಗಿರಬಹುದು.ಸಂಗೀತದಿಂದ ಕೆಲವರಿಗೆ ಕೇವಲ ಭಾವ ವಿರೇಚನವಾದರೆ , ಕೆಲವರಿಗೆ ಅದು ಆತ್ಮೋನ್ನತಿಯಾಗಬಹುದು . ಮನಸ್ಸನ್ನು ಪರಿಶುದ್ಧಗೊಳಿಸುವ ಧ್ಯಾನವಾಗಬಹುದು. ಹೀಗಾಗಿ ರಸಾಸ್ವಾದನೆಯ ಆನಂದದಲ್ಲೂ ವಿಕಲ್ಪಗಳು ಉಂಟು ಎಂದು ತಿಳಿಯಬಹುದಷ್ಟೇ.ಈ ವಿಕಲ್ಪಗಳಿಗೆ ಕಾರಣಗಳೇನು ಎಂದರೆಸುತ್ತ ಹೋದಲ್ಲಿ ಶ್ರೋತೃವಿನ ಮನಸ್ಥಿತಿ ,ಸಂಗೀತ ಜ್ಞಾನ,ಭಾವ ಸಾಂದ್ರತೆ ಇಂತಹ ಅನೇಕ ಕಾರಣಗಳು ಗೋಚರವಾಗುತ್ತವೆ .ಉದಾ : ದು:ಖ ತಪ್ತನಾಗಿರುವ ಒಬ್ಬ ವ್ಯಕ್ತಿಗೆ ಒಮ್ಮೆ ಕೇಳಿದ ಸಂಗೀತ ಸಾಂತ್ವನದಂತಿರಬಹುದು ಅದೇ ಸಂಗೀತ ಮತ್ತೊಮ್ಮೆ ವಸ್ತುನಿಷ್ಟವಾಗಿ ಕೇಳಿದಾಗ ರುಚಿಸದೆ ಹೋಗಬಹುದು. ಹೀಗೆ ಬದಲಾಗುತ್ತಿರುವ ಮನಸ್ಥಿತಿಗೆ ತಕ್ಕಂತೆ ರಸಾಸ್ವಾದನೆಯೂ ಬದಲಾದಲ್ಲಿ ಅದು ಪಕ್ವವಾದ ಕೇಳ್ಮೆಯಲ್ಲ. ಇನ್ನು ಸಂಗೀತ ಜ್ಞಾನದ ವಿಚಾರಕ್ಕೆ ಬಂದರೆ ರಾಗಗಳ ಸೂಕ್ಷ್ಮ ವಿಚಾರಗಳು , ತಾಳ ವೈವಿಧ್ಯತೆಯ ನಿಗೂಢ ತತ್ವವನ್ನು ಅರಿತವನು ಅತಿ ವಿಸ್ತಾರವಾದ ಗಾಯನವಾದರೂ ,ಸುಮಧುರವಾಗಿದ್ದರೂ ಶಾಸ್ತ್ರೀಯ ಚೌಕಟ್ಟು ಮೀರಿದ್ದನ್ನು ಒಪ್ಪಲಾರ.ಇಷ್ಟೇ ಆದರೆ ಅದೂ ಕೂಡ ಪಕ್ವವಾದ ರಸಿಕನ ಲಕ್ಷಣವಲ್ಲವಷ್ಟೇ.ಹಾಗಾಗಿ ಭಾವ ಸಾಂದ್ರತೆಯೂ ಅಷ್ಟೇ ಮುಖ್ಯ. ಪ್ರಸ್ತುತಪಡಿಸಲ್ಪಟ್ಟ ಸಂಗೀತದಲ್ಲಿ ತನ್ನನ್ನೇ ತಾನು ಮರೆಯಬಲ್ಲ ಹೃದಯ ಸಂವೇದನೆಯೂ ಮುಖ್ಯವೆಂದನಿಸುತ್ತದೆ. ಹೀಗೆ ಮನೋವಿಕಲ್ಪಗಳನ್ನು ಮೀರಿ ,ಶಾಸ್ತ್ರೀಯತೆಯನ್ನು ಅರಿತು ಸಂಗೀತವನ್ನು ಆಸ್ವಾದಿಸಿದರೆ ಅದು ಪರಿಪೂರ್ಣವಾದ ಕೇಳ್ಮೆಯಾಗಬಲ್ಲದು ಎಂದನಿಸುತ್ತದೆ.


ಇಂತಹ ರಸಿಕನಾಗುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವೂ ಕ್ಲಿಷ್ಟವೇ ಸರಿ.ಅಪಾರವಾದ ಕೇಳ್ಮೆ ,ಲಕ್ಷಣದ ಅರಿವು ,ಸೂಕ್ಷ್ಮತೆಯೆಡೆಗೆ ನೆಟ್ಟ ದೃಷ್ಟಿ ,ಸೌಂದರ್ಯ ಪ್ರಜ್ಞೆ,ಸಾಹಿತ್ಯಾರ್ಥವನ್ನು ಅರ್ಥಮಾಡಿ ಕೊಳ್ಳುವುದು ,ವಾಗ್ಗೇಯಕಾರರ ಒಳ ಮನಸ್ಸನ್ನು ಅರಿಯುವ ಪ್ರಯತ್ನ ಇವುಗಳೆಲ್ಲದರ ಜೊತೆಗೆ ಬಹುಮುಖ್ಯವಾಗಿ ಸಂಗೀತದೊಡನೆ ನೇರ ಹೃದಯ ಸಂಭಾಷಣೆ ನಡೆಸುವಂತಹ ಸಂವೇದನಾಶೀಲ ಮನಸ್ಥಿತಿ ಇದ್ದಲ್ಲಿ ಉತ್ತಮ ರಸಿಕನಾಗುವುದು ಸಾಧ್ಯವಷ್ಟೆ.


ಸಂಗೀತಗಾರನು ಶಾಶ್ವತ ಸತ್ಯವನ್ನು ನಿರಂತರವಾಗಿ ಹುಡುಕುವ ಆಧ್ಯಾತ್ಮಿಕ ಸಾಧಕನಂತೆ. ರಸವೇ ಆತನ ಗಮ್ಯ.ಅದಕ್ಕಾಗಿ ಆತ ನಿರಂತರ ಶೋಧನೆಯಲ್ಲಿ ತೊಡಗಿರುತ್ತಾನೆ. ರಸಿಕನಾದರೋ ಸಾಧಕನ ನಿಷ್ಠೆಯಿಂದ ಸಂಗೀತಗಾರನ ಶೋಧನೆಯ ಮಾರ್ಗವನ್ನೇ ಕೇಳ್ಮೆಯಲ್ಲಿ ಅನುಸರಿಸಿದರೆ ರಸಿಕನೂ ನಾದೋಪಾಸಕನ ಗಮ್ಯವನ್ನೇ ಸೇರಬಲ್ಲನೆಂಬುದು ನನ್ನ ಬಲವಾದ ನಂಬಿಕೆ .


ಸಾಯಿ ಗಣೇಶ್ ಎನ್ ಪಿ

Wednesday, April 14, 2010

ಏಕ ವ್ಯಕ್ತಿಯ ವಿರಾಟ್ ಸ್ವರೂಪದ ಯಕ್ಷಗಾನ


ಯಕ್ಷಗಾನವೆಂದರೆ ರಾತ್ರಿಯಿಡಿ ನಡೆದು ಸೂರ್ಯೋದಯ ಕಾಲಕ್ಕೆ ಮಂಗಳ ಹಾಡುವ ಪರಿಪಾಠ ಸರ್ವೇ ಸಾಮಾನ್ಯ . ಆದರೆ ಮಂಟಪ್ ಪ್ರಭಾಕರ ಉಪಾಧ್ಯಾರ ಯಕ್ಷಗಾನವೆಂದರೆ , ಸರಿ ಸುಮಾರು ೭-೮ ಘಂಟೆಯ ಪ್ರಸಂಗವನ್ನು ಒಬ್ಬರೇ ವ್ಯಕ್ತಿ,ಪ್ರಸಂಗದ ನಾಟ್ಯ , ಪದ್ಯ ,ಅಭಿನಯ ಹೀಗೆ ಕಲೆಯ ಯಾವುದೇ ಅಂಗಕ್ಕೂ ಭಂಗ ಬಾರದಂತೆ ಕೇವಲ ಒಂದೂವರೆ ಘಂಟೆಯ ಅವಧಿಯಲ್ಲಿ ಅಭಿನಯಿಸುವ ವಿಶೇಷ.
ನಾನು ನೋಡಿದ ಅವರ "ಶೂರ್ಪನಖಿ" ಮತ್ತು "ಮಂಥರೆಯ ದುರ್ಮಂತ್ರ". ಎರಡೂ ಪ್ರಸಂಗಗಳಲ್ಲಿ ಮನಸೆಳೆಯುವ ಅಭಿನಯವನ್ನು ಮಂಟಪರು ನೀಡಿದರು. ಶೂರ್ಪನಖಿಯ ಪಾತ್ರದಲ್ಲಿ ಅವರ ಭಾವಾಭಿವ್ಯಕ್ತಿ , ಭಾಗವತಿಕೆಯವರೊಂದಿಗೆ ಸಮಯೋಚಿತವಾದ , ಹಾಗು ತಿಳಿ ಹಾಸ್ಯಭರಿತ ಪ್ರಶ್ನೋತ್ತರ ಸಂವಾದ ಹನಿ ಹನಿ ಮಳೆಯ ನಡುವೆಯೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು . ಸ್ತ್ರೀವೇಶ ಧರಿಸಿ ರಂಗಕ್ಕೆ ಪ್ರವೇಶಿಸುವ ಮಂಟಪರ ಭಾವಭಂಗಿ , ನೃತ್ಯದಲ್ಲಿ ಅವರ ನಯ , ಕಣ್ಣಿನ ಓರೆನೋಟ,ಸ್ತ್ರೀಯ ಪರಕಾಯ ಪ್ರವೇಶ ಮಾಡಿದಂತಹ ಅನುಭವ ನೀಡುತ್ತಿತ್ತು . ಸುಮಾರು ಒಂದೂಕಾಲು ಘಂಟೆ ನಡೆದ ಈ ಪ್ರಸಂಗದನಂತರ ಪ್ರಾರಂಭವಾದದ್ದು ಮಂಥರೆಯ ದುರ್ಮಂತ್ರ .
ಮಂಥರೆಯ ಪಾತ್ರವಹಿಸಿದ್ದ ಚಪ್ಪರದಮನೆ ಶ್ರೀಧರ್ ಹೆಗಡೆ . ಗೂನು ಬೆನ್ನಿನ ಸೊಟ್ಟ ಮೂತಿಯ ಮುದುಕಿಯ ವೇಷದಲ್ಲಿ ಪ್ರವೇಶಿಸಿ ತಮ್ಮ ನೃತ್ಯದಿಂದ ಎಲ್ಲರನ್ನು ನಗಿಸಿದರು . ಮುದುಕಿಯ ಪಾತ್ರಕ್ಕೆ ಈ ನೃತ್ಯ ಕೊಂಚ ಅಸಮಂಜವೆನಿಸಿದರೂ , ಮನರಂಜನೆಯೇ ಮುಖ್ಯವಾದ ಜಾನಪದ ಕಲೆಯಾದ ಯಕ್ಷಗಾನದಲ್ಲಿ ತಾರ್ಕಿಕ ಪ್ರಶ್ನೆಗಳು ಸಾಧುವಲ್ಲ . ಕೈಕೇಯಿಯ ಪಾತ್ರದಲ್ಲೂ ಮಂಟಪರು ಉತ್ತಮ ಅಭಿನಯ ನೀಡಿದರು . ತನ್ನ ಪಾತ್ರಕ್ಕೆ ತಕ್ಕಂತ ಭಾವಭಂಗಿ , ಧ್ವನಿಯಲ್ಲಿನ ಬದಲಾವಣೆಗಳಲ್ಲಿ ಮಂಥರೆಯ ಪಾತ್ರ ಅದ್ಭುವಾಗಿತ್ತು . ಹೆಗಡೆಯವರು ಕೈಕೇಯಿ ಗೆ ಸಮನಾಗಿ ಕೆಲವೊಮ್ಮೆ , ಕೈಕೆಯಿಯನ್ನೂ ಮೀರಿಸುವಂತ ಪ್ರೌಡಿಮೆ ತೋರಿದರು . ಭಾಗವತಿಕೆಯವರು ಭೈರವಿ,ತೋಡಿ , ಕಾಪಿ ಇಂತಹ ಶಾಸ್ತ್ರೀಯ ರಾಗಗಳನ್ನು ಅಳವಡಿಸಿ ಸುಶ್ರಾವ್ಯವಾಗಿ ಹಾಡಿದ ಪದ್ಯಗಳು ಕಲೆಗಟ್ಟಿದವು . ಮೃದಂಗ ಹಾಗು ಚಂಡೆ ಒಳ್ಳೆಯ ಲಯ ಸಹಕಾರ ನೀಡಿದವು . ಸಾಧಾರಣವಾಗಿ ಕುಣಿತ ಹಾಗು ಅಬ್ಬರದ ಮಾತುಗಳಿಂದ ತುಂಬಿರುವ ಯಕ್ಷಗಾನವನ್ನು ಮೃದುಗೊಳಿಸಿ ಪ್ರಸ್ತುತ ಪರಿಸ್ತಿತಿಗೆ ಹೊಂದಿಕೆಯಾಗುವಂತೆ ಕಡಿಮೆ ಸಮಯದಲ್ಲಿ , ಕಳೆಯ ಯಾವ ಅಂಗಕ್ಕೂ ದೋಷಬಾರದಂತೆ ಮಂಟಪರ ಪ್ರಯತ್ನ ಶ್ಲಾಘನೀಯ . ಅದನ್ನು ನಿರ್ದೇಶಿಸಿದ ಶತಾವಧಾನಿ ಗಣೇಶ್ ರ ಸಹಾಯ ಹಾಗು ಮಾರ್ಗದರ್ಶನ ಸ್ತುತ್ಯರ್ಹವಾದುದು . ಇಂತಹ ಕಲಾ ಪ್ರಕಾರವು ಹೆಚ್ಚು ಹೆಚ್ಚು ಜನರನ್ನು ತಲುಪಿ ಜನಮನ್ನಣೆ ಗಳಿಸುವ ಅಗತ್ಯ ಇಂದು ಕಾಣುತ್ತಿದೆ .

ಶಶಾಂಕ್ .. .

Thursday, April 8, 2010

ಕೆ ಎಸ್ ಗೋಪಾಲಕೃಷ್ಣ - ನಾದೋಪಾಸನೆಯ ತುರೀಯಾವಸ್ಥೆ


ಇವತ್ತು ನನ್ನ ಜನ್ಮ ಸಾಫಲ್ಯ ಕಂಡ ದಿನ ಅಂದ್ರೆ ಅತಿಶಯೋಕ್ತಿಯಲ್ಲ. ವೇಣು ಮಾಂತ್ರಿಕ ಗೋಪಾಲಕೃಷ್ಣ ಅವರ ಕಚೇರಿ ಕೇಳಬೇಕೆಂಬ ಉತ್ಕಟವಾದ ಆಸೆ ಅವರ ಭೈರವಿ ಬಾಲಗೋಪಾಲ,ಮೋಹನ ನನ್ನುಪಾಲಿಮ್ಪ, ರಂಜನಿ ಮಾಲಾ ಇವೆಲ್ಲ ಕೇಳಿದಾಗಿಂದ ಇತ್ತು.ಇವತ್ತು ನನ್ನ ಆಸೆ ನೆರವೇರಿತು. ನನ್ನ ಬೊಗಸೆ ಎಷ್ಟು ದೊಡ್ಡದೋ ನಾ ಕಾಣೆ ,ಆತ ಮಾತ್ರ ಮೊಗೆದು ಮೊಗೆದು ಕೊಟ್ಟರು ನಿಸ್ವಾರ್ಥದಿಂದ ,ನಿರ್ವಾಕರತೆಯಿಂದ ,ತಾಯಿಯ ಸಹಜ ಪ್ರೇಮದಂತೆ .ನಿಜವಾದ ವಾತ್ಸಲ್ಯವನ್ನು ಕಾಣದೆ ಕಂಗಾಲಾದ ಮಗುವಿನ ಹೃದಯ ವೇದನೆಯನ್ನು ಅರ್ಥ ಮಾಡಿಕೊಂಡು ದುಗುಡ ಶಮನ ಮಾಡಿದ ರೀತಿ ಅನನ್ಯ. . ಪ್ರಯತ್ನವಿಲ್ಲದೆ ಹರಿಯುವ ನಾದ ಸುಧಾರಸ , ಸುಲಭ ಅನ್ನಿಸುವ ಆದರೆ ಕೈಗೆಟುಕದ ಸ್ವರಪ್ರಸ್ತಾರ ಶೈಲಿ , ಬಿಗಿಯಾದ ತಾಳ ನಿರ್ವಹಣೆ, ಶಾಂತ ಮನೋಹರವಾದ ಮನೋಧರ್ಮ , ತನ್ನ ಶಾಂತ ನಿಶ್ಚಲ ಮನೋಭಾವದಿಂದ ಪಕವಾದ್ಯದವರನ್ನು ತನ್ನ ಮಟ್ಟಕ್ಕೆ ಏರಿಸಿ ತನ್ನಂತೆಯೇ ನಡೆಸುವ ಧೀರ ಉದಾತ್ತ ಶೈಲಿ ಅಪೂರ್ವ.

ತಮ್ಮ ಅನಂತ ಪದ್ಮನಾಭನ ವಿಗ್ರಹ ತೆಗೆದು ಮುಂದೆ ಇಟ್ಟುಕೊಂಡು ಧ್ಯಾನಸ್ಥಾಗಿ ಆತನನ್ನು ಬೇಡಿ ವಿನಮ್ರ,ಶಾಂತ ಚಿತ್ತದಿಂದ ಪ್ರಾರಂಭಿಸಿದರು .

ಮೊದಲಿಗೆ ಶ್ರೀ ರಾಗದ ಆಲಾಪನೆ. ಬೆಳಗಿನ ಜಾವದ ಮಂಗಳಕರವಾದ ವಾತಾವರಣ ಮೂಡಿದಂತ ಭಾವನೆ.ಸೂರ್ಯೋದಯ ಹಕ್ಕಿಗಳ ಚಿಲಿಪಿಲಿ ಇಂಥ ಭಾವನೆಗಳೇ ಮೂಡಿದವು ನನಗೆ.ಶ್ರೀ,ಮಣಿರಂಗು ಇಂಥ ರಾಗಗಳನ್ನ ಯಾಕೆ ಹೆಚ್ಚು ಹಾಡಲ್ವೋ ಗೊತ್ತಿಲ್ಲ ಇವತ್ತು ಇವರು ನುಡಿಸಿದ ಪುಟ್ಟ ಆಲಾಪನೆ ನನ್ನ ಮನದಲ್ಲಿದ್ದ ಕಷ್ಮಲವನ್ನು ಒಂದೇ ಸಾರಿಗೆ ತೊಳೆದು ಹಾಕಿತು ಅಂದರೆ ತಪ್ಪಾಗಲಾರದು. ದೇವಸ್ಥಾನಕ್ಕೆ ಕಾಲು ತೊಳೆದು ಒಳಗೆ ಹೋಗುತ್ತೆವಲ್ಲ ಹಾಗಾಯಿತು ಈ ಪುಟ್ಟ ಆಲಾಪನೆ! ವರ್ಣ ನಿಧಾನವಾಗಿ ನುಡಿಸಿದರು. ತುಂಬಾ ಚೆನ್ನಾಗಿತ್ತು , ಸ್ವರಕಲ್ಪನೆ ಅದ್ಭುತವಾಗಿತ್ತು. ವಿಶ್ರಾಂತಿಯಿಂದ ನುಡಿಸಿದರು. ಮ್ರಿದಂಗದ ನಾದ ಕೇಳಬೇಕೆನಿಸಿದರೆ ಹಾಗೇ ಸುಮ್ಮನೆ ಕಣ್ಣುಮುಚ್ಚಿ ಕುಳಿತು ಬಿಡುತ್ತಿದ್ದರು. ಮತ್ತೆ ಒಂದು ಅದ್ಭುತವಾದ ಸಂಚಾರ ನುಡಿಸಿ ಮುಗುಳುನಗುತ್ತಿದ್ದರು. ಅಯ್ಯೋ ಇದೇ ಅಲ್ವೇನೋ ಕಲೆ ಅಂತ ಮನಸ್ಸು ಕೇಳ್ತಿತ್ತು. ಹೌದು ಇದೇ! ಒಂದು ಕ್ಷಣವೂ ಬಿಡಬೇಡ ಎಂದು ಇನ್ನೊಂದು ಮೂಲೆಯಿಂದ ಕೂಗಿತು ಮನಸ್ಸು. ಕಲ್ಪನಸ್ವರವೂ ಸೇರಿದಂತೆ ಸುಮಾರು ೨೫ ನಿಮಿಷ ಶ್ರೀ ರಾಗ ತೆಗೆದುಕೊಂಡಿತು. ಕಚೇರಿಗೆ ಅತ್ಯಂತ ಶುಭಾಸ್ಕರವಾದ ಆರಂಭ.

ನಂತರ ನಾಟ ರಾಗದ ಆಲಾಪನೆ. ನಂಗೆ ನಾಟ ಅಂದ್ರೆ ಅಬ್ಬರ,ಜಮಾವಣೆ ಕೊಡುವ ರಾಗ ಅಂತಷ್ಟೇ ಇತ್ತು ಭಾವನೆ. ಇವ್ರು ಅದನ್ನ ಸುಳ್ಳು ಮಾಡಿದರು . ನಿಧಾನವಾಗಿ ಬೆಳೆಸಿದರು ರಾಗ. ಸಂಜೆಯ ಹೊತ್ತು ಕೆರೆ ದಂಡೆಯ ಮೇಲೆ ಏಕಾಂಗಿಯಾಗಿ ಆತ್ಮ ಸಂತೋಷಕ್ಕೆ ನುಡಿಸುವ ಗೋಪಾಲನಂತೆ ಕಂಡು ಬಂದಿತು ನಂಗೆ ಅವರ ಶೈಲಿ. ಕೆಲವೊಮೆ ಒಳ್ಳೇ ಸಂಚಾರ ಬಂದಾಗ ತುಟಿಯಂಚಲ್ಲೇ ಸಣ್ಣ ಕಿರುನಗೆ ಮತ್ತೆ ಅದನ್ನೇ ನುಡಿಸಿ ತೃಪ್ತಿ ಪಡುವ ರೀತಿ ಎಷ್ಟೇ ಹೊಸತನ್ನು ಕಂಡುಹಿಡಿದರೂ ಶಾಸ್ತ್ರೀಯ ಚೌಕಟ್ಟನ್ನು ಮೀರದ ಶಿಸ್ತು ಬಹಳ ಇಷ್ಟವಾಯಿತು. ವಿವಾದಿ ಸ್ವರ ಹಿಡಿಯುವಾಗ ಹೃದಯ ಕಲಕಿದಂತಹ ಭಾವನೆ ಆಗ್ತಿತ್ತು :) ಕೃತಿ ಯಾವ್ದು ಅಂತ ಗೊತ್ತಾಗಲಿಲ್ಲ. ಸ್ವರ ಪ್ರಸ್ತಾರ ಅಮೋಘವಾಗಿತ್ತು. ಇಲ್ಲಿ ಹೆಚ್ಚು ಮುಕ್ತಾಯಿಗಳಿಗೆ ಗಮನ ಕೊಟ್ಟರು. ಲಯದ ಮೇಲೆ ಒಳ್ಳೇ ಹಿಡಿತ. ಮ್ರಿದಂಗದ ನಡೆಗಳನ್ನ ನುಡಿಸುವಾಗ ಯಾವುದೇ ಆತುರವಿಲ್ಲದೆ ಸುಶ್ರಾವ್ಯವಾಗಿಯೇ ನುಡಿಸಿದರು . ಅದು ವಿಶೇಷ ಅನ್ನಿಸಿತು :)ಇವೆಲ್ಲ ಸೇರಿ ಮತ್ತೊಂದರ್ಧ ಘಂಟೆ ತೆಗೆದುಕೊಂಡರು .

ಮುಂದೆ ಮಾಯಾಮಾಳವಗೌಳ .ಎಷ್ಟು ದಿನ ಆಗಿತ್ತು ಈ ರಾಗ ಕೇಳಿ . ಮಂದ್ರದ ಗಂಭೀರ ಸಂಚಾರಗಳು ಆ ರಾಗದ ಸುಕೋಮಲ ಗಂಭೀರತೆ ,ಸ್ತ್ರೀತ್ವ ಉಳ್ಳ ಪೌರುಷ ಇವೆಲ್ಲದರ ಪ್ರತ್ಯಕ್ಷ ಅನುಭವ ಆಗ್ತಾ ಹೋಯ್ತು ರಾಗ ಬಿಡಿಸ್ತ ಇದ್ದ ಹಾಗೆ. ಪರಮಯೋಗಿ ಕೃಷ್ಣ ಯೋಗ ಮುದ್ರೆ ತಳೆದು ಎಲ್ಲರನ್ನೂ ಕೊಳಲಿನ ನಾದದ ಮೂಲಕ ತನ್ನ ದಿವ್ಯಲೋಕಕ್ಕೆ ಕರೆಯುತ್ತಿರುವಂತೆ ಭಾಸವಾಯಿತು . ಸಂತೋಷಮುಗ.....ಪೂಜಿಂಚು ಅಂತ ನಿಲ್ಲಿಸಿ ಸುಮ್ಮನಾದರು. ರಿಶಭದಲ್ಲಿ ಹಾಗೆ ನ್ಯಾಸ ಮಾಡಿ ತುಳಸೀದಳ ಶುರು ಮಾಡಿದರು . ಬಹಳ ಚೆನ್ನಾಗಿತ್ತು. (ಕ್ಲೀಷೆ ) ಸರಸೀರುಹ ಎಂಬಲ್ಲಿ ಮಾಡಿದ ನೆರವಲು ಮತ್ತು ಸ್ವರಕಲ್ಪನೆ ಕೂಡ ಸೊಗಸಾಗಿ ಮೂಡಿಬಂತು.

ಮುಂದೆ ಕಾನಡ ರಾಗದ ಮುದ್ದಾದ ಆಲಾಪನೆ. ಸೂಕ್ಷಮತೆಗಳನ್ನ ಎಳೆ ಎಳೆಯಾಗಿ ಬಿಡಿಸಿಟ್ಟರು. ವಯೊಲಿನ್ ಕೂಡ ಚೆನ್ನಾಗಿತ್ತು . ನಂತರ ರಾಮ ನಾಮ...ಸುಖಿ ಎವ್ವರೂ ಅಂತ ನಿಲ್ಲಿಸಿದಾಗ ವಿಚಿತ್ರವಾದ ಆನಂದ ಉಂಟಾಯಿತು. ಹಾಗೆ ಬೇರೆ ಬೇರೆ ಥರ ನುಡಿಸಿದರು. ಕೃತಿಯನ್ನ ತುಂಬಾ ನಿಧಾನವಾಗಿ ವಿಶ್ರಾಂತಿಯಲ್ಲಿ ನುಡಿಸಿದರು , ಸ್ವರಕಲ್ಪನೆ ಮಾಡಲಿಲ್ಲ. ಈ ವೇಳೆಗಾಗಲೇ ೯ ಘಂಟೆ ಹೊಡೆದಿತ್ತು, ಅವರಿಗೆ ಅದರ ಪರಿವೆ ಇರಲಿಲ್ಲ. ಸಮಯ ನೋಡಿ ಗಾಬರಿ ಆದರೂ ಜನ ಒಬ್ಬರೂ ಕದಲಿರಲಿಲ್ಲ.

ಕಲ್ಯಾಣಿ ಮೊದಲಾಯಿತು. ಈ ನಡುವೆ ಈ ರಾಗ ದೇವತೆ ನನ್ನ ಮೇಲೆ ಕೃಪೆ ಬೀರಿದ್ದಾಳೆ ಅನ್ಸತ್ತೆ. ಅದ್ಭುತವಾದ ಕಲ್ಯಾಣಿ ಕೇಳೋ ಸುಯೋಗ ಮೇಲಿಂದ ಮೇಲೆ ಒದಗಿ ಬರ್ತಾ ಇದೇ. ಇವತ್ತು ನನ್ನ ಸ್ನೇಹಿತ ಕೈ ಎತ್ತಿ ಮುಗಿದು ಬಿಟ್ಟ. ಕಲ್ಯಾಣಿ ತೆಗೆದುಕೊಂಡಾಗ. ನಿಧಾನವಾಗಿ ಬಿಡಿಸ್ತಾ ಹೋದರು. ಈರಾಗದ ಲಾಲಿತ್ಯ ,ಮುಗ್ಧತೆ ,ಬಳುಕು,ವಯ್ಯಾರ ,ನಿತ್ಯ ಶಾಂತತೆ ಬೇರೆ ರಾಗಗಳಿಗೆ ಪ್ರಯತ್ನ ಸಿದ್ಧವಾದರೂ ಕಲ್ಯಾಣಿಗೆ ಅದು ಸ್ವಭಾವ ವಿಶೇಷ ! ಒಂದು ಗಾಢವಾದ ಶಕ್ತಿಯ ಪರಿಣಾಮದಿಂದ ಎಲ್ಲರೂ ಆನಂದದಿಂದ ಪ್ರೇಮಾಶ್ರುಗಳನ್ನು ಸುರಿಸುತ್ತಿರುವ ಹಾಗೆ ಅನ್ನಿಸಿತು ನನಗೆ . ಅಂತ ಅತ್ಮಾನಂದಕರವಾದ ಆಲಾಪನೆ. ಷಡ್ಜದ ತನಕ ಬೆಳಸಿ ಪಿಟೀಲಿಗೆ ಬಿಟ್ಟರು. ಪಾಪ ಆತನಿಗೆ ನುಡಿಸುವುದಕ್ಕಿಂತ ಕೇಳುವುದರಲ್ಲೇ ಆಸಕ್ತಿಯೇನೋ ಬೇಗ ಷಡ್ಜ ತಲುಪಿ ಅವರಿಗೆ ಬಿಟ್ಟರು. ಮುಂದೆ ಶದ್ಜದಿಂದಾಚೆ ಬೆಳಸಿ ಮಂದ್ರಕ್ಕೆ ವಾಪಸ್ ಬಂದು ಷದ್ಜದಲ್ಲೀ ಲೀನವಾದರು. ಸುಮಾರು ಅರ್ಧಗಂಟೆಯ ನಿರಂತರ ಧಾರೆ . ಏತಾವುನರ ಕೃತಿ ತೆಗೆದುಕೊಂಡರು. ಅಲ್ಲ ಖುಷಿಗೂ ಒಂದು ಪರಿಮಿತಿ ಬೇಡವೇ.(ಈ ಕೃತಿ ಅಂದ್ರೆ ಪ್ರಾಣ ನನಗೆ) ವಿಳಂಬ ಮಧ್ಯಮ ಕಾಲದಲ್ಲಿ ನುಡಿಸಿದರು . ಶಿವ ಮಾಧವ ಬ್ರಹ್ಮ ಅನ್ನುವಲ್ಲಿ ಸ್ವರಕಲ್ಪನೆ ಬಹಳ ಚೆನ್ನಾಗಿತ್ತು.

ಅವರ ಸಂಗೀತದ ವಿಶೇಷ ಅಂದರೆ ಎಲ್ಲ ರಸಗಳಿಗೂ ಶಾಂತಿಯ ಒಂದು ಹಿಮ್ಮೇಳ ಇರತ್ತೆ. ಅದರ ಶ್ರುತಿಯಲ್ಲೇ ಮತ್ತೆಲ್ಲವೂ ಉದ್ಭವಿಸೋದು ಅಂತ. ಹಾಗೇ ಇತ್ತು. ದೇಶ ಕಾಲಗಳನ್ನು ಸ್ಥಬ್ಧಗೊಳಿಸುವ ಶಕ್ತಿ ಕಲೆಗಲ್ಲದೆ ಮತ್ತಾರಿಗಿದೆ. ನನಗಂತೂ ಇದು ದಿವ್ಯಾನುಭವ.

ಒಂದು ಸಂಗೀತ ಕಚೇರಿಯಾದ ಮೇಲೆ ಎಲ್ಲರ ಕಣ್ಣಲ್ಲೂ ಒಂದು ಹೊಳಪು,ಸಂತೃಪ್ತಿಯ ಭಾವ ಉಂಟಾಗಿರಬೇಕು . ಹೃದಯ ಕರಗಬೇಕು. ಅಯ್ಯೋ ಇಷ್ಟೇ ಜೀವನ ಇದಕ್ಕಿಂತ ಸುಖ ಮತ್ತಾವುದು ಎಂಬ ಕ್ಷಣಿಕವಾದ ಬ್ರಹ್ಮಾನಂದ ಉಂಟಾಗಬೇಕು. ಅದು ರಾಗವನ್ನು ಅದರ ವೈವಿಧ್ಯವನ್ನು ತಾಳದ ಕ್ಲಿಷ್ಟತೆಯನ್ನು ಮತ್ತಿತರ ಅಂಶಗಳನ್ನು ಗಮನಿಸುವ ವಿದ್ವಾಂಸನಿಗೂ ಹಾಗೇ ಇವಾವೂ ಗೊತ್ತಿಲ್ಲದ ಸಾಮಾನ್ಯ ರಸಿಕನಿಗೂ ಹೃದಯ ಕರಗಿಸಬೇಕು ,ಮನೋ ಸಂಸ್ಕಾರ ಸಾಧಿಸಬೇಕು ಆಗ ಅದು ಉನ್ನತವಾದ ಕಲೆ. ಆತ ಶ್ರೇಷ್ಠವಾದ ಕಲಾವಿದ. ನಾದೋಪಾಸಕ . KSG ಇವುಗಳ ದರ್ಶನ ಮಾಡಿಸಿದ್ದಾರೆ , ಇಷ್ಟೆಲ್ಲಾ ನನ್ನಿಂದ ಹೇಳಿಸಿದ್ದಾರೆ, ಹಾಗೆಯೇ ಭಾಷೆಯ ಪರಿಮಿತಿಯನ್ನು ಅರ್ಥ ಮಾಡಿಸಿದ್ದಾರೆ ಆದ್ದರಿಂದ ಹೇಳಲು ಸಾಧ್ಯವಾಗದೆ ಉಳಿದು ಹೋದ ಭಾವನೆಗಳನ್ನು ಹತ್ತಿಕ್ಕಿ ಮೌನಕ್ಕೆ ಶರಣಾಗುವುದು ಒಳಿತೆಂದು ಭಾವಿಸುತ್ತಿದ್ದೇನೆ .

ಸಾಯಿ ಗಣೇಶ್ ಎನ್ ಪಿ