Wednesday, April 21, 2010

ಸಂಗೀತ ರಸಾಸ್ವಾದನೆ-ಹೀಗೊಂದು ಚಿಂತನೆ

ಒಂದು ಕಲಾ ಪ್ರಕಾರದ ಸೌಂದರ್ಯವನ್ನು ಕಲೆಯ ಮಟ್ಟದಲ್ಲೇ ಆಸ್ವಾದಿಸುವುದು ಉತ್ತಮ ರಸಿಕನಾಗಬಯಸುವನ ಗಮ್ಯವಾಗಿರುತ್ತದೆ.ಕಲೆಯನ್ನು ಆಸ್ವಾದಿಸುವುದು ವಿಷಯ ಜ್ಞಾನ,ವಿಚಾರ ಶುದ್ಧಿ,ಭಾವ ಸಮೃದ್ಧಿ ಮೊದಲಾದ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಸಂಗೀತದ ಸೊಗಸನ್ನು ಆಸ್ವಾದಿಸುವ ವಿಷಯದಲ್ಲೂ ಮೇಲ್ಕಂಡ ವಿಚಾರಗಳನ್ನು ಅನ್ವಯ ಮಾಡಬಹುದು .


ಪ್ರಸ್ತುತ ಭಾರತೀಯ ಸಂಗೀತ ವಾಹಿನಿಯು ಕವಲೊಡೆದು ೨ ಮುಖ್ಯ ಹರಿವುಗಳಾಗಿರುವುದು ವೇದ್ಯವಾದ ವಿಚಾರವಷ್ಟೇ. ಮೂಲ ಸ್ವರೂಪವನ್ನು ಹೆಚ್ಚು ಮಾರ್ಪಾಡು ಮಾಡಗೊಡದೆ ಹಾಗೆಯೇ ಉಳಿಸಿಕೊಂಡು ಬಂದಿರುವ ಗರಿಮೆ ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ್ದು. ವಿವಿಧ ಸಂಗೀತ ಪ್ರಾಕಾರಗಳಿಗೆ ಹೋಲಿಸಿದರೆ ನಮ್ಮ ಸಂಗೀತದ ಸ್ವರೂಪ ಹೆಚ್ಚು ಸಂಕೀರ್ಣವಾದದ್ದು ಹಾಗೆಯೇ ಸೂಕ್ಷ್ಮವಾದದ್ದು.ನಮ್ಮ ರಾಗಗಳ ಕಲ್ಪನೆ,ತಾಳಗಳ ವೈವಿಧ್ಯತೆ ,ವಿಪುಲವಾದ ಗೇಯ ರಚನೆಗಳು ಅದರಲ್ಲಿನ ವಿಭಿನ್ನ ಪ್ರಾಕಾರಗಳು ಹೀಗೆ ಎಲ್ಲವೂ ನಿತ್ಯ ನೂತನವೂ ,ವಿಶಿಷ್ಟವೂ ಆಗಿವೆ. ನಮ್ಮ ಗಮಕದ ವಿಷಯವಂತೂ ಬಹಳ ಗಹನವಾದದ್ದು ಹಾಗೆಯೇ ಇತರ ಸಂಗೀತ ಪದ್ಧತಿಗಳಿಗಿಂತ ಸೂಕ್ಷ್ಮವಾದದ್ದು.ಇಂತಹ ಸಂಗೀತದ ಹಿರಿಮೆ ಗರಿಮೆಗಳನ್ನು ಮನಗಂಡು ಅದರ ಆಶಯಕ್ಕೆ ತಕ್ಕಂತೆ ಪ್ರಸ್ತುತಿಪಡಿಸುವದು ಮೇರು ಸಾಧನೆಯಾದರೆ ಅದನ್ನು ರಸದ ಮಟ್ಟದಲ್ಲಿ ಅನುಭವಿಸುವ ರಸಿಕ ಪ್ರಜ್ಞೆ ಪಡೆಯುವುದೂ ಸಹ ಕಷ್ಟ ಸಾಧ್ಯವೇ ಸರಿ.


ಒಬ್ಬ ರಸಿಕನಾಗಿ ನಾನು ಸಂಗೀತದಲ್ಲಿ ಅರಸುವುದು ಏನು ಎಂಬ ಪ್ರಶ್ನೆಯಿಂದ ಈ ರಸಾಸ್ವಾದನೆಯ ವಿಚಾರ ಮಂಥನ ಮೊದಲುಮಾಡುವುದು ಸೂಕ್ತವೆನಿಸುತ್ತದೆ.ಸಾಮಾನ್ಯವಾಗಿ ಸಂಗೀತದಲ್ಲಿ ನಮ್ಮನ್ನು ಆಕರ್ಷಿಸುವುದು ಶುದ್ಧ ನಾದ.ಶ್ರುತಿಯಲ್ಲೇ ಲೀನವಾಗಿ ಹೋಗುವ ನಾದ ಸೌಖ್ಯ ಯಾರಿಗೆ ಬೇಡ? ಹಾಗಾದರೆ ಕೇವಲ ನಾದ ಸೌಖ್ಯವಷ್ಟೇ ಸಂಗೀತದ ಗಮ್ಯವೇ ?ಅದನ್ನೂ ಸೇರಿದಂತೆ ಮತ್ತೇನು ಎಂದರಸಿದಾಗ ಲಯದ ನಿಗೂಢತೆ ,ಅಗಾಧತೆಯ ಅರಿವಾಗುತ್ತದೆ. ಲಯ ವಿಹೀನವಾದ ಸಂಗೀತವಿಲ್ಲವಷ್ಟೇ.ನಾದ ಲಯಗಳ ಪರಿಪಾಕವೇ ಸಂಗೀತವೇ? ಮನೋಧರ್ಮ ಪ್ರಧಾನವಾದ ,ಧಾತುವೇ ಮುಖ್ಯವಾದ ಶಾಸ್ತ್ರೀಯ ಸಂಗೀತದಲ್ಲಿ ಇದು ಬಹುಮಟ್ಟಿಗೆ ಸತ್ಯವೂ ಹೌದು. ಆದರೆ ನಮ್ಮ ಸಂಗೀತದಲ್ಲಿ ಸಾಹಿತ್ಯವೂ ಪೋಷಕವಾಗಿ ,ಕೆಲವೊಮ್ಮೆ ಸಂಗೀತದಿಂದ ಪೋಷಣೆಯನ್ನು ಪಡೆದು ತನ್ನ ಹಿರಿಮೆ ಗರಿಮೆಗಳನ್ನು ಹೆಚ್ಚಿಸಿಕೊಂಡಿದೆಯಷ್ಟೇ.ಹೀಗಾಗಿ ರಸಿಕನಾದವನಿಗೆ ನಾದ ಸೌಖ್ಯ,ಲಯ ಜ್ಞಾನ ,ಸಾಹಿತ್ಯಾರ್ಥ ಅದರಿಂದ ಹೊರಹೊಮ್ಮುವ ಭಾವದ ಅರಿವು ಇವುಗಳೆಲ್ಲವನ್ನೂ ಸಮಷ್ಟಿಯಲ್ಲಿ ಗ್ರಹಿಸುವ ಮನೋಪರಿಪಾಕ ಮುಖ್ಯವೆಂದನಿಸುತ್ತದೆ.


ಒಂದು ರಾಗಲಾಪನೆಯನ್ನು ಕೇಳುವಾಗ ಹಲವರಿಗೆ ಹಲವು ರೀತಿಯ ಅನುಭವಗಳಾಗಬಹುದು.ಒಬ್ಬೊಬ್ಬರಿಗೆ ಆಗುವ ಆನಂದ ವಿಭಿನ್ನ ರೀತಿಯದ್ದಾಗಿರಬಹುದು. ಸಾಮಾನ್ಯ ಶ್ರೋತೃ ಒಬ್ಬನಿಗೆ ಸಿಗುವ ಆನಂದ ನುರಿತ ಶ್ರೋತೃವಿಗೆ ದೊರೆಯದೆ ಹೋಗಬಹುದು.ನುರಿತ ಶ್ರೋತೃವಿಗೆ ಸಿಕ್ಕ ಆನಂದದ ಅನುಭವ ಬೇರೆಯದೇ ಆಗಿರಬಹುದು.ಸಂಗೀತದಿಂದ ಕೆಲವರಿಗೆ ಕೇವಲ ಭಾವ ವಿರೇಚನವಾದರೆ , ಕೆಲವರಿಗೆ ಅದು ಆತ್ಮೋನ್ನತಿಯಾಗಬಹುದು . ಮನಸ್ಸನ್ನು ಪರಿಶುದ್ಧಗೊಳಿಸುವ ಧ್ಯಾನವಾಗಬಹುದು. ಹೀಗಾಗಿ ರಸಾಸ್ವಾದನೆಯ ಆನಂದದಲ್ಲೂ ವಿಕಲ್ಪಗಳು ಉಂಟು ಎಂದು ತಿಳಿಯಬಹುದಷ್ಟೇ.ಈ ವಿಕಲ್ಪಗಳಿಗೆ ಕಾರಣಗಳೇನು ಎಂದರೆಸುತ್ತ ಹೋದಲ್ಲಿ ಶ್ರೋತೃವಿನ ಮನಸ್ಥಿತಿ ,ಸಂಗೀತ ಜ್ಞಾನ,ಭಾವ ಸಾಂದ್ರತೆ ಇಂತಹ ಅನೇಕ ಕಾರಣಗಳು ಗೋಚರವಾಗುತ್ತವೆ .ಉದಾ : ದು:ಖ ತಪ್ತನಾಗಿರುವ ಒಬ್ಬ ವ್ಯಕ್ತಿಗೆ ಒಮ್ಮೆ ಕೇಳಿದ ಸಂಗೀತ ಸಾಂತ್ವನದಂತಿರಬಹುದು ಅದೇ ಸಂಗೀತ ಮತ್ತೊಮ್ಮೆ ವಸ್ತುನಿಷ್ಟವಾಗಿ ಕೇಳಿದಾಗ ರುಚಿಸದೆ ಹೋಗಬಹುದು. ಹೀಗೆ ಬದಲಾಗುತ್ತಿರುವ ಮನಸ್ಥಿತಿಗೆ ತಕ್ಕಂತೆ ರಸಾಸ್ವಾದನೆಯೂ ಬದಲಾದಲ್ಲಿ ಅದು ಪಕ್ವವಾದ ಕೇಳ್ಮೆಯಲ್ಲ. ಇನ್ನು ಸಂಗೀತ ಜ್ಞಾನದ ವಿಚಾರಕ್ಕೆ ಬಂದರೆ ರಾಗಗಳ ಸೂಕ್ಷ್ಮ ವಿಚಾರಗಳು , ತಾಳ ವೈವಿಧ್ಯತೆಯ ನಿಗೂಢ ತತ್ವವನ್ನು ಅರಿತವನು ಅತಿ ವಿಸ್ತಾರವಾದ ಗಾಯನವಾದರೂ ,ಸುಮಧುರವಾಗಿದ್ದರೂ ಶಾಸ್ತ್ರೀಯ ಚೌಕಟ್ಟು ಮೀರಿದ್ದನ್ನು ಒಪ್ಪಲಾರ.ಇಷ್ಟೇ ಆದರೆ ಅದೂ ಕೂಡ ಪಕ್ವವಾದ ರಸಿಕನ ಲಕ್ಷಣವಲ್ಲವಷ್ಟೇ.ಹಾಗಾಗಿ ಭಾವ ಸಾಂದ್ರತೆಯೂ ಅಷ್ಟೇ ಮುಖ್ಯ. ಪ್ರಸ್ತುತಪಡಿಸಲ್ಪಟ್ಟ ಸಂಗೀತದಲ್ಲಿ ತನ್ನನ್ನೇ ತಾನು ಮರೆಯಬಲ್ಲ ಹೃದಯ ಸಂವೇದನೆಯೂ ಮುಖ್ಯವೆಂದನಿಸುತ್ತದೆ. ಹೀಗೆ ಮನೋವಿಕಲ್ಪಗಳನ್ನು ಮೀರಿ ,ಶಾಸ್ತ್ರೀಯತೆಯನ್ನು ಅರಿತು ಸಂಗೀತವನ್ನು ಆಸ್ವಾದಿಸಿದರೆ ಅದು ಪರಿಪೂರ್ಣವಾದ ಕೇಳ್ಮೆಯಾಗಬಲ್ಲದು ಎಂದನಿಸುತ್ತದೆ.


ಇಂತಹ ರಸಿಕನಾಗುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವೂ ಕ್ಲಿಷ್ಟವೇ ಸರಿ.ಅಪಾರವಾದ ಕೇಳ್ಮೆ ,ಲಕ್ಷಣದ ಅರಿವು ,ಸೂಕ್ಷ್ಮತೆಯೆಡೆಗೆ ನೆಟ್ಟ ದೃಷ್ಟಿ ,ಸೌಂದರ್ಯ ಪ್ರಜ್ಞೆ,ಸಾಹಿತ್ಯಾರ್ಥವನ್ನು ಅರ್ಥಮಾಡಿ ಕೊಳ್ಳುವುದು ,ವಾಗ್ಗೇಯಕಾರರ ಒಳ ಮನಸ್ಸನ್ನು ಅರಿಯುವ ಪ್ರಯತ್ನ ಇವುಗಳೆಲ್ಲದರ ಜೊತೆಗೆ ಬಹುಮುಖ್ಯವಾಗಿ ಸಂಗೀತದೊಡನೆ ನೇರ ಹೃದಯ ಸಂಭಾಷಣೆ ನಡೆಸುವಂತಹ ಸಂವೇದನಾಶೀಲ ಮನಸ್ಥಿತಿ ಇದ್ದಲ್ಲಿ ಉತ್ತಮ ರಸಿಕನಾಗುವುದು ಸಾಧ್ಯವಷ್ಟೆ.


ಸಂಗೀತಗಾರನು ಶಾಶ್ವತ ಸತ್ಯವನ್ನು ನಿರಂತರವಾಗಿ ಹುಡುಕುವ ಆಧ್ಯಾತ್ಮಿಕ ಸಾಧಕನಂತೆ. ರಸವೇ ಆತನ ಗಮ್ಯ.ಅದಕ್ಕಾಗಿ ಆತ ನಿರಂತರ ಶೋಧನೆಯಲ್ಲಿ ತೊಡಗಿರುತ್ತಾನೆ. ರಸಿಕನಾದರೋ ಸಾಧಕನ ನಿಷ್ಠೆಯಿಂದ ಸಂಗೀತಗಾರನ ಶೋಧನೆಯ ಮಾರ್ಗವನ್ನೇ ಕೇಳ್ಮೆಯಲ್ಲಿ ಅನುಸರಿಸಿದರೆ ರಸಿಕನೂ ನಾದೋಪಾಸಕನ ಗಮ್ಯವನ್ನೇ ಸೇರಬಲ್ಲನೆಂಬುದು ನನ್ನ ಬಲವಾದ ನಂಬಿಕೆ .


ಸಾಯಿ ಗಣೇಶ್ ಎನ್ ಪಿ

2 comments:

  1. ಸಂಗೀತಕ್ಕೆ "ವಸ್ತುನಿಷ್ಠೆ" ಅಗತ್ಯವೇ? - ಚಿಂತಿಸಬೇಕಾದ ವಿಚಾರ. ಡಿವಿಜಿಯವರಲ್ಲೆಲ್ಲೋ ಓದಿದ ನೆನಪು. ಮೈಸೂರು ವಾಸುದೇವಾಚಾರ್ಯರದೋ ಮತ್ತಾರೋ ಖ್ಯಾತನಾಮರ ಗಾಯನ, ಚೌಡಯ್ಯನವರ ಪಿಟೀಲು. ಕಚೇರಿ ಅದ್ಭುತವಾಗಿ ಕಳೆಗಟ್ಟಿದೆ; ನೆರವಲು, ಸ್ವರಕಲ್ಪನೆಯಲ್ಲಂತೂ ಅವತ್ತಿನ ಗಾಯನ ಸ್ವರ್ಗಸಮಾನವಾಗಿದೆ. ಈಗ ಚೌಡಯ್ಯನವರ ಸರದಿ. ಆ ಪುಣ್ಯಾತ್ಮ ಪಿಟೀಲನ್ನು ಕೆಳಗಿಟ್ಟು ಕೈ ಮುಗಿದು ಹೇಳುತ್ತಾರೆ "ಸ್ವಾಮೀ, ಈಗಷ್ಟೇ ಈ ಗಾನದ ಅಮೃತವನ್ನು ಈಂಟಿದ್ದೇವೆ, ಇನ್ನು ಇದನ್ನು ಗಣಿತದಲ್ಲಿ ಅದ್ದಿ ರುಚಿಗೆಡಿಸಲಾರೆ, ಕ್ಷಮಿಸಬೇಕು"

    ಸಂಗೀತದಲ್ಲಿ, ಅದರಲ್ಲೂ ಕರ್ನಾಟಕ ಸಂಗೀತದಲ್ಲಿ ಗಣಿತವಿಲ್ಲದೇ ಸಾಧ್ಯವೇ ಇಲ್ಲ, ಆದರೆ ಅದರ ವೈಭವದಲ್ಲೂ ಸಂಗೀತದ ಹದ ಕೆಡದಂತೆ ನೋಡಿಕೊಳ್ಳುವುದೀಗ ನಿಜವಾದ ಕಲೆ. ಅದೇ ಕೇಳುಗನಿಗೂ ಅನ್ವಯಿಸಬಹುದೇ?

    ವಿಚಾರಪ್ರಚೋದಕ, ಎಂದಿನಂತೆ ಸದಭಿರುಚಿಯ, ಲೇಖನ. ಹೀಗೇ ಬರೆಯುತ್ತಿರಿ.

    ReplyDelete
  2. ನಮಸ್ತೆ ಮಂಜುನಾಥ್ ,

    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು :)

    ಅತಿಯಾದ ಗಣಿತ ಲೆಖ್ಹಾಚಾರ ಅಥವಾ ಅತಿಯಾದ ರಾಗವಿಸ್ತಾರ ಯಾವುದೂ ಕಲೆಗೆ ಪೂರಕವಲ್ಲ ಅನ್ನೋದು ನಿಜವಷ್ಟೆ. ಅದರ ಬಗ್ಗೆ ನಾನು ಲೇಖನದಲ್ಲಿ ಪ್ರಸ್ತಾಪಿಸುವ ಪ್ರಯತ್ನ ಮಾಡಿಲ್ಲ. ರಸಿಕನ ದೃಷ್ಟಿಯಿಂದ ಒಂದಷ್ಟು ಚಿಂತನೆ ನಡೆಸುವ ಪ್ರಯತ್ನ ಅಷ್ಟೇ. ಕೇಳ್ಮೆಯಲ್ಲಿ ವಸ್ತುನಿಷ್ಟೆ! ಇದೊಂದು ಆದರ್ಶ ತತ್ವ . ಹೀಗೆ ನಿಜಕ್ಕೂ ಕೇಳಲು ಸಾಧ್ಯವೇ ಅನ್ನೋದು ನನಗೆ ಗೊತ್ತಿಲ್ಲ. ಹಾಗಂದ ಮಾತ್ರಕ್ಕೆ ಅದು ಅನಗತ್ಯ ಎಂದು ಭಾವಿಸಲಾರೆ. ಸಂಗೀತಗಾರನು ಸಂಗೀತಕ್ಕಾಗಿಯೇ ಸಂಗೀತ ಹಾಡುವುದಾದರೆ ಕೇಳುಗನು ಹಾಗೆಯೇ ಮಾಡಲಾಗದೇ? ಅದೇ ಗಮ್ಯವನ್ನು ತಲುಪಲಾಗದೇ? ಅನ್ನೋ ಜಿಜ್ನಾಸಾತ್ಮಕ ದೃಷ್ಟಿ ನನ್ನದು. ವಸ್ತು ನಿಷ್ಟ ಅನ್ನುವಾಗ ನನ್ನ ಭಾವನೆ ಹೀಗಿತ್ತು. ನಿರಂತರ ಹರಿಯುವ ನಾದ ಸ್ರೋತ ಅದನ್ನು ಆಸ್ವಾದಿಸುವ ನಾನು ಅಷ್ಟು ಬಿಟ್ಟರೆ ಮತ್ತೇನು ಇರದಂತಹ ಕಲ್ಪನೆ. ಇದು ಸಾಧ್ಯವಾ ? ಅಂದರೆ ನನಗೆ ಗೊತ್ತಿಲ್ಲ. ಆದರೆ ಸತತ ಆ ನಿಟ್ಟಿನಲ್ಲಿ ಪ್ರಯತ್ನವಂತೂ ಸಾಗಿದೆ. ಆ ಪ್ರಯತ್ನದ ಫಲಶ್ರುತಿಯೇ ಈ ಲೇಖನ :)

    ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. :)

    ReplyDelete